ಹೊಸವರ್ಷಕ್ಕೆ ಚಿತ್ರದುರ್ಗದ ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ..!
ಚಿತ್ರದುರ್ಗ, ಡಿಸೆಂಬರ್ 28 : ಮಧ್ಯ ಕರ್ನಾಟಕದ ಪ್ರವಾಸಿ ತಾಣಗಳಲ್ಲಿ ಚಿತ್ರದುರ್ಗ ಐತಿಹಾಸಿಕ ಕಲ್ಲಿನ ಕೋಟೆಯು ಒಂದಾಗಿದೆ. ರಾಜಧಾನಿ ಬೆಂಗಳೂರಿನಿಂದ ಒಂದೇ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಮೂಲಕ ಸುಮಾರು 200 ಕಿಲೋಮೀಟರ್ ದೂರದಲ್ಲಿರುವ ಕೋಟೆ ನಾಡು ಪ್ರವಾಸ ಅಮೋಘವಾಗಿದೆ.
ಈ ಕೋಟೆಯು ಐತಿಹಾಸಿಕ ಮತ್ತು ಧಾರ್ಮಿಕ ಪ್ರವಾಸವನ್ನು ಸ್ಥಳವನ್ನು ಹೊಸ ವರ್ಷ ಭಾನುವಾರ ಬಂದಿರುವುದರಿಂದ ಕುಟುಂಬದ ಸದಸ್ಯರೊಂದಿಗೆ ಪ್ರವಾಸ ಕೈಗೊಳ್ಳಬಹುದಾಗಿದೆ.
ಈ ಕೋಟೆ ಬೃಹತ್ ಕಲ್ಲು ಬಂಡೆಗಳಿಂದ ಸುತ್ತುವರಿದಿದೆ. ಬೆಂಗಳೂರಿನ ವಾಯುವ್ಯ ದಿಕ್ಕಿನಲ್ಲಿರುತ್ತದೆ. ಚಿತ್ರದುರ್ಗವು ಡೆಕ್ಕನ್ ಪ್ರಸ್ತಭೂಮಿಯ ಹೃದಯ ಭಾಗದಲ್ಲಿದ್ದು ಈ ಜಿಲ್ಲೆಯ ಶೌರ್ಯ ಮತ್ತು ಪರಾಕ್ರಮಕ್ಕೆ ಹೆಸರಾಗಿದೆ.

ಚಿತ್ರದುರ್ಗದ ಐತಿಹಾಸಿಕ ಕಥೆ ಏನು..?
ಮೂಲತಃ ಈ ನಗರಕ್ಕೆ ಚಿತ್ರಕಲ್ಲು ದುರ್ಗ, ಚಿನ್ಮೂಲಾದ್ರಿ, ಚಿಂತಲಕಲದುರ್ಗ, ಚಿಂತಲಕಲ್ಲು ದುರ್ಗ ಟಿಪ್ಪುಸುಲ್ತಾನನ ಕಾಲದಲ್ಲಿ ಫರ್ರಶಾಬಾದ್ ಎಂದು ಬ್ರಿಟೀಷರ ಕಾಲದಲ್ಲಿ ಚಿಟಲುಡ್ರಗ್ ಎಂದು ಅಂತಿಮವಾಗಿ ಹಾಲಿ ಚಿತ್ರದುರ್ಗ ಎಂದು ಗುರುತಿಸಿಕೊಂಡಿರುತ್ತದೆ. ಕಥೆಯ ಪ್ರಕಾರ, ಕಲ್ಲಿನ ಕೋಟೆಯು ಒಂದು ಕಾಲದಲ್ಲಿ ರಾಕ್ಷಸ ರಾಜ ಹಿಡಿಂಬ ಮತ್ತು ಆತನ ಸಹೋದರಿ ಹಿಡಿಂಬಿಯ ವಾಸಸ್ಥಾನವಾಗಿತ್ತು. ಪಾಂಡವರಲ್ಲಿ ಒಬ್ಬನಾದ ಭೀಮನು ಚಿತ್ರದುರ್ಗದಲ್ಲಿ ಹಿಡಿಂಬೆಯನ್ನು ಕೊಂದನು ಎನ್ನಲಾಗುತ್ತಿದೆ.

ಚಿತ್ರದುರ್ಗ ಕೋಟೆಯತ್ತ ಪ್ರವಾಸಿಗರ ದಂಡು
ಚಿತ್ರದುರ್ಗದ ಪ್ರವಾಸ ಎಂದಾಕ್ಷಣ ತಟ್ಟನೆ ಹೊಳೆಯುವುದು ನಾಗರಹಾವು ಚಿತ್ರ. ಯಾಕೆಂದರೆ ಈ ಸಿನಿಮಾ ಡಾ.ವಿಷ್ಣುವರ್ಧನ್ ಅವರ ಕೈಹಿಡಿದ ಚಿತ್ರವಾಗಿದೆ. ಭಾರತ ದೇಶದ ಪ್ರಬಲವಾದ ಬೆಟ್ಟದ ಕೋಟೆಗಳಲ್ಲಿ ನಮ್ಮ ದುರ್ಗದ ಕೋಟೆ ಕೂಡ ಒಂದು. ಕೋಟೆಯ ಸಮೀಪದಲ್ಲಿ ಹಿಡಿಂಬೇಶ್ವರನಿಗೆ ಮುಡಿಪಾದ ಒಂದು ದೇವಾಲಯವು ಇದೆ.
ಈ ಕೋಟೆ ಒಂದು ಕಾಲದಲ್ಲಿ 19 ದ್ವಾರಗಳು, 35 ರಹಸ್ಯ ದ್ವಾರಗಳು, 4 ಅದೃಶ್ಯ ಪ್ರವೇಶ ದ್ವಾರಗಳು ಮತ್ತು 38 ಪೋಸ್ಟರ್ನ್ ಗೇಟ್‌ಗಳನ್ನು ಹೊಂದಿದ್ದು. ಆದರೆ ಈಗ ಅದು ಕೆಲವೇ ಕೆಲವು ಅಸ್ತಿತ್ವದಲ್ಲಿದೆ. ಇಲ್ಲಿ ಪ್ರಮುಖವಾಗಿ ಉಯ್ಯಾಲೆ ಕಂಬ, ಓಬವ್ವನ ಕಿಂಡಿ, ಅಕ್ಕ ತಂಗಿ ಹೊಂಡ, ಗೋಪಾಲಸ್ವಾಮಿ ದೇವಸ್ಥಾನ ಈಗೆ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ವಾಣಿವಿಲಾಸ ಜಲಾಶಯದ ವಿಶೇಷತೆ ಏನು..?
ಬೆಂಗಳೂರಿನಿಂದ ಚಿತ್ರದುರ್ಗ ಮಾರ್ಗವಾಗಿ ಎಡಭಾಗಕ್ಕೆ ಅಥವಾ ದಾವಣಗೆರೆಯಿಂದ ಬೆಂಗಳೂರು ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಮೂಲಕ ಬಲ ಭಾಗಕ್ಕೆ ಹೊಸದುರ್ಗ ರಸ್ತೆಯ ಮೂಲಕ ಹಿರಿಯೂರು ನಗರದಿಂದ 18 ಕಿಲೋಮೀಟರ್‌ಗೆ ಐತಿಹಾಸಿಕ ವಾಣಿ ವಿಲಾಸ ಜಲಾಶಯವನ್ನು ನೋಡಬಹುದಾಗಿದೆ. ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಿರಿಯೂರಿನ ತಾಲೂಕಿನ ವಾಣಿವಿಲಾಸ ಪುರ ಗ್ರಾಮದ ಬಳಿ ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಈ ಜಲಾಶಯವಾಗಿದೆ. 89 ವರ್ಷಗಳ ಬಳಿಕ ಈ ಡ್ಯಾಂ ಭರ್ತಿಯಾಗಿ ಕೋಡಿ ಬಿದ್ದು ಇತಿಹಾಸ ಸೃಷ್ಟಿಸಿದೆ. 135 ಅಡಿ ಗರಿಷ್ಠ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದು, ಪ್ರಸ್ತುತ ಜಲಾಶಯದ ನೀರಿನ ಮಟ್ಟ ಸುಮಾರು 130 ಅಡಿ ಇದೆ. ಇದಲ್ಲದೆ ಹಿನ್ನೀರಿನ ಪ್ರದೇಶದಲ್ಲಿ ಹಾರನ ಕಣಿವೆ ರಂಗನಾಥ ಸ್ವಾಮಿಯ ದರ್ಶನ ಕೂಡ ಪಡೆಯಬಹುದು. ಜಲಾಶಯದ ಕೆಳ ಭಾಗದಲ್ಲಿ ಕಣಿವೆ ಮಾರಮ್ಮ ದೇವಸ್ಥಾನವಾಗಿದೆ.

ಹೊಸವರ್ಷಕ್ಕೆ ಚಿತ್ರದುರ್ಗ ಪ್ರವಾಸ
ನಿಮ್ಮ ಆಧ್ಯಾತ್ಮವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಅನೇಕ ಐತಿಹಾಸಿಕ ದೇವಾಲಯಗಳಿಗೆ ಭೇಟಿ ನೀಡಬಹುದು. ಹಿರಿಯೂರು ನಗರದ ದಕ್ಷಿಣ ಕಾಶಿ ಶ್ರೀ ತೇರು ಮಲ್ಲೇಶ್ವರ ದೇವಾಲಯ, ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಕ್ಷೇತ್ರ, ಹೊಳಲ್ಕೆರೆ ಗಣಪತಿ ದೇವಾಲಯ ಸುಂದರವಾದ ಆಲಯಗಳಿವೆ. ಇದಲ್ಲದೆ ಜಿಲ್ಲೆಯ ಸಿರಿಗೆರೆ ಮಠ, ಸಾಣೇಹಳ್ಳಿ ಮಠ , ಚಿತ್ರದುರ್ಗದ ಮುರುಘಾ ಮಠಕ್ಕೆ ಕೂಡ ಭೇಟಿ ನೀಡಬಹುದು.
ಒಟ್ಟಾರೆಯಾಗಿ ಹೊಸವರ್ಷಕ್ಕೆ ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ಪ್ರವಾಸ ಕೈಗೊಳ್ಳುವುದಾದರೆ ಈ ಸ್ಥಳಗಳಿಗೆ ಭೇಟಿ ನೀಡಿ ಒಮ್ಮೆ ಪ್ರವಾಸದ ರಸದೌತಣವನ್ನು ಸೇವಿಯಬಹುದು. ಈ ಪ್ರವಾಸಿ ತಾಣಗಳಿಗೆ ನಿಮ್ಮ ಸ್ವಂತ ವಾಹನಗಳಲ್ಲಿ ಬಂದರೆ ಸಮಯ ಉಳಿಸಬಹುದು. ಇಲ್ಲವಾದರೆ ಖಾಸಗಿ ಹಾಗೂ ಸರ್ಕಾರಿ ಬಸ್ ಸೌಲಭ್ಯವಿದೆ. ನಂತರ ಆಟೋಗಳಲ್ಲಿ ಸ್ಥಳಗಳಿಗೆ ತೆರಳಬಹುದು.












Click it and Unblock the Notifications