ಅಯ್ಯೋ..ಬಾಣಂತಿಯರಿಗೆ ಇದೆಂಥಾ ಶಿಕ್ಷೆ..? ಈ ಊರಲ್ಲಿ ತಾಯಾಗೋದೇ ತಪ್ಪಾ..?
ಚಿತ್ರದುರ್ಗ, ಆಗಸ್ಟ್ 10: ಆಧುನಿಕತೆಯ ಭರಾಟೆಯಲ್ಲಿ ಮೌಢ್ಯತೆಯ ಆಚರಣೆಗಳು ಜೀವಂತವಾಗಿ ಇರುವುದಕ್ಕೆ ಬುಡಕಟ್ಟು ಕಾಡುಗೊಲ್ಲ ಸಮುದಾಯವೇ ಸಾಕ್ಷಿ. ಯಾಕಂದ್ರೆ ಹೆರಿಗೆಯಾದ ಬಾಣಂತಿಯರು ಮತ್ತು ಆಕೆಯ ಎಳೆಯ ಹಸುಗೂಸನ್ನು ಹಟ್ಟಿಯಿಂದ ಹೊರಗೆ ಇಟ್ಟಿರುವ ಘಟನೆ ಕೋಟೆ ನಾಡು ಚಿತ್ರದುರ್ಗದಲ್ಲಿ ಕಂಡು ಬಂದಿದ್ದು ಇದರಿಂದ ಮಕ್ಕಳನ್ನು ಹಡೆಯುವುದು ತಪ್ಪಾ ಎನ್ನುವಂತಾಗಿದೆ.
ಚಿಕ್ಕನಾಯಕನಹಳ್ಳಿ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಸೂರಪ್ಪನಹಟ್ಪಿ ಗ್ರಾಮದಲ್ಲಿ ಬಾಣಂತಿಯರನ್ನು ಸೂತಕದ ಹೆಸರಿನಲ್ಲಿ ಎರಡು ತಿಂಗಳ ಕಾಲ ಮನೆಯಿಂದ ಹೊರಗಡೆ ಇಟ್ಟಿರುವ ಮೌಢ್ಯತೆ ಜೀವಂತವಾಗಿರುವುದು ಕಂಡು ಬಂದಿದೆ.

ಗ್ರಾಮದಲ್ಲಿ ಸುಮಾರು ಐವರು ಹೆರಿಗೆಯಾದ ಬಾಣಂತಿಯರು ಮತ್ತು ಎಳೆಯ ಕಂದಮ್ಮಗಳು ಸೂತಕ ಎಂಬ ಮೌಢ್ಯತೆಯ ಹೆಸರಿನಲ್ಲಿ ಮನೆಯಿಂದ ಹೊರಗಡೆ ಇರಿಸಲಾಗಿದೆ. ಮಳೆ ಗಾಳಿ, ಶೀತ, ಎನ್ನದೇ ಬಾಣಂತಿ ಹಾಗೂ ಆಕೆಯ ಮಗು ಸುಮಾರು ಎರಡು ತಿಂಗಳ ಕಾಲ ಈ ಪುಟ್ಟ ಗುಡಿಸಲಿನಲ್ಲಿ ವಾಸಿಸುತ್ತಿರುವುದು ಇಡೀ ಕಾಡುಗೊಲ್ಲ ಸಮುದಾಯ ಹಾಗೂ ನಾಗರೀಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.
ಬುಡಕಟ್ಟು ಕಾಡುಗೊಲ್ಲ ಜನಾಂಗದವರು ದೇವರನ್ನು ಬಲವಾಗಿ ನಂಬುತ್ತಾರೆ. ದೇವರ ಅಪ್ಪಣೆ ಇಲ್ಲದೆ ಯಾವುದೇ ಕೆಲಸ ಕಾರ್ಯಗಳನ್ನು ಮಾಡುವುದಿಲ್ಲ ಎಂಬುದು ಈ ಜನಾಂಗದ ನಂಬಿಕೆಯಂತೆ.

ಪ್ರಮುಖವಾಗಿ ಚಿತ್ರಲಿಂಗೇಶ್ವರ, ಕ್ಯಾತಲಿಂಗೇಶ್ವರ, ಯತ್ತಪ್ಪ, ಜುಂಜಪ್ಪ, ತಿಮ್ಮಪ್ಪ, ಕರಡಿ ಬುಳ್ಳಪ್ಪ, ಜುಂಜಪ್ಪ ದೇವರುಗಳಿಗೆ ಸೂತಕ ಹಾಗೂ ಮಡಿ ಮೈಲಿಗೆ ಆಗುವುದಿಲ್ಲ ಎಂಬುದು ಇವರ ಗಟ್ಟಿ ನಂಬಿಕೆಯಾಗಿದೆ. ದೇವರುಗಳಿಗೆ ಅಂಟು ಮುಂಟು ಆಗಬಾರದು ಎಂಬ ಮೌಢ್ಯತೆಯ ಹೆಸರಿನಲ್ಲಿ ಋತುಮತಿಯಾದ ಹೆಣ್ಣು ಮಕ್ಕಳು, ಮಹಿಳೆಯರನ್ನು ಐದಾರು ದಿನಗಳ ಕಾಲ ಮನೆಯಿಂದ ಹೊರಗೆ ಪದ್ಧತಿ ಪಾಲಿಸಿಕೊಂಡು ಬಂದಿದ್ದಾರೆ.
ಇವರ ಮೌಢ್ಯತೆಯನ್ನು ಗಮನಿಸಿದರೆ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಬದಲಾಗುವ ಲಕ್ಷಣಗಳು ಕಾಣುತ್ತಿಲ್ಲ. ಯಾಕೆಂದರೆ ಶಿಕ್ಷಣ ಅರಿವಿನ ಕೊರತೆಯಿಂದ ಮೌಡ್ಯತೆಯ ಆಚರಣೆಗೆ ಒಳಪಟ್ಟಿರುವ ಗೊಲ್ಲರಹಟ್ಟಿ ಇಂತಹ ಸೂತಕದ ಹೆಸರಿನ ಆಚರಣೆಗಳ ಗೊಲ್ಲರಹಟ್ಟಿಗಳನ್ನು ಬಿಟ್ಟು ಹೋಗದಂತೆ ಇಂದಿಗೂ ಜೀವಂತವಾಗಿರುವುದಕ್ಕೆ ಈ ಗ್ರಾಮವೇ ಸಾಕ್ಷಿಯಾಗಿದೆ.

ಇನ್ನು ಈ ಮೌಢ್ಯತೆಯನ್ನು ಪಾಲಿಸಿಕೊಂಡು ಬಂದಿರುವ ಗ್ರಾಮಸ್ಥರಿಗೆ ಈ ಸೂತಕದ ಹೆಸರಿನಲ್ಲಿ ನಡೆಸುವ ಪದ್ಧತಿಯನ್ನು ಕೈಬಿಟ್ಟು ಎಲ್ಲರಂತೆ ಬದುಕನ್ನು ಕಟ್ಟಿಕೊಳ್ಳಲು ತಿಳಿ ಹೇಳಲಾಯಿತು. ಇನ್ನು ಗ್ರಾಮಸ್ಥರು ಬದಲಾವಣೆ ಬಯಸುತ್ತೇವೆ ಎಂದಿದ್ದರು. ಆದರೆ ಕೆಲವು ಮಹಿಳೆಯರು ನಮ್ಮ ದೇವರು ಒಳ್ಳೆಯದು ಅಲ್ಲ, ನಾವು ಮನೆಯೊಳಗೆ ಸೇರಿಸುವುದಿಲ್ಲ. ಒಂದು ವೇಳೆ ಸೇರಿಸಿದರೆ ಹಾವು ಬರುತ್ತವೆ ಎಂಬ ಮೂಢನಂಬಿಕೆಗೆ ಕಟು ಬದ್ಧರಾಗಿ ಐವರು ಬಾಣಂತಿಯರನ್ನು ಬೇರೆಡೆಗೆ ಸ್ಥಳಾಂತರಿಸಿದ್ದಾರೆ.
ಇನ್ನು ಗ್ರಾಮದ ಋತುಮತಿಯಾದ ಹೆಣ್ಣು ಮಕ್ಕಳನ್ನು ಊರಿನಿಂದ ಹೊರಗೆ ಇರುವ ಒಂದು ಚಿಕ್ಕ ಕೋಣೆಯಲ್ಲಿ ಇರಿಸಲಾಗಿದೆ. ಈ ಕೋಟೆಗೆ ಯಾವುದೇ ಬೆಳಕಿನ ವ್ಯವಸ್ಥೆ ಏನು ಇಲ್ಲ. ರಾಜ್ಯದ ಬಹುತೇಕ ಗೊಲ್ಲರಹಟ್ಟಿಗಳಲ್ಲಿ ಸೂತಕದ ಮೌಢ್ಯತೆ ಬದಲಾಗಿದ್ದು, ಬೆರಳೆಣಿಕೆಯಷ್ಟು ಗೊಲ್ಲರಹಟ್ಟಿಗಳಲ್ಲಿ ಇಂತಹ ಆಚರಣೆ ಇದೆ. ಇದು ಬದಲಾಗಬೇಕು. ಈ ಆಚರಣೆಯನ್ನು ಬದಲಾವಣೆ ಮಾಡಲು ಸರ್ಕಾರ ಮುಂದಾಗಬೇಕು. ಈ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸುಮಾರು 20 ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ಈ ಸಮುದಾಯಕ್ಕೆ ಮೀಸಲಾತಿ ಅವಶ್ಯಕತೆ ಇದ್ದು, ಮೀಸಲಾತಿ ನೀಡಿದರೇ ಸಮುದಾಯ ಮೌಢ್ಯತೆಯಿಂದ ಹೊರ ಬಂದು ನಾಗರೀಕ ಸಮಾಜದ ಮುನ್ನೆಲೆಗೆ ಬರಲಿದೆ.
ಇತ್ತೀಚೆಗೆ ಅಷ್ಟೇ ತುಮಕೂರು ಜಿಲ್ಲೆಯ ಮಲ್ಲೇನಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಬಾಣಂತಿಯನ್ನು ಊರಿನಿಂದ ಹೊರಗಡೆ ಇಟ್ಟಿದ್ದ ಘಟನೆ ನಡೆದಿತ್ತು. ನಂತರ ಮಗು ಮೃತಪಟ್ಟಿದ್ದ ಘಟನೆ ಕೂಡ ನಡೆಯಿತು. ಈ ಘಟನೆ ನಡೆದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಜಿಲ್ಲಾ ನ್ಯಾಯಾಧೀಶರು, ಆರೋಗ್ಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಸಮುದಾಯ ರಾಜ್ಯ ನಾಯಕರು ಭೇಟಿ ನೀಡಿ ಜಾಗೃತಿ ಮೂಡಿಸಿ ಬಾಣಂತಿಯನ್ನು ಮನೆಯೊಳಗೆ ಸೇರಿಸಿದ್ದರು. ಇಂತಹ ಮೌಡ್ಯತೆಯು ಹಿರಿಯೂರು ತಾಲೂಕಿನ ಸೂರಪ್ಪನಹಟ್ಪಿ ಗ್ರಾಮದಲ್ಲಿ ಬದಲಾಗಬೇಕಿದೆ.












Click it and Unblock the Notifications