2 ತಿಂಗಳು ಊರ ಹೊರಗೆ ಇರ್ಬೇಕು ಬಾಣಂತಿ, ಚಿತ್ರದುರ್ಗ ಜಿಲ್ಲೆಯಲ್ಲಿ ಮೌಢ್ಯಾಚರಣೆಗೆ ಬ್ರೇಕ್ ಹಾಕೋ ತಾಕತ್ ಯಾರಿಗೂ ಇಲ್ವಾ?
ಚಿತ್ರದುರ್ಗ, ಆಗಸ್ಟ್, 28: ಸೂತಕ ಹಾಗೂ ಮೌಢ್ಯತೆಯ ಹೆಸರಿನಲ್ಲಿ ಅಪ್ರಾಪ್ತ ಬಾಣಂತಿಯನ್ನು ಊರಿಂದ ಹೊರಗೆ ಪ್ರತ್ಯೇಕವಾಗಿ ಇರಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಸೂರಪ್ಪನಹಟ್ಪಿಯಲ್ಲಿ ನಡೆದಿದೆ.
ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಸೂರಪ್ಪನಹಟ್ಪಿಯಲ್ಲಿ ಈ ಘಟನೆ ನಡೆದಿದೆ. ಇದಲ್ಲದೆ ಪಕ್ಕದಲ್ಲಿರುವ ಸರಸ್ವತಿಹಟ್ಟಿ ಗ್ರಾಮದಲ್ಲಿ ಮೌಡ್ಯತೆ ಮುಂದುವರಿದ್ದು, ಅಲ್ಲೂ ಸಹ ಬಾಣಂತಿಯರು ಊರಿಂದ ಹೊರಗಿದ್ದಾರೆ. ಇನ್ನು ಈ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಈಗಾಗಲೇ ಒನ್ ಇಂಡಿಯಾ ನ್ಯೂಸ್ ನಲ್ಲಿ " ಅಯ್ಯೋ ಬಾಣಂತಿಯರಿಗೆ ಇದೆಂಥಾ ಶಿಕ್ಷೆ" ಎಂಬ ಶೀರ್ಷಿಕೆ ಅಡಿಯಲ್ಲಿ ವಿಸ್ತೃತ ವರದಿ ಮಾಡಿದ್ದು, ತಾಲೂಕು ಆಡಳಿತ ಗಮನಕ್ಕೆ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಹಿರಿಯೂರಿನ ಸೂರಪ್ಪನಹಟ್ಪಿ ಗ್ರಾಮದಲ್ಲಿ ಕಾಡುಗೊಲ್ಲ ಸಮುದಾಯದವರು ವಾಸಿಸುತ್ತಿದ್ದು, ಇಲ್ಲಿ ಬಹುತೇಕ ಜನರು ಮೌಡ್ಯತೆಯಿಂದ ಹೊರಗುಳಿದ್ದು, ಹೆರಿಗೆಯಾದ ಬಾಣಂತಿ ಹಾಗೂ ಆಕೆಯ ಮಗುವನ್ನು ಎರಡು ತಿಂಗಳುಗಳ ಕಾಲ ಪುಟ್ಟ ಗುಡಿಸಲಿನಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಈ ಗ್ರಾಮದಲ್ಲಿ ಸುಮಾರು ಆರೇಳು ಬಾಣಂತಿಯರು ಊರಿಂದ ಮೂರ್ನಾಲ್ಕು ಕಿಲೋ ಮೀಟರ್ ದೂರದ ಅಡವಿ ಗಿಡದಲ್ಲಿ ಇರಿಸಿದ್ದಾರೆ. ಇವರಿಗೆ ಯಾವುದೇ ರೀತಿಯ ಮೂಲ ಸೌಕರ್ಯ ಇಲ್ಲ. ರಾತ್ರಿ ವೇಳೆ ವಿಷಜಂತು ಹುಳುಗಳ ಮಧ್ಯೆ ಕಾಲ ಕಳೆಯುವ ಸನ್ನಿವೇಶ ನಿರ್ಮಾಣವಾಗಿದೆ.
ಸೂರಪ್ಪನಹಟ್ಪಿ ಗ್ರಾಮದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳಿಗೆ ಮದುವೆ ಮಾಡಿದ್ದು, ಇದೀಗ 16 ವರ್ಷದ ಅಪ್ರಾಪ್ತ ಬಾಲಕಿ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಆಗಸ್ಟ್ 14ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಗ್ರಾಮದ ಲಾವಣ್ಯ (ಹೆಸರು ಬದಲಿಸಲಾಗಿದೆ) 15 ವರ್ಷಕ್ಕೆ ಮದುವೆಯಾಗಿದ್ದು, 16 ವರ್ಷಕ್ಕೆ ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ತಾಯಿಯಾಗಿರುವುದು ಬೆಳಕಿಗೆ ಬಂದಿದೆ. ವಿಪರ್ಯಾಸವೆಂದರೆ ಈ ಅಪ್ರಾಪ್ತ ಬಾಲಕಿ ಬಾಣಂತಿಯರನ್ನು ಊರಿಂದ ಹೊರಗೆ ಇರಿಸಿರುವುದನ್ನು ನೋಡಿದರೆ ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಇಷ್ಟೆಲ್ಲಾ ಬೆಳೆವಣಿಗೆ ಆದರೂ ಸಂಬಂಧಿಕರು ಬಾಣಂತಿಯನ್ನು ಮನೆಯೊಳಗೆ ಸೇರಿಸಿ ಎಂದು ಅಲ್ಲಿನ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರುಗಳಿಗೆ ಹೇಳಿದಂತೆ ತಿಳುವಳಿಕೆ ಹೇಳಿದರೂ ಸಂಬಂಧಿಕರು ಮಾತ್ರ ಕ್ಯಾರೇ ಅಂದಿಲ್ಲ.
ಇನ್ನು ಈ ಗ್ರಾಮದಲ್ಲಿ ನಾಲ್ಕೈದು ಬಾಣಂತಿಯರಿದ್ದು, ಕೆಲವರು ಬಾಣಂತಿಯರನ್ನು ಊರಿನಿಂದ ಮೂರು ಕಿಲೋ ಮೀಟರ್ ದೂರದ ಅಡವಿ ಪ್ರದೇಶದಲ್ಲಿ ಪ್ರತ್ಯೇಕವಾಗಿ ಇರಿಸಿದ್ದಾರೆ. ಒಬ್ಬ ಬಾಣಂತಿಯನ್ನು ಚಿಕ್ಕನಾಯಕನಹಳ್ಳಿ ತಾಲೂಕಿನ ದಸೂಡಿ ಬಳಿ ಇರುವ ಎಮ್ಮೆಕರನಹಟ್ಟಿ ಸಂಬಂಧಿಕರ ಊರಿಗೆ ಕಳುಹಿಸಿರುವ ಮಾಹಿತಿ ತಿಳಿದುಬಂದಿದೆ. (ಅಲ್ಲೂ ಊರಿಂದ ಹೊರಗೆ ಇರಿಸಿದ್ದಾರೆ) ಇಲ್ಲಿ ಯಾವುದೇ ಸೌಕರ್ಯ ಇಲ್ಲ. ಜೊತೆಗೆ ಬಾಣಂತಿಯ ಮಗುವಿಗೆ ಪೌಷ್ಠಿಕ ಚಿಕಿತ್ಸೆ ಕೊಡಿಸುವ ಕೆಲಸವೂ ಆಗಿಲ್ಲ. ಸೂತಕದ ನೆಪದಲ್ಲಿ ಕುಟುಂಬದ ಸದಸ್ಯರು ಮಗುವಿಗೆ ಚಿಕಿತ್ಸೆ ಕೊಡಿಸಲು ಹಿಂದೇಟು ಹಾಕುತ್ತಿದ್ದಾರೆ.
ಈ ಘಟನೆ ಬಗ್ಗೆ ಸಮುದಾಯದ ಮುಖಂಡರೊಬ್ಬರು ಮಾತನಾಡಿ ನಮ್ಮ ಸಮುದಾಯ ಶಿಕ್ಷಣದಿಂದ ತುಂಬಾ ಹಿಂದುಳಿದಿದೆ. ನಮ್ಮ ಹಟ್ಟಿಯಲ್ಲಿ ಶಿಕ್ಷಣದ ಕೊರತೆ ಇದ್ದು, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬೇಕಿದೆ. ಸಮುದಾಯದಲ್ಲಿ ಸೂತಕ ಮತ್ತು ಮೌಢ್ಯತೆಯ ಹೆಸರಿನಲ್ಲಿ ಆಚರಿಸುವ ಪದ್ಧತಿಗಳು ಬದಲಾಗಬೇಕಿದೆ. ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಜೊತೆಗೂಡಿ ನಮ್ಮ ತಾಲೂಕಿನಲ್ಲಿ ಬರುವ ಪ್ರತಿಯೊಂದು ಗೊಲ್ಲರಟ್ಟಿಗಳಿಗೆ ಭೇಟಿ ನೀಡಿ ಅಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಬದಲಾವಣೆ ಬಯಸಬೇಕು ಎಂದರು.
ಕಾಡುಗೊಲ್ಲರ ಮೌಡ್ಯದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಅಧಿಕಾರಿಗಳು ಹಟ್ಟಿಗಳಿಗೆ ತೆರಳಿ ಮೌಢ್ಯತೆ ಆಚರಣೆ ಮಾಡುವವರ ವಿರುದ್ಧ ದೂರು ದಾಖಲಿಸುವ ಮುನ್ನ, ತಾವೇ ಖುದ್ದಾಗಿ ಭೇಟಿ ಮಾಡಿ ಬದಲಾವಣೆ ಬಯಸಿದರೆ ಈ ಸಮುದಾಯ ಮೌಢ್ಯದಿಂದ ಬದಲಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಜೊತೆಗೆ ಸರ್ಕಾರ ಕಾಡುಗೊಲ್ಲ ಜನಾಂಗವನ್ನು ಮುನ್ನೆಲೆಗೆ ತರುವ ಕೆಲಸವಾಗಬೇಕು ಎಂದು ತಿಳಿಸಿದರು.
ಸೂತಕದ ಹೆಸರಿನಲ್ಲಿ ಬಾಣಂತಿಯರು ಮೌಢ್ಯ ಆಚರಣೆ ಬಗ್ಗೆ ಜಿಲ್ಲಾಡಳಿತ ಎಚ್ಚೆತ್ತೊಕೊಳ್ಳುವಂತೆ ಕಾಣುತ್ತಿಲ್ಲ. ಈಗಾಗಲೇ ಇದರ ಬಗ್ಗೆ ಸಾಕಷ್ಟು ವರದಿಯಾಗಿದ್ದು, ತಾಲೂಕಿನ ತಹಶೀಲ್ದಾರ್ ರಾಜೇಶ್ ಕುಮಾರ್ ಗಮನಕ್ಕೆ ತಂದಿದ್ದರೂ ಏನು ಪ್ರಯೋಜನವಾಗಿಲ್ಲ. ಈಗಲಾದರೂ ಸಂಬಂಧಪಟ್ಟ ಜಿಲ್ಲಾಡಳಿತ, ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಸಿಡಿಪಿಒ ಅಧಿಕಾರಿಗಳು ಎಚ್ಚೆತ್ತುಕೊಂಡು ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.












Click it and Unblock the Notifications