ರಾಜಸ್ಥಾನ ವಿಧಾನಸಭೆ ಚುನಾವಣೆ : ಚಿತ್ರದುರ್ಗದಲ್ಲಿ ಬಿಜೆಪಿ ಪ್ರಚಾರ
ಚಿತ್ರದುರ್ಗ, ಅಕ್ಟೋಬರ್ 26 : ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಬಿಜೆಪಿ ಕರ್ನಾಟಕದಲ್ಲಿ ಪ್ರಚಾರ ನಡೆಸುತ್ತಿದೆ. ರಾಜಸ್ಥಾನದ ಶಾಸಕರು ಚಿತ್ರದುರ್ಗದಲ್ಲಿ ಪ್ರಚಾರ ನಡೆಸಿ, ತಪ್ಪದೇ ಮತದಾನ ಮಾಡಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.
ರಾಜಸ್ಥಾನದ 200 ಕ್ಷೇತ್ರಗಳಿಗೆ ಡಿಸೆಂಬರ್ 7ರಂದು ಒಂದು ಹಂತದಲ್ಲಿ ಮತದಾನ ನಡೆಯಲಿದೆ. ಈಗಾಗಲೇ ಚುನವಣಾ ಪ್ರಚಾರ ಬಿರುಸಿನಿಂದ ಸಾಗುತ್ತಿದೆ. ಕರ್ನಾಟಕದಲ್ಲಿಯೂ ರಾಜಸ್ಥಾನದಿಂದ ವಲಸೆ ಬಂದ ಸಾವಿರಾರು ಜನರಿದ್ದಾರೆ.
ಚಿತ್ರದುರ್ಗದ ತೇರಾಪಂಥ್ ಭವನದಲ್ಲಿ ರಾಜಸ್ಥಾನದಿಂದ ಬಂದ ಜನರನ್ನು ಸೇರಿಸಿ ಲುಮಿ ಕ್ಷೇತ್ರದ ಬಿಜೆಪಿ ಶಾಸಕ ಜೋಗರಾಮ್‌ಜೀ ಪಟೇಲ್ ಚುನಾವಣಾ ಪ್ರಚಾರ ನಡೆಸಿದರು. ಡಿಸೆಂಬರ್ 7ರಂದು ತಪ್ಪದೇ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.
'ರಾಜಸ್ಥಾನದಿಂದ ಬಂದಿರುವ ನೀವು ಅಲ್ಲಿರುವ ನಿಮ್ಮ ಸಂಬಂಧಿಕರಿಗೂ ಬಿಜೆಪಿ ಪರವಾಗಿ ಮತದಾನ ಮಾಡುವಂತೆ ತಿಳಿಸಿ, ಸೋಶಿಯಲ್ ಮೀಡಿಯಾಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿ' ಎಂದು ಜೋಗರಾಮ್‌ಜೀ ಪಟೇಲ್ ಕರೆ ನೀಡಿದರು.

180 ಕ್ಷೇತ್ರ ಗೆಲ್ಲುವ ಗುರಿ
'200 ವಿಧಾನಸಭಾ ಕ್ಷೇತ್ರಗಳ ಪೈಕಿ 180ರಲ್ಲಿ ಗೆಲುವು ಸಾಧಿಸಬೇಕು ಎಂಬುದು ಬಿಜೆಪಿಯ ಗುರಿಯಾಗಿದೆ. ಅದಕ್ಕಾಗಿ ರಾಜಸ್ಥಾನದಿಂದ ಹೊರಗಿರುವ ನಿಮ್ಮ ಸಹಕಾರವೂ ಬೇಕು. ಡಿಸೆಂಬರ್ 7ರಂದು ನಡೆಯಲಿರುವ ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ಮತದಾನ ಮಾಡಬೇಕು' ಎಂದು ಜೋಗರಾಮ್‌ಜೀ ಪಟೇಲ್ ಕರೆ ನೀಡಿದರು.

2019ರ ಚುನಾವಣೆ ದಿಕ್ಸೂಚಿ
'ರಾಜಸ್ಥಾನದ ಚುನಾವಣೆ 2019ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ದಿಕ್ಸೂಚಿ. ಬೇರೆ ಪಕ್ಷಗಳಂತೆ ಬಿಜೆಪಿ ಪಕ್ಷವಿಲ್ಲ. ಇದು ಕಾರ್ಯಕರ್ತರ ಪಕ್ಷ. ಟಿಕೆಟ್ ಹಂಚಿಕೆಯನ್ನು ಕಾರ್ಯಕರ್ತರನ್ನೇ ಕೇಳಿ ಮಾಡಲಾಗಿದೆ. ವ್ಯಾಪಾರದ ಸಲುವಾಗಿ ಬೇರೆ ರಾಜ್ಯಕ್ಕೆ ಬಂದಿರುವ ನೀವು ಮತದಾನದ ದಿನದಂದು ಆಗಮಿಸಿ ಮತದಾನ ಮಾಡಬೇಕು. ಬಳ್ಳಾರಿ, ಉತ್ತರ ಕನ್ನಡದಲ್ಲಿಯೂ ಈಗಾಗಲೇ ಸಭೆ ನಡೆಸಲಾಗಿದೆ' ಎಂದು ಜೋಗರಾಮ್‌ಜೀ ಪಟೇಲ್ ಹೇಳಿದರು.

ಮೋದಿ ಅವರನ್ನು ಬೆಂಬಲಿಸಿ
'ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಘನತೆ ಹೆಚ್ಚಿಸುವಂತಹ ಕೆಲಸ ಮಾಡುತ್ತಿದ್ದಾರೆ. ಮುಂದಿನ ಚುನಾವಣೆ ಬಳಿಕವೂ ಅವರೇ ಪ್ರಧಾನಿಯಾಗಿ ಮುಂದುವರೆಯಬೇಕು ಎಂದು ಜನರು ಬಯಸಿದ್ದಾರೆ. ಅದಕ್ಕೆ ಪೂರಕವಾಗಿ ನಾವು ಕೆಲಸ ಮಾಡಬೇಕು. ಆದ್ದರಿಂದ, ರಾಜಸ್ಥಾನದಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು' ಎಂದು ಮನವಿ ಮಾಡಿದರು.

ನಿಮ್ಮ ಸಹಕಾರ ಮುಖ್ಯ
ಚಿತ್ರದುರ್ಗ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರು ಮಾತನಾಡಿ, 'ಹಿಂದಿನ ಸರ್ಕಾರಗಳು ಮಾಡಿದ ತಪ್ಪನ್ನು ಸರಿಪಡಿಸುವ ಕಾರ್ಯವನ್ನು ಮೋದಿ ಅವರು ಕಳೆದ 4 ವರ್ಷಗಳಲ್ಲಿ ಮಾಡುತ್ತಿದ್ದಾರೆ. ದೇಶವನ್ನು ಇನ್ನೂ ಪ್ರಗತಿಯತ್ತ ಕೊಂಡೊಯ್ಯವ ಸಲುವಾಗಿ 2019ರಲ್ಲಿಯೂ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕು. ಅದಕ್ಕೆ ನಿಮ್ಮ ಸಹಕಾರ ಮುಖ್ಯ' ಎಂದರು.












Click it and Unblock the Notifications