ಮುರುಘಾ ಸ್ವಾಮೀಜಿಗೆ ಜಾಮೀನಿಗೆ ಪ್ರಾಸಿಕ್ಯೂಷನ್ ವಿರೋಧ
ಚಿತ್ರದುರ್ಗ, ಅಕ್ಟೋಬರ್ 31; ಪೋಕ್ಸೋ ಪ್ರಕರಣದಲ್ಲಿ ಕಳೆದ 13 ತಿಂಗಳಿಂದಲೂ ಜೈಲಿನಲ್ಲಿರುವ ಮುರುಘಾ ಮಠದ ಶಿವಮೂರ್ತಿ ಸ್ವಾಮೀಗೆ ಸದ್ಯಕ್ಕೆ ಜಾಮೀನು ಸಿಗುವ ಲಕ್ಷಣಗಳಿಲ್ಲ. ಪೊಲೀಸರು ಶರಣರನ್ನು 2022ರ ಸೆಪ್ಟೆಂಬರ್ 1ರಂದು ಬಂಧಿಸಿದ್ದು, ಅಂದಿನಿಂದಲೂ ಅವರು ಚಿತ್ರದುರ್ಗ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಚಿತ್ರದುರ್ಗದ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಸ್ವಾಮೀಜಿ ಮಠದಲ್ಲಿನ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಓದುತ್ತಿದ್ದ ಮೂರು, ನಾಲ್ಕನೇ ತರಗತಿಯ ಬಡ ಮಕ್ಕಳನ್ನು ಲೈಂಗಿಕವಾಗಿ ಶೋಷಿಸಿದ್ದಾರೆ. ಅವರೊಬ್ಬ ಪ್ರಭಾವಿ ವ್ಯಕ್ತಿಯಾಗಿದ್ದು ಅವರಿಗೆ ಜಾಮೀನು ನೀಡಬಾರದು ಎಂದು ಪ್ರಾಸಿಕ್ಯೂಷನ್ ಹೈಕೋರ್ಟ್‌ನಲ್ಲಿ ಮನವಿ ಮಾಡಿತು. ಹಾಗಾಗಿ ನ್ಯಾಯಾಲಯ ಈ ಅಂಶವನ್ನು ಪರಿಗಣಿಸಿದರೆ ಸ್ವಾಮೀಜಿಗೆ ಜಾಮೀನು ಸಿಗುವುದು ಕಷ್ಟವಾಗಬಹುದು.

ಜಾಮೀನು ಕೋರಿ ಶಿವಮೂರ್ತಿ ಶರಣರು ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಮುಂದುವರಿಸಿತು. ಕೆಲ ಕಾಲ ಪ್ರಾಸಿಕ್ಯೂಷನ್ ವಾದ ಆಲಿಸಿದ ಬಳಿಕ ನ್ಯಾಯಾಲಯ ದಿನದ ಕಲಾಪ ಮುಗಿದ ಕಾರಣ ಮಂಗಳವಾರಕ್ಕೆ ವಿಚಾರಣೆ ಮುಂದೂಡಲಾಗಿದೆ.
ಮೇಲ್ನೋಟಕ್ಕೆ ಸಾಬೀತು: ರಾಜ್ಯ ಪ್ರಾಸಿಕ್ಯೂಟರ್ ವಾದ ಮಂಡಿಸಿ, 'ಸಂತ್ರಸ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದೆ ಎಂದು ವೈದ್ಯಕೀಯ ವರದಿ ಹೇಳಿಲ್ಲ. ಇದು ಪೋಕ್ಸೊ ಪ್ರಕರಣವಾದ್ದರಿಂದ ಹಟಸಂಭೋಗ ನಡೆದಿದ್ದರೆ ಮಾತ್ರವೇ ಅಪರಾಧ ಎಂಬುದು ಇಲ್ಲಿ ಪರಿಗಣನಾರ್ಹವಲ್ಲ. ಸ್ವಾಮೀಜಿ ಮಕ್ಕಳನ್ನು ರಾತ್ರಿ ಊಟವಾದ ನಂತರ ತಮ್ಮ ಕೊಠಡಿಗೆ ಕರೆಸಿಕೊಂಡು ಲೈಂಗಿಕವಾಗಿ ಶೋಷಿಸುತ್ತಿದ್ದರು. ಸಂತ್ರಸ್ತ ಬಾಲಕಿಯರ ಖಾಸಗಿ ಅಂಗಾಂಗ ಸ್ಪರ್ಶಿಸುತ್ತಿದ್ದರು ಎಂಬ ಅಂಶಗಳು ಮ್ಯಾಜಿಸ್ಟ್ರೇಟ್ ಮುಂದೆ ಬಾಲಕಿಯರು ನೀಡಿರುವ ತಮ್ಮ ಸ್ವಯಂ ಹೇಳಿಕೆಯಲ್ಲಿ ವ್ಯಕ್ತವಾಗಿವೆ' ಎಂದರು.
ತನಿಖೆಯಲ್ಲಿ ಸ್ವಾಮೀಜಿ ಅಪರಾಧ ಎಸಗಿರುವುದು ಮೇಲ್ನೋಟಕ್ಕೇ ಕಂಡುಬಂದಿದೆ. ಇದೊಂದು ಗಂಭೀರ ಮತ್ತು ಪ್ರಭಾವಿ ವ್ಯಕ್ತಿಯ ವಿರುದ್ಧದ ಕ್ರಿಮಿನಲ್ ಕೇಸು. ಸ್ವಾಮೀಜಿ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ-2012ರ (ಪೋಕ್ಸೊ) ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ವಾದ ಮಂಡಿಸಿದರು.
ನ್ಯಾಯಪೀಠ, 'ದೂರು ನೀಡುವ ಮನ್ನ ಇಬ್ಬರೂ ಸಂತ್ರಸ್ತ ಬಾಲಕಿಯರು ಯಾರೂ ಜೊತೆ ಇಲ್ಲದೆ ಬೆಂಗಳೂರಿಗೆ ಹೇಗೆ ಬರಲು ಸಾಧ್ಯವಾಯಿತು?. ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದಾಗಿದ್ದರೆ ಅವರೇಕೆ ತಮ್ಮ ಹಳ್ಳಿಗಳಿಗೆ ಹೋಗಲಿಲ್ಲ?. ಪೋಷಕರನ್ನು ಏಕೆ ಭೇಟಿ ಮಾಡಲಿಲ್ಲ?. ಮೈಸೂರಿಗೇ ಹೋಗಿ ಒಡನಾಡಿ ಸಂಸ್ಥೆಯ ಮುಖಾಂತರ ಏಕೆ ದೂರು ದಾಖಲಿಸಿದರು?' ಎಂದು ಪ್ರಶ್ನಿಸಿತು.
ಹಿಂದಿನ ವಿಚಾರಣೆ ವೇಳೆ ಮುರುಘಾಮಠದ ಶಿವಮೂರ್ತಿ ಸ್ವಾಮೀಜಿ ಪೋಕ್ಸೊ ಸೇರಿದಂತೆ ವಿವಿಧ ಕಾಯ್ದೆಗಳ ಅಡಿಯಲ್ಲಿ ಕ್ರಿಮಿನಲ್ ಕೇಸ್ ಎದುರಿಸುವಂತಾಗಲು ಮಠದ ಮಾಜಿ ಆಡಳಿತಾಧಿಕಾರಿ ಎಸ್. ಕೆ. ಬಸವರಾಜನ್ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯೂ ಆದ ಅವರ ಪತ್ನಿ ಸೌಭಾಗ್ಯ ಬಸವರಾಜನ್ ದಂಪತಿಯ ಕ್ರಿಮಿನಲ್ ಪಿತೂರಿಯ ಕಾರಣ ಎಂದು ಶಿವಮೂರ್ತಿ ಸ್ವಾಮೀಜಿ ಪರ ವಕೀಲರು ವಾದ ಮಂಡಿಸಿದ್ದರು.












Click it and Unblock the Notifications