ಖಾಸಗಿ ಸುದ್ದಿ ವಾಹಿನಿಯ ಕ್ಯಾಮೆರಾಮನ್ ವಿನಯ್ ನಿಧನ
ಚಿತ್ರದುರ್ಗ, ಡಿಸೆಂಬರ್ 9: ಖಾಸಗಿ ಸುದ್ದಿ ವಾಹಿನಿ ರಾಜ್ ನ್ಯೂಸ್ ಟಿವಿಯ ಕ್ಯಾಮೆರಾಮನ್ ಹಾಗೂ ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ವಿನಯ್ (34) ತೀವ್ರ ಉಸಿರಾಟದ ತೊಂದರೆಯಿಂದ ನಿಧನರಾದರು.
ಕಳೆದ ನವೆಂಬರ್ 29 ರಂದು ವಿವಾಹವಾಗಿದ್ದ ವಿನಯ್, ಚಿತ್ರದುರ್ಗ ತಾಲ್ಲೂಕಿನ ಅನ್ನೇಹಾಳ್ ಗ್ರಾಮದವರು. ಚಿತ್ರದುರ್ಗದ ದವಳಗಿರಿ ಬಡವಾಣೆಯಲ್ಲಿ ವಾಸವಾಗಿದ್ದುಕೊಂಡು ಪ್ರಸ್ತುತ ರಾಜ್ ಟಿವಿ ಕ್ಯಾಮೆರಾಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಈ ಹಿಂದೆ ಉದಯ ಟಿ.ವಿ, ಚಿತ್ರದುರ್ಗ ಸಿಟಿ ಕೇಬಲ್ ಕ್ಯಾಮರಾಮನ್ ಆಗಿ ಕಾರ್ಯನಿರ್ವಹಿಸಿದ್ದರು ಎನ್ನಲಾಗಿದೆ. ನವೆಂಬರ್ ಅಂತ್ಯದಲ್ಲಿ ಮದುವೆಯಾಗಿದ್ದ ವಿನಯ್ ಹತ್ತು ದಿನಗಳ ಬಳಿಕ ಸಾವನ್ನಪ್ಪಿದ್ದಾರೆ.

ಡಿ.9 ಬುಧವಾರ ಬೆಳಗಿನ ಜಾವ ನಿಧನರಾಗಿದ್ದು, ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾತ್ರಿ ನಗರದ ಶ್ರೀ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಸಿಟಿ ಸೆಂಟ್ರಲ್ ಆಸ್ಪತ್ರೆಗೆ ತಡರಾತ್ರಿ ಕಳುಹಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ವಿನಯ್ ಕೊನೆಯುಸಿರೆಳೆದಿದ್ದಾರೆ.

ವಿನಯ್ ನಿಧನಕ್ಕೆ ಚಿತ್ರದುರ್ಗ ಜಿಲ್ಲೆಯ ಪತ್ರಕರ್ತರು, ರಾಜಕಾರಣಿಗಳು, ಅಧಿಕಾರಿಗಳು ಸೇರಿದಂತೆ ಮತ್ತಿತರರು ಕಂಬನಿ ಮಿಡಿದಿದ್ದಾರೆ. ಬುಧವಾರ ಮಧ್ಯಾಹ್ನ ಸ್ವಗ್ರಾಮ ಅನ್ನೇಹಾಳ್ ದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.












Click it and Unblock the Notifications