• search
  • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

"ಶಿರಾ ಉಪಚುನಾವಣೆಗಷ್ಟೇ ಸೀಮಿತವಾಯಿತೇ ಕಾಡುಗೊಲ್ಲ ಅಭಿವೃದ್ಧಿ ನಿಗಮ"

|

ಚಿತ್ರದುರ್ಗ, ನವೆಂಬರ್ 26: ಶಿರಾ ಉಪಚುನಾವಣೆ ಸಂದರ್ಭ ಕರ್ನಾಟಕ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸುವ ಕುರಿತು ಮಾಡಿದ್ದ ಘೋಷಣೆ ಕಾಡುಗೊಲ್ಲರ ಮತಗಳನ್ನು ಸೆಳೆಯುವುದಕ್ಕಷ್ಟೇ ಸೀಮಿತವಾಗಿದೆ ಎಂದು ಜಿಲ್ಲಾ ಪಂಚಾಯತಿ ಸದಸ್ಯ ಸಿ.ಬಿ. ಪಾಪಣ್ಣ ಆರೋಪಿಸಿದ್ದಾರೆ.

ಗುರುವಾರ ಹಿರಿಯೂರಿನ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, "ನಾವು ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಾಡಿ ಎಂದು ಸರ್ಕಾರವನ್ನು ಕೇಳಿರಲಿಲ್ಲ. ಆದರೆ ಸರ್ಕಾರ ಉಪಚುನಾವಣೆಯಲ್ಲಿ ಗೆಲುವು ಪಡೆಯಲು ಕಾಡುಗೊಲ್ಲರ ಮತಗಳನ್ನು ಸೆಳೆಯುವುದಕ್ಕೆ ನಿಗಮ ರಚನೆಯ ಘೋಷಣೆ ಮಾಡಿ ಅದಕ್ಕೆ ಅನುದಾನ ರೂಪಿಸದೆ, ಅಧ್ಯಕ್ಷರನ್ನು ಮಾಡದೆ ಕಾಡುಗೊಲ್ಲ ಸಮಾಜಕ್ಕೆ ಅವಮಾನ ಮಾಡಿದೆ" ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಂಡಳಿ ಮೇಲೆ ಶಿರಾ ಉಪಚುನಾವಣೆ ಗೆಲುವು?

ಮರಾಠಿ ಅಭಿವೃದ್ಧಿ ನಿಗಮ ಮಾಡಿ 50 ಕೋಟಿ ಅನುದಾನ ಹಾಗೂ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ಅನುದಾನ ನೀಡಿ, ಅಧ್ಯಕ್ಷರನ್ನು ನೇಮಕ ಮಾಡಿದೆ. ಇದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಕಾಡುಗೊಲ್ಲ ಅಭಿವೃದ್ಧಿ ನಿಗಮ ಘೋಷಣೆ ಮಾಡಿ ಎರಡು ತಿಂಗಳಾದರೂ ಕಾರ್ಯರೂಪಕ್ಕೆ ಬರದೆ ನನೆಗುದಿಗೆ ಬಿದ್ದಿದೆ. ಇದು ಸರಿಯೇ ಎಂದು ಪ್ರಶ್ನಿಸಿದ್ದಾರೆ.

"ನೀವು ಹೇಳಿದಂತೆ ಕಾಡುಗೊಲ್ಲರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಶಿರಾ ಕ್ಷೇತ್ರದಲ್ಲಿ ಕಾಡುಗೊಲ್ಲರು ಶೇ.70ರಷ್ಟು ಮತ ನೀಡುವ ಮೂಲಕ ಮೊದಲ ಬಾರಿಗೆ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಕಾರಣಕರ್ತರಾಗಿದ್ದಾರೆ. ಆದರೂ ಸರ್ಕಾರಕ್ಕೆ ತಳ ಸಮುದಾಯದ ಬಗ್ಗೆ ಕಾಳಜಿ ಇಲ್ಲ. ಮತ ಪಡೆಯಲು ನಿಗಮ ಮಂಡಳಿ ಘೋಷಿಸಿ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಸಿಎಂ ಬಿಎಸ್ವೈ ಹಾಗೂ ಪುತ್ರ ವಿಜಯೇಂದ್ರ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮತ್ತೊಂದು ಕಡೆ ಕಾಣದ ಕೈಗಳು ಕಾಡುಗೊಲ್ಲ ಅಭಿವೃದ್ಧಿ ನಿಗಮ ತೆಗೆದು ಗೊಲ್ಲ ಅಭಿವೃದ್ಧಿ ನಿಗಮ ಮಾಡಲು ಒಳ ಸಂಚು ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಸರ್ಕಾರ ಯಾವುದೇ ಕಾರಣಕ್ಕೂ ಹೆಸರು ಬದಲಾವಣೆ ಮಾಡದೆ ಕಾಡುಗೊಲ್ಲ ಅಭಿವೃದ್ಧಿ ನಿಗಮ ಎಂದು ಮುಂದುವರಿಸಬೇಕು. ಜೊತೆಗೆ ಸರ್ಕಾರ ಕೂಡಲೇ ಕಾಡುಗೊಲ್ಲರ ನಿಗಮಕ್ಕೆ ಅಧ್ಯಕ್ಷರನ್ನು ಘೋಷಿಸಿ ಸುಮಾರು 100-200 ಕೋಟಿ ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿದ್ದಾರೆ.

ಕೆಪಿಸಿಸಿ ಹಿಂದುಳಿದ ವರ್ಗಗಳ ಸಂಘಟನಾ ಕಾರ್ಯದರ್ಶಿ ಗುಯಿಲಾಳು ನಾಗರಾಜಯ್ಯ ಮಾತನಾಡಿ, ಶಿರಾ ಉಪಚುನಾವಣೆ ನೆಪ ಹೇಳಿ, ಸುಳ್ಳು ಆಶ್ವಾಸನೆ ಕೊಟ್ಟು ನಮ್ಮ ಸಮುದಾಯದಿಂದ ಮತಗಳನ್ನು ಪಡೆದ ಸಿಎಂ ನುಡಿದಂತೆ ನಡೆಯದೆ ಮಾತಿಗೆ ತಪ್ಪಿದ್ದಾರೆ. 25-35 ಜನರನ್ನು ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಆದರೆ ಕಾಡುಗೊಲ್ಲ ಸಮಾಜದವರು ಬಿಜೆಪಿಗೆ ಏನು ಅನ್ಯಾಯ ಮಾಡಿದೆ ಎಂದು ಪ್ರಶ್ನಿಸಿದ್ದಾರೆ.

ಈ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಎಸ್.ಆರ್. ತಿಪ್ಪೇಸ್ವಾಮಿ, ಕಾಡುಗೊಲ್ಲ ತಾಲೂಕು ಅಧ್ಯಕ್ಷ ರಂಗಯ್ಯ, ಯುವ ಮುಖಂಡ ಪ್ರಭು ಯಾದವ್, ವಕೀಲ ಪಿ.ಆರ್. ದಾಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

English summary
"The announcement of setting up Kadugolla Development board during Sira by election was limited to getting kadugolla community votes" said zilla Panchayat member C.B. Papanna
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X