Breaking: ಪೋಕ್ಸೋ ಪ್ರಕರಣ: ಮುರುಘಾ ಶರಣರ ನ್ಯಾಯಾಂಗ ಬಂಧನ ಅ.21ರ ತನಕ ವಿಸ್ತರಣೆ
ಚಿತ್ರದುರ್ಗ, ಅಕ್ಟೋಬರ್ 10: ಮಠದ ವಸತಿನಿಲಯದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಬಂಧಿತರಾಗಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ನ್ಯಾಯಾಂಗ ಬಂಧನದ ಅವಧಿಯನ್ನು ಕೋರ್ಟ್ ಮತ್ತೆ 11 ದಿನಗಳ ಕಾಲ ವಿಸ್ತರಣೆ ಮಾಡಿದೆ.
ಸೋಮವಾರ ಶಿವಮೂರ್ತಿ ಶರಣರ ನ್ಯಾಯಾಂಗ ಬಂಧನ ಅಂತ್ಯವಾಗಿದ್ದರಿಂದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಇದೀಗ ಮತ್ತೆ ಅಕ್ಟೋಬರ್ 21ರ ತನಕ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಣೆ ಮಾಡಿ ಕೋರ್ಟ್ ಆದೇಶ ಹೊರಡಿಸಿದೆ.
ಸೆಪ್ಟೆಂಬರ್ 28ರಂದು ನ್ಯಾಯಾಂಗ ಬಂಧನದ ಅವಧಿ ಮುಕ್ತಾಯಗೊಂಡಿದ್ದರಿಂದ ಇಲ್ಲಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಲಾಗಿತ್ತು. ಅಂದು ಕೂಡ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶರಾದ ಬಿ.ಕೆ. ಕೋಮಲಾ ಆದೇಶಿಸಿದ್ದರು. ಇಂದಾದರೂ ಜಾಮೀನು ಸಿಗಬಹುದು ಎಂದು ಮುರುಘಾ ಶರಣರು ನಿರೀಕ್ಷೆಯಲ್ಲಿದ್ದರು. ಆದರೆ ನ್ಯಾಯಾಂಗ ಬಂಧನ ಮತ್ತೆ ವಿಸ್ತರಣೆಯಾಗಿದ್ದು, ಶರಣರು ಮತ್ತಷ್ಟು ದಿನ ಜೈಲಲ್ಲೆ ಕಳೆಯುವಂತಾಗಿದೆ.

ಮೈಸೂರಿನ ಒಡನಾಡಿ ಸಂಸ್ಥೆಯ ಮೂಲಕ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತ ಬಾಲಕಿಯರು ಮುರುಘಾ ಮಠ ಶಿವಮೂರ್ತಿ ಮುರುಘಾ ಶರಣರ ವಿರುದ್ದ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿದ್ದರು. ಏಳು ದಿನದ ಬಳಿಕ ಮುರುಘಾ ಶ್ರೀಯನ್ನು ಪೊಲೀಸರು ಬಂಧಿಸಿದ್ದರು.
ವಾರ್ಡನ್ ರಶ್ಮಿಗೂ ಜೈಲೇ ಗತಿ
ಪ್ರಕರಣದ ಎರಡನೇ ಆರೋಪಿ ಹಾಸ್ಟೆಲ್‌ನ ಮಹಿಳಾ ವಾರ್ಡನ್ ರಶ್ಮಿ ನ್ಯಾಯಾಂಗ ಬಂಧನ ಅವಧಿ ಕೂಡ ಅಂತ್ಯವಾಗಿತ್ತು. ಅವರನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅವರನ್ನು ಕೂಡ ಅಕ್ಟೋಬರ್ 21ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶ ನೀಡಿದೆ.
ನೂತನ ಪೀಠಾಧಿಪತಿ ನೇಮಕಕ್ಕೆ ಒತ್ತಾಯ
ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶಿವಮೂರ್ತಿ ಶರಣರ ನ್ಯಾಯಾಂಗ ಬಂಧನದಲ್ಲಿ ಇರುವುದರಿಂದ ಮುರುಘಾ ಮಠದ ದೈನಂದಿನ ಧಾರ್ಮಿಕ ಕಾರ್ಯಗಳನ್ನು ಹಾಗೂ ಆಡಳಿತಾತ್ಮಕ ಚಟುವಟಿಕೆಗಳನ್ನು ಮುಂದುವರಿಸಕೊಂಡು ಹೋಗುವುದಕ್ಕೆ ನೂತನ ಸ್ವಾಮೀಜಿ ನೇಮಕ ಮಾಡಬೇಕೆಂದು ಲಿಂಗಾಯತ ಸಮಾಜದ ಕೆಲ ಮುಖಂಡರು ತೀರ್ಮಾನ ತೆಗೆದುಕೊಂಡಿದ್ದಾರೆ.
ಮುರುಘಾ ಮಠದ ಪರಂಪರೆ, ಸಂಸ್ಕೃತಿ ಉಳಿಯಬೇಕಾದರೆ ಮಠಕ್ಕೆ ಹೊಸ ಸ್ವಾಮೀಜಿ ನೇಮಕ ಆಗಬೇಕು. ಇದರ ಜೊತೆಗೆ ಮಠದಲ್ಲಿ ಈಗಿರುವ ಸಮಿತಿಗಳು ರದ್ದಾಗಬೇಕು. ಮುರುಘಾ ಶರಣರು ಕೂಡಲೇ ಪೀಠತ್ಯಾಗ ಮಾಡಬೇಕು. ಇಲ್ಲವಾದರೆ ಅವರನ್ನು ಪೀಠದಿಂದ ವಜಾ ಮಾಡಬೇಕು. ಈ ಕುರಿತು ರಾಜ್ಯ ಸರಕಾರ ಮಧ್ಯಪ್ರವೇಶ ಮಾಡಬೇಕು ಎಂಬುದು ಅವರ ಆಗ್ರಹವಾಗಿದೆ.












Click it and Unblock the Notifications