ಸಂಪುಟ ವಿಸ್ತರಣೆ, ಪುನಾರಚನೆ ಕುರಿತು ಶ್ರೀರಾಮುಲು ಹೇಳುವುದೇನು?
ಚಿತ್ರದುರ್ಗ, ನವೆಂಬರ್ 28: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆಗಳು ಸಾಗುತ್ತಿವೆ. ಈ ನಡುವೆ, ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ಬಗ್ಗೆ ಸಿಎಂ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪಕ್ಷದ ರಾಷ್ಟ್ರೀಯ ನಾಯಕರ ಜತೆ ಈ ಕುರಿತು ಚರ್ಚೆ ನಡೆದಿದೆ ಹಾಗೂ ದೆಹಲಿಗೆ ಹೋಗಿ ಸಿಎಂ ಬಿಎಸ್ವೈ ವಾಪಸ್ ಬಂದಿದ್ದಾರೆ. ಸಿಎಂ ಎಲ್ಲರನ್ನೂ ಸಮಾಧಾನಪಡಿಸಿಕೊಂಡು ಕೆಲಸ ಮಾಡುತ್ತಿದ್ದಾರೆ" ಎಂದು ಪ್ರತಿಕ್ರಿಯಿಸಿದರು.
ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ರಾಜ್ಯ ಬಿಜೆಪಿ ಸಂಸದರ ಮಹತ್ವದ ಸಭೆ ಅಂತ್ಯ!
ಇದೇ ಸಂದರ್ಭ, ಸಿಎಂ ಬಿ.ಎಸ್.ಯಡಿಯೂರಪ್ಪ ಬದಲಾವಣೆ ವಿಚಾರವಾಗಿ ಮಾತನಾಡಿ, "ಬದಲಾವಣೆ ಕುರಿತ ತೀರ್ಮಾನವನ್ನು ರಾಷ್ಟ್ರೀಯ ನಾಯಕರು ತೆಗೆದುಕೊಳ್ಳಬೇಕಾಗುತ್ತದೆ. ಪಕ್ಷದ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ" ಎಂದರು.
"ಕೊರೊನಾ ಸಂದರ್ಭದಲ್ಲೂ ನಮ್ಮ ಸರ್ಕಾರ ಪರಿಸ್ಥಿತಿಯನ್ನು ಸರಿದೂಗಿಸಿಕೊಂಡು ಸಾಗಿದೆ. ಆಡಳಿತಾತ್ಮಕ ದೃಷ್ಟಿಯಿಂದಷ್ಟೇ ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಲಾಗಿದೆ. ಸಿಎಂ ಬಿಎಸ್ ವೈ ಅವರು ಸೋಮಶೇಖರ್ ಅವರ ಮನವೊಲಿಸಿದ್ದಾರೆ. ಇದರಲ್ಲಿ ರಾಜಕೀಯವಾಗಿ ಯಾವುದೇ ಉದ್ದೇಶವಿಲ್ಲ" ಎಂದು ಹೇಳಿದರು.
ಬಳ್ಳಾರಿಗೆ ಮೊಳಕಾಲ್ಮೂರು ತಾಲೂಕು ಸೇರ್ಪಡೆ ವಿಚಾರವಾಗಿ ಮಾತನಾಡಿದ ಸಚಿವರು, ಮೊಳಕಾಲ್ಮೂರು ತಾಲೂಕಿನಲ್ಲಿ ಇದರ ಬಗ್ಗೆ ಹೋರಾಟ ನಡೆದಿದೆ.
ಹಿಂದುಳಿದ ಮೊಳಕಾಲ್ಮೂರಿಗೆ 371 ಜೆ ಸೌಲಭ್ಯ ಅಗತ್ಯವಿದೆ. ಬಳ್ಳಾರಿ ಸೇರ್ಪಡೆ ವಿಚಾರದ ಕುರಿತು ಸರ್ಕಾರ ನಿರ್ಧರಿಸಲಿದೆ ಎಂದು ತಿಳಿಸಿದರು.