ಸಾಮೂಹಿಕ ವಿವಾಹದಲ್ಲಿ ಸಚಿವರ ಪುತ್ರಿ ಮದುವೆ!
ಚಿತ್ರದುರ್ಗ, ನ. 17 : ಬುಧವಾರ ಹೊಳಲ್ಕೆರೆಯಲ್ಲಿ ನಡೆಯಲಿರುವ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರ ಹಿರಿಯ ಪುತ್ರಿ ಅನುಪಮಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಾಹ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು, ಹೊಳಲ್ಕೆರೆಯ ಕೊಟ್ರ ನಂಜಪ್ಪ ಕಾಲೇಜು ಮೈದಾನದಲ್ಲಿ ಬುಧವಾರ ಸಾಮೂಹಿಕ ವಿವಾಹ ಮಹೋತ್ಸವ ನಡೆಯಲಿದ್ದು, 97 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಿದರು.

ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿಯವರ 97ನೇ ಜನ್ಮದಿನದ ಅಂಗವಾಗಿ ಸಾಮೂಹಿಕ ವಿವಾಹ ನಡೆಯಲಿದೆ. ಎಚ್.ಆಂಜನೇಯ ಸಮಾಜ ಸೇವಾ ಪ್ರತಿಷ್ಠಾನದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈವರೆಗೆ 7 ಅಂತರ್ಜಾತೀಯ ಹಾಗೂ ಇಬ್ಬರು ಮುಸ್ಲಿಂ ಜೋಡಿ ಸೇರಿದಂತೆ ಒಟ್ಟೂ 99 ಜೋಡಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದರು. [ಮದುವೆ ಪ್ರಮಾಣ ಪತ್ರ ಪಡೆಯುವುದು ಹೇಗೆ?]
ಒಟ್ಟು 97 ವಿವಾಹ ನಡೆಸಲು ಮಾತ್ರ ಉದ್ದೇಶಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಾಹ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದು ಆಂಜನೇಯ ಅವರು ತಿಳಿಸಿದರು. ಮೊದಲಿಗೆ 96 ಜೋಡಿಗಳ ಮದುವೆ ನಡೆಯಲಿದೆ. ನಂತರ, 97ನೇ ಜೋಡಿಯಾಗಿ ನನ್ನ ಹಿರಿಯ ಪುತ್ರಿಯ ವಿವಾಹ ನಡೆಯಲಿದೆ ಎಂದು ಸಚಿವರು ಹೇಳಿದರು.
ಎಚ್. ಆಂಜನೇಯ ಅವರ ಪುತ್ರಿ ಎ.ವಿ.ಅನುಪಮಾ ಹಾಗೂ ಅರಸೀಕೆರೆ ತಾಲೂಕಿನ ನಾಗವೇದಿ ಗ್ರಾಮದ ಎಸ್.ಶಾಶ್ವತ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಎಂಬಿಎ ಮುಗಿಸಿರುವ ಶಾಶ್ವತ್ ಬೆಂಗಳೂರಿನಲ್ಲಿರುವ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

ನಾನು ಬಡತನದಲ್ಲಿ ಬೆಳೆದವನು ನಮ್ಮ ಸಂಬಂಧಿಕರು ಮದುವೆ ಮಾಡಲು ಕಷ್ಟಪಡುವುದನ್ನು ನೋಡಿದ್ದೇನೆ. ಇತರರಿಗೆ ಮಾದರಿಯಾಗಲಿ ಎಂಬ ಕಾರಣಕ್ಕಾಗಿ ಸಾಮೂಹಿಕ ವಿವಾಹದಲ್ಲಿ ಮಗಳ ಮದುವೆ ಮಾಡಲು ನಿರ್ಧರಿಸಿದ್ದು, ಇದಕ್ಕೆ ಎರಡೂ ಕುಟುಂಬದ ಎಲ್ಲರೂ ಒಪ್ಪಿಗೆ ನೀಡಿದ್ದಾರೆ ಎಂದು ಸಚಿವರು ಹೇಳಿದರು.
ಹಸು ತವರಿನ ಉಡುಗೊರೆ : ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ಎಲ್ಲಾ ಜೋಡಿಗಳಿಗೆ ತವರಿನ ಉಡುಗೊರೆಯಾಗಿ ಹಸುವನ್ನು ನೀಡಲಾಗುತ್ತದೆ.












Click it and Unblock the Notifications