ಕಾಂಗ್ರೆಸ್‌ನವರು ಅಧಿಕಾರಕ್ಕಾಗಿ ದೇಶದ್ರೋಹಿಗಳ ರಕ್ಷಣೆ ಮಾಡುತ್ತಿದ್ದಾರೆ-ಬಿ.ಸಿ ಪಾಟೀಲ್
ಚಿತ್ರದುರ್ಗ, ಡಿಸೆಂಬರ್ 17: ಬಿಜೆಪಿ ಸರ್ಕಾರ ತಮ್ಮ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಕುಕ್ಕರ್ ಬ್ಲಾಸ್ಟ್ ಪ್ರಕರಣವನ್ನು ದೊಡ್ಡದಾಗಿ ಮಾಡಿದರು ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆಗೆ ಕೃಷಿ ಸಚಿವ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ ಪಾಟೀಲ್ ತಿರುಗೇಟು ನೀಡಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರದ ಮೂಲ ಕರ್ತೃಗಳು ಕಾಂಗ್ರೆಸ್ ನಾಯಕರು. ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ತವರು ಮನೆ. ಇನ್ನು ಕಾಂಗ್ರೆಸ್‌ನವರು ಅಧಿಕಾರಕ್ಕಾಗಿ ದೇಶದ್ರೋಹಿಗಳ ರಕ್ಷಣೆ ಮಾಡುತ್ತಿದ್ದಾರೆ. ಅಧಿಕಾರಕ್ಕಾಗಿ ದೇಶ ಒತ್ತೆಯಿಡಲೂ ಸಿದ್ಧರಾಗಿದ್ದಾರೆ ಎಂದು ಕಿಡಿ ಕಾರಿದರು.
ಮಂಗಳೂರಿನಲ್ಲಿ ಆಕಸ್ಮಿಕವಾಗಿ ಆಟೋದಲ್ಲಿ ಕುಕ್ಕರ್ ಸ್ಫೋಟವಾದ್ದರಿಂದ ದುರಂತ ತಪ್ಪಿದೆ. ಸಾರ್ವಜನಿಕ ಪ್ರದೇಶದಲ್ಲಿ ಸ್ಫೋಟ ಆಗಿದ್ದರೆ ಅದೆಷ್ಟು ಜನರ ಸಾವಾಗುತ್ತಿತ್ತು, ಎಷ್ಟೊಂದು ದೊಡ್ಡ ದುರಂತ ಸಂಭವಿಸುತ್ತಿತ್ತು. ಇಂಥಹ ದೇಶ ದ್ರೋಹಿಗಳನ್ನು ರಕ್ಷಣೆ ಮಾಡುವ ಮಾತು ನಾಚಿಕೆಗೇಡು.ಕಳ್ಳನ ಮನಸು ಹುಳ್ಳಹುಳ್ಳಗೆ ಎಂಬಂತೆ ಕಾಂಗ್ರೆಸ್ ನಾಯಕರ ವರ್ತನೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ಇನ್ನು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ತನಿಖೆಯಲ್ಲಿ ಸಾಕಷ್ಟು ಸಾಕ್ಷಿಗಳು ಪತ್ತೆ ಆಗಿದೆ. ಯಾವ ಸಂಘಟನೆಗಳ ಜೊತೆ ಆರೋಪಿಗೆ ನಂಟಿದೆ ಎಂದು ತಿಳಿದಿದೆ. ಕಾಂಗ್ರೆಸ್‌ನವರು ದೇಶದ್ರೋಹಿ, ಭಯೋತ್ಪಾದಕರ ರಕ್ಷಣೆಗೆ ಇಳಿದಿದ್ದು ನೋವಿನ ಸಂಗತಿ ಎಂದರು.
ಬಿಜೆಪಿ ಎಂಎಲ್‌ಸಿ ಎಚ್.ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ಬಿ.ಸಿ ಪಾಟೀಲ್, ಎಂಎಲ್‌ಸಿ ಎಚ್.ವಿಶ್ವನಾಥ್ ಯಾವಾಗ ಏನು ಹೇಳುತ್ತಾರೋ ಅವರಿಗೆ ಗೊತ್ತಿರಲ್ಲ. ಆಗ ಕೆಟ್ಟ ಸಮ್ಮಿಶ್ರ ಸರ್ಕಾರ ತೆಗೆಯಲು ಬಂದಿದ್ದೇವೆ ಎಂದಿದ್ದರು. ಮತ್ತೆ ಈಗ ದುಡ್ಡಿನ ಆಮಿಷ ಒಡ್ಡಿದ್ದರು ಎಂಬ ಆರೋಪ ಸರಿಯಲ್ಲ ಎಂದು ಹೇಳಿದರು.

ಇನ್ನು ಬಹಳಷ್ಟು ಜನರು ಬಿಜೆಪಿ ಬಾಗಿಲು ತಟ್ಟುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿದೆ. ಸದ್ಯದಲ್ಲೇ ಯಾರು ಯಾರು ಬಿಜೆಪಿ ಸೇರ್ಪಡೆ ಆಗಲಿದ್ದಾರೆ ಎನ್ನುವ ಪಟ್ಟಿ ಹೊರಬೀಳಲಿದೆ. ಎತ್ತು ಏರಿಗೆ ಎಳೆಯಿತು, ಕೋಣ ನೀರಿಗೆಳಿತು ಎಂಬ ಗಾದೆ ಮಾತಿನಂತೆ ಕಾಂಗ್ರೆಸ್ ನಾಯಕರ ಕಥೆಯಾಗಿದೆ. ಈಗಾಗಲೇ ಎತ್ತಿನಗಾಡಿ ಯಾತ್ರೆ, ಸೈಕಲ್ ಯಾತ್ರೆ ವಿಫಲ ಆಗಿವೆ. ಈಗ ಬಸ್ ಯಾತ್ರೆ, ಹೆಲಿಕಾಪ್ಟರ್ ಯಾತ್ರೆ, ಜೋಡೋ ಯಾತ್ರೆ, ತೋಡೋ ಯಾತ್ರೆ, ಕಾಂಗ್ರೆಸ್ ನಾಯಕರಿಗೆ ಮಾಡಲು ಕೆಲಸ ಇಲ್ಲ, ಹಾಗಾಗಿ ಯಾತ್ರೆ ಮಾಡುತ್ತಿದ್ದಾರೆ ಎಂದು ಸಚಿವ ಬಿ.ಸಿ ಪಾಟೀಲ್ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.












Click it and Unblock the Notifications