ಖಾತೆ ಹಂಚಿಕೆ ವಿಚಾರದಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದೇನು?
ಚಿತ್ರದುರ್ಗ, ಆಗಸ್ಟ್ ೦9: "ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದ ಖಾತೆ ಹಂಚಿಕೆ ವಿಚಾರದಲ್ಲಿ ನನಗೆ ಸಮಾಧಾನವೂ ಇಲ್ಲ, ಅಸಮಾಧಾನವೂ ಇಲ್ಲ,'' ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದರು.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶ್ರೀರಾಮುಲು, "ನಮ್ಮ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಜೊತೆಯಲ್ಲಿ ಕೆಲಸ ಮಾಡುತ್ತಿರುವುದೇ ಸಂತೋಷ, ಸಮಾಧಾನ ವಿಚಾರವಾಗಿದೆ. ಯಾವುದೇ ವಿಚಾರ ಬಂದಾಗ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ,'' ಎಂದು ತಿಳಿಸಿದರು.
"ನಾನು ಕಳೆದ 30 ವರ್ಷಗಳಿಂದ ಜನರ ಸೇವೆಗಾಗಿಯೇ ಬದುಕಿದ್ದೇನೆ, ನಾನು ಮುಂಚೆಯಿಂದಲೂ ಖಾತೆ ಬಗ್ಗೆ ಪ್ರಶ್ನೆ ಎತ್ತಿಲ್ಲ. ಸರ್ಕಾರದಲ್ಲಿ ಕೆಲಸ ಮಾಡುವ ಸಮಾಧಾನ ಇದೆ,'' ಎಂದು ಹೇಳಿದರು.

"ನಮ್ಮ ಭಾರತಿಯ ಜನತಾ ಪಾರ್ಟಿಯಲ್ಲಿ ಹೊಸ ಮುಖ್ಯಮಂತ್ರಿ ಆಗಬೇಕು, ತದನಂತರ ಸಂಪುಟದಲ್ಲಿ ಮಂತ್ರಿ ಬದಲಾವಣೆ ಮಾಡಿ, ಯಾರಿಗೆ ಯಾವ ಜವಾಬ್ದಾರಿ ಕೊಡಬೇಕು ಎನ್ನುವ ತೀರ್ಮಾನ ತೆಗೆದುಕೊಂಡಾಗ ಅಸಮಾಧಾನ ಬರುವುದಿಲ್ಲ. ಮುಂದಿನ ದಿನಗಳಲ್ಲಿ ಅಸಮಾಧಾನ ಇರುವುದಿಲ್ಲ. 2023ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರದಂತೆ ತಡೆಯುವುದೇ ನಮ್ಮ ಗುರಿ," ಎಂದು ತಿಳಿಸಿದರು.
"ಸತ್ಯ ಹರಿಶ್ಚಂದ್ರ ಅರಮನೆಯಲ್ಲಿಯೂ, ಸ್ಮಶಾನದಲ್ಲಿಯೂ ಸೈ ಎನಿಸಿಕೊಂಡಿದ್ದನು. ನಾನು ಸತ್ಯ ಹರಿಶ್ಚಂದ್ರನಂತೆ ಕಾಯಾ, ವಾಚ, ಮನಸ್ಸಿನಿಂದ ಕೆಲಸ ಮಾಡುತ್ತೇನೆ, ಅಲ್ಲಿಯೂ ಸೈ ಎನಿಸಿಕೊಂಡಿದ್ದೇನೆ, ಇಲ್ಲಿ ಸ್ಮಶಾನದಲ್ಲಿ(ಸಾರಿಗೆ ಇಲಾಖೆ) ಕೆಲಸ ಮಾಡುತ್ತೇನೆ. ಸಾರಿಗೆ ಇಲಾಖೆಯಲ್ಲಿ ಕೆಲವೊಂದು ಸವಾಲುಗಳು ಇವೆ. ಸಾರಿಗೆ ಇಲಾಖೆ ತುಂಬಾ ನಷ್ಟದಲ್ಲಿ ಇದೆ ಎಂದು ಎಲ್ಲರಿಗೂ ಗೊತ್ತಿದೆ," ಎಂದರು.
"ಸಾರಿಗೆ ಇಲಾಖೆಯನ್ನು ಲಾಭದಾಯಕವಾಗಿ ತೆಗೆದುಕೊಂಡು ಹೋಗುತ್ತೇನೆ ಎನ್ನುವ ಮೂಲಕ ಸಾರಿಗೆ ಖಾತೆ ನೀಡಿರುವುದರ ಕುರಿತು ಶ್ರೀರಾಮುಲು ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದರು. ನನ್ನ ರಾಜಕೀಯ ಜೀವನದಲ್ಲಿ ತುಂಬಾ ಸವಾಲುಗಳು ಬಂದಿವೆ. ಇದನ್ನು ಕೂಡಾ ಸವಾಲಾಗಿ ಸ್ವೀಕರಿಸಿ, ಮುಂದೆ ಇಲಾಖೆಯನ್ನು ಲಾಭದಾಯಕವಾಗಿ ಮಾಡುತ್ತೇನೆ. ನನಗೆ ರಾಜಕಾರಣದಲ್ಲಿ ಯಾವುದೇ ಸವಾಲು ಬಂದರೂ ಸ್ವೀಕರಿಸುತ್ತೇನೆ. ನಮಗೆ ಪಕ್ಷ ಮುಖ್ಯ ನಮ್ಮ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಕೆಲಸ ಮಾಡುವುದು ಸಮಾಧಾನ," ಎಂದರು.

"ಇನ್ಮುಂದೆ ಸಾರಿಗೆ ಇಲಾಖೆಯಿಂದ ಜನ ಸಾಮಾನ್ಯರಿಗೆ ಹೊರೆಯಾಗದಂತೆ ನೋಡಿಕೊಳ್ಳುವೆ. ನಾಳೆ ಸಾರಿಗೆ ಇಲಾಖೆ ಅಧಿಕಾರಿಗಳ ಸಭೆಯನ್ನು ಕರೆದಿದ್ದೇನೆ. ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಾಗುವುದು. ಯಾವುದೇ ರೀತಿಯಲ್ಲಿ ಸಾರಿಗೆ ಇಲಾಖೆಯಿಂದ ಜನರಿಗೆ ತೊಂದರೆ ಮಾಡಲ್ಲ," ಎಂದು ಅಭಿಪ್ರಾಯಪಟ್ಟರು.
"ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ರಾಷ್ಟ್ರೀಯ ಪಕ್ಷದಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ಸ್ಥಾನಮಾನ ಬಂದಾಗ ಸಮಾಧಾನದಿಂದ ಕೆಲಸ ಮಾಡಿದ್ದಾರೆ. ನಮ್ಮ ಪಕ್ಷದಲ್ಲಿ ಇದೆಲ್ಲವೂ ಒಂದು ಪ್ರಕ್ರಿಯೆ. ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ," ಎಂದು ಸಚಿವ ಶ್ರೀರಾಮುಲು ತಿಳಿಸಿದರು.
ಇದಕ್ಕೂ ಮೊದಲು ಚಿತ್ರದುರ್ಗ ಜಿಲ್ಲಾ ಕೋವಿಡ್ ಕುರಿತು ಪ್ರಗತಿ ಪರಿಶೀಲನೆ ಸಭೆಗೆ ನಡೆಸಿದ ಅವರು, "ಮಹಾಮಾರಿ ಕೊರೊನಾ ಮೂರನೇ ಅಲೆಯ ಸವಾಲು ನಮ್ಮ ಮುಂದೆ ಇದೆ. ಹಾಗಾಗಿ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಯಾವ ರೀತಿಯಲ್ಲಿ ಮೂರನೇ ಅಲೆ ಎದುರಿಸಬೇಕು ಎಂಬುದನ್ನು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮಕ್ಕಳ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದಂತೆ ನೋಡಿಕೊಳ್ಳಲು ತಯಾರಿ ಮಾಡಿಕೊಳ್ಳಲಾಗಿದೆ," ಎಂದರು.
"ಚಿತ್ರದುರ್ಗ ಜಿಲ್ಲೆಯ ಸಾಕಷ್ಟು ಜನ ಈಗಾಗಲೇ ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ. ಯಾರು ಲಸಿಕೆ ಹಾಕಿಸಿಕೊಂಡಿಲ್ಲ ಅಂತವರು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಕೊರೊನಾ ಲಸಿಕೆ ಬಗ್ಗೆ ಹಳ್ಳಿ ಕಡೆ ಗೊಂದಲ ಇದ್ದು, ಅದನ್ನು ಜಾಗೃತಿ ಮೂಡಿಸುವ ಮೂಲಕ ಎಲ್ಲರಿಗೂ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮನ ಪರಿವರ್ತನೆ ಮಾಡಲಾಗುವುದು," ಎಂದು ತಿಳಿಸಿದರು.
Recommended Video
ಇನ್ನು ನೆರೆ ಹಾವಳಿ ಕುರಿತು ಮುಂಜಾಗ್ರತೆ ಮುಂಜಾಗ್ರತೆ ವಹಿಸಬೇಕಾಗಿದೆ. ಜನ- ಜಾನುವಾರು ರಕ್ಷಣೆ ಕುರಿತು ಚರ್ಚೆ ನಡೆಯುತ್ತಿದೆ. ರೈತರ ಬೆಳೆ ಹಾನಿ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.












Click it and Unblock the Notifications