ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸ್ ನೇಮಕಾತಿ ಇತಿಹಾಸದಲ್ಲಿ ಪಿಎಸ್‌ಐ ಹಗರಣ ಒಂದು ಕಪ್ಪು ಚುಕ್ಕೆ-ಆರಗ ಜ್ಞಾನೇಂದ್ರ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಡಿಸೆಂಬರ್‌ 14 : ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿ ಅಂತರ್‌ ರಾಷ್ಟ್ರೀಯ ಮಾದರಿಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ ತಾತ್ವಿಕವಾಗಿ ಒಪ್ಪಿಗೆ ನೀಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆಗೆ ಅಗತ್ಯವಾದ ಸ್ಥಳ ನಿಗದಿ ಮಾಡಿ, ಶೀಘ್ರದಲ್ಲೇ ಮತ್ತೊಮ್ಮೆ ಕೇಂದ್ರ ಸರ್ಕಾರದೊಡನೆ ಚರ್ಚಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಪೊಲೀಸ್ ತರಬೇತಿ ಶಾಲೆಯಲ್ಲಿ ಬುಧವಾರ 7ನೇ ತಂಡದ ನಾಗರೀಕ ಪೊಲೀಸ್ ಕಾನ್ಸ್‌ಟೇಬಲ್ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಪೊಲೀಸ್ ಇಲಾಖೆ ದೇಶದಲ್ಲೇ ನಂ.1 ಸ್ಥಾನದಲ್ಲಿದೆ. ಹರಿಯಾಣದಲ್ಲಿ ಜರುಗಿದ ಎಲ್ಲಾ ರಾಜ್ಯಗಳ ಗೃಹ ಸಚಿವರು ಹಾಗೂ ಪೊಲೀಸ್ ಮಹಾನಿರ್ದೇಶಕರ ಸಮ್ಮೇಳನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದ ಪೊಲೀಸರನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ ಎಂದರು.

Karnataka-Maharashtra Border Row : ಗಡಿ ವಿವಾದ; ನಾಳೆ ಅಮಿತ್ ಶಾ ನೇತೃತ್ವದಲ್ಲಿ ಸಂಧಾನ ಸಭೆKarnataka-Maharashtra Border Row : ಗಡಿ ವಿವಾದ; ನಾಳೆ ಅಮಿತ್ ಶಾ ನೇತೃತ್ವದಲ್ಲಿ ಸಂಧಾನ ಸಭೆ

ಇನ್ನು ಪೊಲೀಸರಿಗೆ ನೂತನ ಶಸ್ತ್ರಾಸ್ತ್ರಗಳ ತರಬೇತಿ ನೀಡಲಾಗುವುದು. ಅಪರಾಧಗಳ ಪತ್ತೆಗಾಗಿ 206 ಸೀನ್ ಆಫ್ ಕ್ರೈಮ್ ಅಧಿಕಾರಿಗಳನ್ನು ನೇಮಿಸಲಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್.ಎಸ್.ಎಲ್) ಆಧುನೀಕರಣಕ್ಕೆ ಒತ್ತು ನೀಡಲಾಗಿದೆ. 9 ಸಂಚಾರಿ ಎಫ್.ಎಸ್.ಎಲ್ ಲ್ಯಾಬ್‍ಗಳನ್ನು ಮಾಡಲಾಗಿದೆ ಎಂದು ಹೇಳಿದರು.

ಹುಬ್ಬಳ್ಳಿ, ಬಳ್ಳಾರಿ ನೂತನ ವಿಧಿ ವಿಜ್ಞಾನ ಪ್ರಯೋಗಾಲಯ ಸ್ಥಾಪಿಸಲಾಗಿದೆ

ಹುಬ್ಬಳ್ಳಿ, ಬಳ್ಳಾರಿ ನೂತನ ವಿಧಿ ವಿಜ್ಞಾನ ಪ್ರಯೋಗಾಲಯ ಸ್ಥಾಪಿಸಲಾಗಿದೆ

ಕಳೆದ ಐದಾರು ತಿಂಗಳಲ್ಲಿ ಹುಬ್ಬಳ್ಳಿ ಮತ್ತು ಬಳ್ಳಾರಿ ನೂತನ ವಿಧಿ ವಿಜ್ಞಾನ ಪ್ರಯೋಗಾಲಯ ಸ್ಥಾಪಿಸಲಾಗಿದೆ. ಶಿವಮೊಗ್ಗ ಹಾಗೂ ಹಾಸನದಲ್ಲಿ ಕೂಡ ವಿಧಿ ವಿಜ್ಞಾನ ಪ್ರಯೋಗಾಲಯ ಸ್ಥಾಪನೆ ಮಾಡಲಾಗುವುದು. ಕೇವಲ ನಾಲ್ಕೈದು ತಿಂಗಳೊಳಗೆ ಎಫ್.ಎಸ್.ಎಲ್ ವರದಿ ಬರಬೇಕು. ಇದರಿಂದ ಜಾರ್ಜ್‌ಶೀಟ್‌ ಹಾಕಲು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದರು.

ಸೈಬರ್ ಅಪರಾಧಗಳನ್ನು ತಡೆಯಲು ಹಾಗೂ ಪತ್ತೆಹಚ್ಚಲು ಪೊಲೀಸ್ ಬುನಾದಿ ತರಬೇತಿ ಹಂತದಲ್ಲಿಯೇ ಪಠ್ಯಕ್ರಮ ಅಳವಡಿಸಲಾಗಿದೆ. ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ 1 ಲಕ್ಷ ಪೊಲೀಸ್ ಹುದ್ದೆಗಳ ಪೈಕಿ 35 ಸಾವಿರ ಹುದ್ದೆಗಳು ಖಾಲಿ ಇದ್ದವು. ಪ್ರತಿ ವರ್ಷ ಸರಾಸರಿ 5 ಸಾವಿರ ಪೊಲೀಸ್ ಕಾನ್ಸಟೇಬಲ್ ಹುದ್ದೆಗಳನ್ನು ತುಂಬುತ್ತಾ ಬರಲಾಗಿದೆ. ಸದ್ಯ 12 ಸಾವಿರ ಹುದ್ದೆಗಳು ಖಾಲಿ ಇದ್ದು, ಶೀಘ್ರವಾಗಿ 5 ಸಾವಿರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಆರಗ ಜ್ಞಾನೇಂದ್ರತಿಳಿಸಿದರು.

ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಬಾರದು

ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಬಾರದು

ರಾಜ್ಯದ ಪೊಲೀಸ್ ನೇಮಕಾತಿ ಇತಿಹಾಸದಲ್ಲಿ ಪಿ.ಎಸ್.ಐ ನೇಮಕಾತಿ ಹಗರಣ ಒಂದು ಕಪ್ಪು ಚುಕ್ಕೆಯಾಗಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಹಗರಣದಲ್ಲಿ ಭಾಗಿಯಾದ ಹಲವಾರು ಅಧಿಕಾರಿಗಳನ್ನು ಬಂಧಿಸಿ, ಜೈಲಿಗೆ ಕಳುಹಿಸಲಾಗಿದೆ. ಪೊಲೀಸ್ ನೇಮಕಾತಿ ಹಗರಣದಿಂದ ಸಾರ್ವಜನಿಕರಲ್ಲಿ ಪೊಲೀಸ್ ವ್ಯವಸ್ಥೆ ಬಗ್ಗೆ ಅಪನಂಬಿಕೆ ಉಂಟಾಗುವುದು. ಪೊಲೀಸರು ತಮ್ಮ ನಡವಳಿಕೆಯಿಂದ ಇಲಾಖೆಯ ಘನತೆ ಹೆಚ್ಚಿಸಬೇಕು. ಇದನ್ನು ಬಿಟ್ಟು ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಬಾರದು. ಪ್ರತಿಭೆ ಹಾಗೂ ಅರ್ಹತೆ ಆಧಾರದ ಮೇಲೆ ಇಲಾಖೆಯಲ್ಲಿ ನೇಮಕಾತಿಯಾಗಬೇಕು. ಪ್ರತಿಭಾವಂತ ಬಡ ಮಕ್ಕಳಿಗೆ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ದೊರೆಯಬೇಕು. ಇದನ್ನು ಬಿಟ್ಟು ಹುದ್ದೆಗಳನ್ನು ಶ್ರೀಮಂತರು ಹಣವುಳ್ಳವರು ಖರೀದಿಸುವಂತೆ ಆಗಬಾರದು. ಈ ನಿಟ್ಟಿನಲ್ಲಿ ಪೊಲೀಸ್ ನೇಮಕಾತಿಯಲ್ಲಿ ಹೆಚ್ಚಿನ ಪಾರದರ್ಶಕತೆ ತರಲಾಗುವುದು ಎಂದರು.

ಅಭ್ಯರ್ಥಿಗಳಿಗೆ ಆರಗ ಜ್ಞಾನೇಂದ್ರ ಕಿವಿ ಮಾತು

ಅಭ್ಯರ್ಥಿಗಳಿಗೆ ಆರಗ ಜ್ಞಾನೇಂದ್ರ ಕಿವಿ ಮಾತು

ಪೊಲೀಸ್ ಕಾನ್ಸ್‍ಟೇಬಲ್ ಬುನಾದಿ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ 436 ಅಭ್ಯರ್ಥಿಗಳು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲಿದ್ದಾರೆ. ಇದರಿಂದ ಇಲಾಖೆಗೆ ಹೊಸ ರಕ್ತದ ಯುವ ಪಡೆ ಸೇರ್ಪಡೆಯಾಗಲಿದೆ. ತರಬೇತಿ ಮುಗಿಸಿದವರ ಪೈಕಿ 63 ಇಂಜಿನಿಯರಿಂಗ್ ಪದವಿ , 45 ಸ್ನಾತಕೋತ್ತರ ಪದವಿ, 5 ಬಿ.ಎಡ್ ತರಬೇತಿ, 7 ಡಿಪ್ಲೊಮಾ ಹಾಗೂ 27 ಮಾಜಿ ಸೈನಿಕ ಅಭ್ಯರ್ಥಿಗಳು ಇರುವುದು ವಿಶೇಷವಾಗಿದೆ. ಶಿಸ್ತು ಹಾಗೂ ಕ್ರಮಬದ್ದ ಪಥ ಸಂಚಲನ ಮೂಡಿ ಬಂದಿರುವುದು ಗಮನಿಸಿದರೆ ಉತ್ತಮ ಬುನಾದಿ ತರಬೇತಿ ಲಭಿಸಿರುವುದು ಮನದಟ್ಟಾಗುತ್ತದೆ. ಇಂದು ಸ್ವೀಕರಿಸಿದ ಪ್ರತಿಜ್ಞಾ ವಿಧಿಯಂತೆ ದೇಶ ಹಾಗೂ ರಾಜ್ಯದ ಸೇವೆ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಸೇವೆ ಹಾಗೂ ಸೇವಾ ನಿವೃತ್ತಿ ನಂತರವು ಸಹ ಪ್ರತಿಜ್ಞಾ ವಿಧಿಗೆ ಬದ್ಧವಾಗಿರಿ ಎಂದು ಅಭ್ಯರ್ಥಿಗಳಿಗೆ ಕಿವಿಮಾತು ಹೇಳಿದರು.

ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಸಂಖ್ಯೆ ಹೆಚ್ಚಾಗಿದೆ

ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಸಂಖ್ಯೆ ಹೆಚ್ಚಾಗಿದೆ

ಇನ್ನು ದೇಶದ ಆಂತರಿಕ ಭದ್ರತೆ ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ವದ್ದು. ದೇಶದ ಗಡಿ ರಕ್ಷಣೆಯಲ್ಲಿ ಸೈನಿಕರು ತೊಡಗಿದರೆ, ಸಾರ್ವಜನಿಕರ ರಕ್ಷಣೆಗೆ ಪೋಲೀಸರು ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಪೊಲೀಸ್ ನೌಕರಿಯಲ್ಲಿ ಮನಸ್ಸು ಹಾಗೂ ಮೈ ಒಗ್ಗಿಸಿಕೊಳ್ಳಬೇಕು. ಇಲ್ಲವಾದರೆ ಸೇವೆ ನಿರ್ವಹಿಸುವುದು ಕಷ್ಟ. ಗಡಿಯಲ್ಲಿ ಕೆಲಸ ಮಾಡುವ ಸೈನಿಕರು ಎದುರಾಳಿ ವಿರುದ್ಧ ಹೋರಾಟ ಮಾಡಿ ಪ್ರಾಣ ಹರಣ ಮಾಡುತ್ತಾರೆ. ಇಲ್ಲ ಪ್ರಾಣ ಅರ್ಪಿಸುತ್ತಾರೆ. ಪೊಲೀಸರ ಕೆಲಸ ನಿರ್ವಹಣೆ ಇದಕ್ಕಿಂತ ಭಿನ್ನವಾಗಿದೆ. ಅಪರಾಧಿಗಳನ್ನು ಹಿಡಿದು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು. ಶಿಕ್ಷೆ ನೀಡುವ ಅಧಿಕಾರ ನ್ಯಾಯಾಲಯಕ್ಕೆ ಮಾತ್ರ ಇದೆ. ದೇಶದಲ್ಲಿ ಶೈಕ್ಷಣಿಕೆ ಸಾಕ್ಷರತೆ ಹೆಚ್ಚಾದಂತೆ ವಿಭಿನ್ನ ರೀತಿಯ ಹಾಗೂ ಅಪರಾಧ ಪ್ರಕರಣಗಳು ಸಂಖ್ಯೆ ಹೆಚ್ಚಾಗಿದೆ. ಅಪರಾಧ ಪ್ರಕರಣಗಳು ತಗ್ಗಬೇಕು. ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಎಂದು ಆರಗ ಜ್ಞಾನೇಂದ್ರ ಹೇಳಿದರು.

ಇನ್ನು ಪೊಲೀಸ್ ಇಲಾಖೆಗೆ ಭರ್ತಿಗೊಂಡ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ ಅವರು, ಪೊಲೀಸ್ ಸಿಬ್ಬಂದಿ ನೆಮ್ಮದಿಯಾಗಿ ಇರಬೇಕು. ಪೊಲೀಸ್ ಕುಟುಂಬಗಳಿಗಾಗಿ ಎರಡು ಕೋಣೆಗಳು ಉಳ್ಳ ಸುಸಜ್ಜಿತ 20 ಸಾವಿರ ಪೊಲೀಸ್ ಗೃಹಗಳನ್ನು ನಿರ್ಮಿಸಲಾಗಿದೆ. ರಾಜ್ಯಾದ್ಯಂತ ರೂ. 200 ಕೋಟಿ ವೆಚ್ಚದಲ್ಲಿ 117 ಹೊಸ ಪೊಲೀಸ್ ಠಾಣೆಗಳನ್ನು ನಿರ್ಮಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ 5.5 ರೂಪಾಯಿ ಕೋಟಿ ವೆಚ್ವದಲ್ಲಿ ಪೊಲೀಸ್ ತರಬೇತಿ ಶಾಲೆ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ವಿವಿಧೋದ್ಧೇಶ ಉಪಯುಕ್ತತಾ ಸಂಕೀರ್ಣ ಹಾಗೂ ವಾಹನ ವಿಭಾಗ ಕಟ್ಟಡಗಳನ್ನು ಆರಗ ಜ್ಞಾನೇಂದ್ರ ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಎಂಎಲ್‌ಸಿ ಕೆ.ಎಸ್.ನವೀನ್, ತರಬೇತಿ ವಿಭಾಗದ ಪೊಲೀಸ್ ಮಹಾ ನಿರ್ದೇಶಕ ಡಾ.ಪಿ.ರವೀಂದ್ರನಾಥ, ಪೂರ್ವ ವಲಯ ಡಿ.ಐ.ಜಿ.ಪಿ ಕೆ.ತ್ಯಾಗರಾಜನ್, ಕೆಎಸ್‍ಪಿಹೆಚ್ ಮತ್ತು ಐಡಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅರುಣ ಚಕ್ರವರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರುಶುರಾಮ ಉಪಸ್ಥಿತರಿದ್ದರು.

English summary
Home Minister Araga jnanendra Reaction about PSI Scam at Chitradurga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X