ಎಐಸಿಸಿ ಚುನಾವಣೆಯಲ್ಲಿ ಖರ್ಗೆ ಗೆಲುವು ಕನ್ನಡಿಗರ ಹಿರಿಮೆ ಹೆಚ್ಚಿಸಿದೆ: ಎಚ್. ಆಂಜನೇಯ
ಚಿತ್ರದುರ್ಗ, ಅಕ್ಟೋಬರ್ 19 : ಕನ್ನಡಿಗ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಭಾರಿ ಬಹುಮತಗಳ ಅಂತರದಿಂದ ಗೆಲುವು ಸಾಧಿಸಿರುವುದು ಕನ್ನಡಿಗರ ಹಿರಿಮೆ ಹೆಚ್ಚಿಸಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಎಚ್.ಆಂಜನೇಯ ಅಭಿಪ್ರಾಯಪಟ್ಟರು.
ರಾಷ್ಟ್ರನಾಯಕ, ಚಿತ್ರದುರ್ಗ ಜಿಲ್ಲೆಯವರೇ ಆದ ಎಸ್.ನಿಜಲಿಂಗಪ್ಪ ಬಳಿಕ ಜಗತ್ತಿನಲ್ಲಿ ದೊಡ್ಡ ಇತಿಹಾಸ, ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ ಹೊಂದಿರುವ ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ಕರ್ನಾಟಕ ರಾಜ್ಯಕ್ಕೆ ಲಭಿಸಿರುವುದು ಕನ್ನಡಿಗರಿಗೆ ಹೆಮ್ಮೆ ವಿಷಯ ಆಗಿದೆ ಎಂದು ಪ್ರಕಟಣೆಯಲ್ಲಿ ಸಂತಸ ಹಂಚಿಕೊಂಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಕನ್ನಡಿಗರ ಹೆಮ್ಮೆ: ರಾಜ್ಯ ಕಾಂಗ್ರೆಸ್ ನಾಯಕರ ಶುಭಾಶಯ
ಶಾಸಕರು, ಸಂಸದರು ಹಾಗೂ ರಾಜ್ಯ, ಕೇಂದ್ರ ಸರ್ಕಾರದಲ್ಲಿ ಮಂತ್ರಿಗಳಾಗಿ ದಶಕಗಳ ಕಾಲ ಆಡಳಿತ ನಡೆಸಿದ ಹಾಗೂ ವಿಧಾನಸಭೆ, ಲೋಕಸಭೆ, ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿ, ವಿರೋಧ ಪಕ್ಷಗಳ ನಾಯಕರಿಂದಲೂ ಮೆಚ್ಚುಗೆ ಗಳಿಸಿರುವ ಮಲ್ಲಿಕಾರ್ಜುನ ಖರ್ಗೆ, ಕಾರ್ಮಿಕ ಇಲಾಖೆ ಕೇಂದ್ರ ಸಚಿವರಾಗಿದ್ದ ವೇಳೆ ಕಾರ್ಮಿಕರ ಹಿತಕ್ಕಾಗಿ ಮಾಡಿದ ಯೋಜನೆಗಳು ಅದ್ವಿತೀಯವಾಗಿವೆ. ಜೊತೆಗೆ ಹೈದರಾಬಾದ್ ಕರ್ನಾಟಕಕ್ಕೆ 371 ಜೆ ವಿಶೇಷ ಸೌಲಭ್ಯ, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಕೇಂದ್ರದಿಂದ ಅನುದಾನದ ಸುರಿಮಳೆಯನ್ನೇ ಕೇಂದ್ರ ಸುರಿಸುವಂತೆ ಮಾಡಿದವರಲ್ಲಿ ಖರ್ಗೆ ಪ್ರಮುಖರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ತೀವ್ರ ಕುತೂಹಲ ಕೆರಳಿಸಿದ್ದ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರು ಇಬ್ಬರು, ಪ್ರಜಾಪ್ರಭುತ್ವದ ತಳಹದಿಯಲ್ಲಿ ಚುನಾವಣೆ ಎದುರಿಸಿ, ಇದರಲ್ಲಿ ಕರ್ನಾಟಕ ರಾಜ್ಯದ ಖರ್ಗೆ ಬಹುಮತಗಳ ಅಂತರದಿಂದ ಗೆಲುವು ಸಾಧಿಸಿರುವುದು ರಾಜ್ಯ, ರಾಷ್ಟ್ರ ರಾಜಕಾಣದಲ್ಲಿ ಬದಲಾವಣೆ ಮುನ್ಸೂಚನೆಗೆ ಮುನ್ನುಡಿ ಬರೆದಿದೆ.
ಉತ್ತರ ಭಾರತದವರೇ ಹೆಚ್ಚಾಗಿ ರಾಷ್ಟ್ರರಾಜಕಾರಣದಲ್ಲಿ ಮಿಂಚುವ ಸಂದರ್ಭ, ಎಐಸಿಸಿ ಅಧ್ಯಕ್ಷರಾಗಿ ಎಸ್.ನಿಜಲಿಂಗಪ್ಪ, ಪ್ರಧಾನಮಂತ್ರಿಯಾಗಿ ಎಚ್.ಡಿ.ದೇವೇಗೌಡರ ಬಳಿಕ ಅತ್ಯುನ್ನತ ಎಐಸಿಸಿ ಅಧ್ಯಕ್ಷ ಸ್ಥಾನವನ್ನು ಖರ್ಗೆ ಅಲಂಕರಿಸುತ್ತಿರುವ ಅತ್ಯಂತ ಖುಷಿಕರ ವಿಷಯ ಎಂದು ತಿಳಿಸಿದ್ದಾರೆ.
ಮೊದಲು ದೇಶ, ನಂತರ ಪಕ್ಷ, ಬಳಿಕ ರಾಜಕಾರಣ, ಇದೆಲ್ಲದರ ನಂತರ ವೈಯಕ್ತಿಕ ಹಿತಾಸಕ್ತಿ ಎಂಬ ಸಿದ್ಧಾಂತದಲ್ಲಿ 50 ವರ್ಷ ಸುದೀರ್ಘ ರಾಜಕಾರಣ ಮಾಡಿದ ಖರ್ಗೆ ಅವರಿಂದ ರಾಜ್ಯಕ್ಕೆ ಈಗಾಗಲೇ ಅಪಾರ ಕೊಡುಗೆ ಲಭಿಸಿದ್ದು, ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಈ ಸಂದರ್ಭ ಖರ್ಗೆ ಅವರಿಂದ ಇನ್ನೂ ಹೆಚ್ಚು ಯೋಜನೆಗಳು ರಾಜ್ಯಕ್ಕೆ ಲಭಿಸುವ ಸಾಧ್ಯತೆ ಹೆಚ್ಚು ಇದೆ. ನಮ್ಮಂತಹ ಅನೇಕರ ಬೆಳವಣಿಗೆಯಲ್ಲಿ ಆಸ್ಕರ್ ಫರ್ನಾಂಡೀಸ್, ಮಲ್ಲಿಕಾರ್ಜುನ ಖರ್ಗೆ ಅವರ ಸಹಕಾರ ಅಪಾರವಾಗಿದ್ದು, ಪ್ರಸ್ತುತ ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದರಿಂದ ಪಕ್ಷನಿಷ್ಠ ನಮ್ಮಂತಹ ಅನೇಕರಿಗೆ ಸಂತಸ ತಂದಿದೆ.'

ಮುಂದಿನ ದಿನಗಳಲ್ಲಿ ಇವರ ನಾಯಕತ್ವದಲ್ಲಿ ಪಕ್ಷ ಬಲಿಷ್ಠಗೊಳ್ಳಲಿದ್ದು, ಸರ್ವ ಸಮುದಾಯದವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವ ಹಾಗೂ ಸಂಸತ್‌ನಲ್ಲಿ ಜನವಿರೋಧಿ ನೀತಿಗಳಿಗೆ ಕಡಿವಾಣ ಹಾಕಲು ಸಹಕಾರಿ ಆಗಲಿದೆ ಎಂದು ಆಂಜನೇಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.