ಮತ ಎಣಿಕೆಗೆ ಕೌಂಟ್‌ಡೌನ್: ಚಿತ್ರದುರ್ಗದಲ್ಲಿ ಸಿದ್ಧತೆ ಹೇಗಿದೆ ಗೊತ್ತಾ?
ಚಿತ್ರದುರ್ಗ, ಜೂನ್, 03: ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 26ರಂದು ಮತದಾನ ನಡೆದಿದ್ದು, ಫಲಿತಾಂಶಕ್ಕೆ ಇನ್ನು ಕೆಲವೇ ಕ್ಷಣಗಳು ಮಾತ್ರ ಬಾಕಿಯಿವೆ. ಹಾಗಾದರೆ ಈ ಕ್ಷೇತ್ರದಲ್ಲಿ ಯಾವ ಪಕ್ಷದ ಅಭ್ಯರ್ಥಿಗೆ ಗೆಲುವಿನ ವರ್ಚಸ್ಸು ಹೆಚ್ಚಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಅಭ್ಯರ್ಥಿಗಳ ಚಿತ್ತ ಫಲಿತಾಂಶದತ್ತ ನೆಟ್ಟಿದೆ. ಇತ್ತ ಕೋಟೆ ನಾಡು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಯ ಮತಎಣಿಕೆಯು ಜೂನ್ 04ರ ಬೆಳಗ್ಗೆ 7ರಿಂದ ನಗರದ ಬಿ.ಡಿ.ರಸ್ತೆಯ ಸರ್ಕಾರಿ ವಿಜ್ಞಾನ ಕಾಲೇಜಿನ ನೂತನ ಕಟ್ಟಡದಲ್ಲಿ ನಡೆಯಲಿದ್ದು, ಈ ಮತ ಎಣಿಕೆ ಕಾರ್ಯ ಸುಗಮವಾಗಿ ನಡೆಯಲು ಜಿಲ್ಲಾಡಳಿತ ಅಗತ್ಯ ಸಿದ್ದತೆಗಳನ್ನು ಕೈಗೊಂಡಿದೆ.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಮತಎಣಿಕೆ ನಡೆಯಲಿದೆ. ಉಮೇದುವಾರರು ಮತಎಣಿಕೆ ಕಾರ್ಯಕ್ಕೆ ಸುಮಾರು 125 ಮಂದಿ ಏಜೆಂಟರನ್ನು ನೇಮಿಸಿಕೊಳ್ಳಲು ಸೂಚಿಸಲಾಗಿದೆ. ಏಜೆಂಟರುಗಳು ಪೆನ್ನು ಮತ್ತು ಬಿಳಿ ಹಾಳೆಯ ಹೊರತಾಗಿ ಮೊಬೈಲ್ ಸೇರಿದಂತೆ ಬೇರೆ ಯಾವುದೇ ರೀತಿಯ ವಿದ್ಯುನ್ಮಾನ ಯಂತ್ರಗಳು, ನೀರಿನ ಬಾಟಲಿ, ಇನ್ನಿತರ ವಸ್ತುಗಳು, ಮುಂತಾದವು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ.
ಏಜೆಂಟರು ತಮಗೆ ನಿಗಧಿಪಡಿಸಿದ ಟೇಬಲ್ ಮತ್ತು ಕ್ಷೇತ್ರಕ್ಕೆ ನಿಗಧಿಪಡಿಸಿರುವ ಕೌಂಟಿಂಗ್ ಕೊಠಡಿಯನ್ನು ಬಿಟ್ಟು ಬೇರೆ ಕಡೆಗೆ ಹೋಗುವುದನ್ನು ನಿಷೇಧಿಸಲಾಗಿದೆ.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಟೇಬಲ್‍ಗಳನ್ನು ಹಾಗೂ ಅಂಚೆ ಮತಪತ್ರಗಳ ಎಣಿಕೆಗೆ ಒಟ್ಟು 12 ಟೇಬಲ್‍ಗಳನ್ನು ನಿಗಧಿಪಡಿಸಲಾಗಿದೆ. ಅಂದು ಬೆಳಗ್ಗೆ 7.30ಕ್ಕೆ ಭದ್ರತಾ ಕೊಠಡಿಗಳನ್ನು ಏಕಕಾಲಕ್ಕೆ ತೆರೆದು ಬೆಳಗ್ಗೆ 8ರಿಂದ ಅಂಚೆ ಮತ ಎಣಿಕೆ ಮತ್ತು ವಿದ್ಯುನ್ಮಾನ ಮತಯಂತ್ರಗಳ ಎಣಿಕೆಯನ್ನು ಆರಂಭಿಸಲಾಗುವುದು.
ನೆಲಮಹಡಿಯಲ್ಲಿ ಚಳ್ಳಕೆರೆ, ಹೊಸದುರ್ಗ ಮತ್ತು ಪಾವಗಡ ವಿಧಾನಸಭಾ ಕ್ಷೇತ್ರಗಳ ಎಣಿಕೆ, ಮೊದಲ ಮಹಡಿಯಲ್ಲಿ ಮೊಳಕಾಲ್ಮೂರು, ಹಿರಿಯೂರು ಮತ್ತು ಶಿರಾ ತಾಲೂಕುಗಳ ಮತಎಣಿಕೆ ಹಾಗೂ ಎರಡನೇ ಮಹಡಿಯಲ್ಲಿ ಚಿತ್ರದುರ್ಗ ಮತ್ತು ಹೊಳಲ್ಕೆರೆ ವಿಧಾನಸಭಾ ಕ್ಷೇತ್ರಗಳ ಮತಎಣಿಕೆ ಕಾರ್ಯ ನಡೆಯಲಿದೆ.
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ 285 ಮತಗಟ್ಟೆಗಳ ಎಣಿಕೆಯು 21 ಸುತ್ತುಗಳಲ್ಲಿ, ಚಳ್ಳಕೆರೆ ವಿಧಾನಸಭಾ ಕ್ಷೇತ್ರದ 260 ಮತಗಟ್ಟೆಗಳ ಎಣಿಕೆಯು 19 ಸುತ್ತುಗಳಲ್ಲಿ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ 288 ಮತಗಟ್ಟೆಗಳ ಎಣಿಕೆಯು 21 ಸುತ್ತುಗಳಲ್ಲಿ, ಹಿರಿಯೂರು ವಿಧಾನಸಭಾ ಕ್ಷೇತ್ರದ 287 ಮತಗಟ್ಟೆಗಳ ಎಣಿಕೆಯು 21 ಸುತ್ತುಗಳಲ್ಲಿ, ಹೊಸದುರ್ಗ ವಿಧಾನಸಭಾ ಕ್ಷೇತ್ರದ 242 ಮತಗಟ್ಟೆಗಳ ಎಣಿಕೆಯು 18ಸುತ್ತುಗಳಲ್ಲಿ ನಡೆಯಲಿದೆ.
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ 299 ಮತಗಟ್ಟೆಗಳ ಎಣಿಕೆಯು 22 ಸುತ್ತುಗಳಲ್ಲಿ, ಶಿರಾ ವಿಧಾನಸಭಾ ಕ್ಷೇತ್ರದ 267 ಮತಗಟ್ಟೆಗಳ ಎಣಿಕೆಯು 20 ಸುತ್ತುಗಳಲ್ಲಿ ಹಾಗೂ ಪಾವಗಡ ವಿಧಾನಸಭಾ ಕ್ಷೇತ್ರದ 240 ಮತಗಟ್ಟೆಗಳ ಎಣಿಕೆಯು 18 ಸುತ್ತುಗಳಲ್ಲಿ ಪೂರ್ಣಗೊಳ್ಳಲಿದ್ದು, ತ್ವರಿತಗತಿಯಲ್ಲಿ ಫಲಿತಾಂಶ ಪ್ರಕಟಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಅಗತ್ಯ ಸಿಬ್ಬಂಧಿಯನ್ನು ನಿಯೋಜಿಸಲಾಗಿದೆ.
ಪ್ರತಿ ಟೇಬಲ್‍ಗೆ ಒಟ್ಟು ಎಣಿಕೆ ಸಹಾಯಕರು, ಎಣಿಕೆ ಮೇಲ್ವಿಚಾರಕರು ಸೇರಿದಂತೆ ಮೈಕ್ರೋ ಆಬ್ಜರ್ವರ್ ಸೇರಿದಂತೆ ಮೂರು ಜನರ ತಂಡವನ್ನು ನಿಯೋಜಿಸಲಾಗುವುದು. ಮತಎಣಿಕೆ ಕಾರ್ಯಕ್ಕೆ ನಿಯೋಜಿತ ಅಧಿಕಾರಿ ಸಿಬ್ಭಂಧಿಗೆ ಈಗಾಗಲೇ ತರಬೇತಿ ನೀಡಲಾಗಿದೆ.
ಮತಎಣಿಕೆ ದಿನದಂದು ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಅಲ್ಲದೆ, ಜೂನ್ 01ರಿಂದ 04ರ ಸಂಜೆಯವರೆಗೆ ಮದ್ಯ ಮಾರಾಟ ಮತ್ತು ಸಾಗಾಣಿಕೆಯನ್ನು ನಿಷೇಧಿಸಲಾಗಿದೆ. ಅಂದು ನಗರದಲ್ಲಿ ಯಾವುದೇ ಅಭ್ಯರ್ಥಿಗಳು ವಿಜಯೋತ್ಸವ, ಸಭೆ-ಸಮಾರಂಭಗಳನ್ನು ನಡೆಸದಂತೆ ಸೂಚಿಸಲಾಗಿದೆ.












Click it and Unblock the Notifications