Karnataka budget 2024: ಬಜೆಟ್‌ನಲ್ಲಿ ಕೋಟೆ ನಾಡು ಚಿತ್ರದುರ್ಗಕ್ಕೆ 500ಕೋಟಿ ಅನುದಾನ ಘೋಷಣೆ, ಯಾವ್ಯಾವುದಕ್ಕೆ ಎಷ್ಟು?
ಚಿತ್ರದುರ್ಗ, ಫೆಬ್ರವರಿ, 16: 2024ರ ರಾಜ್ಯ ಬಜೆಟ್ ಮಂಡನೆಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 15ನೇ ಬಜೆಟ್ ಮಂಡಿಸಿದ್ದಾರೆ. ಇನ್ನು ಈ ಬಜೆಟ್‌ನಲ್ಲಿ ಚಿತ್ರದುರ್ಗ ಜಿಲ್ಲೆಗೆ 500ಕೋಟಿ ಅನುದಾನ ಘೋಷಣೆಯಾಗಿದೆ.
ಅಂದಹಾಗೆ ಚಿತ್ರದುರ್ಗ ಜಿಲ್ಲೆಯಲ್ಲಿ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು 500 ಕೋಟಿ ರೂಪಾಯಿಗಳ ವೆಚ್ಚದಲ್ಲಿ 2023-24ನೇ ಸಾಲಿನಿಂದ 150 ಎಂಬಿಬಿಎಸ್ ವಿದ್ಯಾರ್ಥಿಗಳ ದಾಖಲಾತಿಯೊಂದಿಗೆ ಪ್ರಾರಂಭಿಸಲಾಗಿರುತ್ತದೆ. ವೈದ್ಯಕೀಯ ಕಾಲೇಜಿನ ಕಟ್ಟಡ, ವಿದ್ಯಾರ್ಥಿ ವಸತಿ ನಿಲಯ, ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ಇದಲ್ಲದೆ ಬಳ್ಳಾರಿ ಮತ್ತು ಚಿತ್ರದುರ್ಗದಲ್ಲಿ ಜಿಲ್ಲಾ ಖನಿಜ ನಿಧಿಯ ಮೂಲಕ ಹಾಗೂ ಗದಗ ಜಿಲ್ಲೆಯ ರೋಣದಲ್ಲಿ NABARD ಸಹಯೋಗದೊಂದಿಗೆ ಒಟ್ಟು 150 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಜಿ.ಟಿ.ಟಿ.ಸಿಗಳನ್ನು ಪ್ರಾರಂಭಿಸಲಾಗುವುದು ಎಂದಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಗೆ ಒತ್ತಾಯ: ಪ್ರಸಕ್ತ ಸಾಲಿನಲ್ಲಿ ಈ ಯೋಜನೆಯಡಿ ರಾಜ್ಯ ಸರ್ಕಾರವು 75 ಸಾವಿರ ಎಕರೆ ನೀರಾವರಿ ಕಲ್ಪಿಸಲು ಯೋಜಿಸಿದ್ದು, ಆಯವ್ಯಯದಲ್ಲಿ ಘೋಷಿಸಿದಂತೆ ಅನುದಾನವನ್ನು ಬಿಡುಗಡೆ ಮಾಡಿ ಯೋಜನೆಯನ್ನು ರೈತರಿಗೆ ತಲುಪಿಸಲು ಸಹಕಾರಿಯಾಗುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಯ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರವು ತನ್ನ 2023-24ನೇ ಸಾಲಿನ ಆಯವ್ಯಯದಲ್ಲಿ 5300 ಕೋಟಿ ರೂಪಾಯಿ ಅನುದಾನ ಘೋಷಿಸಲಾಗಿತ್ತು. ಆದರೆ, ಈವರೆಗೆ ಬಿಡುಗಡೆ ಆಗಿಲ್ಲ. ಜೊತೆಗೆ ಹಿಂದಿನ ರಾಜ್ಯ ಸರ್ಕಾರ ತನ್ನ ಆಯವ್ಯಯ ಘೋಷಣೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾನ್ಯತೆ ನೀಡಲಾಗುತ್ತಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ದರು.
ಬಜೆಟ್‌ನಲ್ಲಿ ಗಡಿ ಜಿಲ್ಲೆಗೆ ಸಿಕ್ಕಿದ್ದೇನು?: ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ 15 ನೇ ಬಜೆಟ್ ಮಂಡನೆ ಮಾಡಿದ್ದು ಗಡಿಜಿಲ್ಲೆ ಜನರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಅಲ್ಪ ಅನುದಾನಕ್ಕಷ್ಟೇ ಬಜೆಟ್ ಸೀಮಿತಗೊಂಡಿದೆ.
ಯಳಂದೂರು ತಾಲೂಕು ಆಸ್ಪತ್ರೆಯನ್ನು 100 ಹಾಸಿಗೆಗೆ ಮೇಲ್ದರ್ಜೆಗೇರಿಸಬೇಕು ಎನ್ನುವ ಬೇಡಿಕೆ ಬಜೆಟ್‌ನಲ್ಲಿ ಈಡೇರಿದೆ. ಚಾಮರಾಜನಗರ ಜಿಲ್ಲಾಸ್ಪತ್ರೆಯ ಅಗತ್ಯ ವೈದ್ಯಕೀಯ ಉಪಕರಣ ಖರೀದಿಗಾಗಿ 2025-26 ನೇ ಸಾಲಿನಲ್ಲಿ 150 ಕೋಟಿ ಹಣ ಕೊಡುವುದಾಗಿ ಸಿಎಂ ಹೇಳಿದ್ದಾರೆ.
ವಿದ್ಯಾರ್ಥಿಗಳಲ್ಲಿ ವಿಜ್ಞಾನ ಅಧ್ಯಯನಕ್ಕೆ ತೊಡಗಲು, ಆಸಕ್ತಿ ಬೆಳೆಸಿಕೊಳ್ಳಲು ಚಾಮರಾಜನಗರದಲ್ಲಿ ವಿಜ್ಞಾನ ಕೇಂದ್ರ ಇಲ್ಲವೇ ತಾರಾಲಯ ಕಾರ್ಯಾರಂಭ ಮಾಡುವುದಾಗಿ ಹೇಳಿದ್ದಾರೆ. ಜೊತೆಗೆ ಪ್ರಾಣಿ- ಮಾನವ ಸಂಘರ್ಷ ತಡೆಗೆ ಬಂಡೀಪುರದಲ್ಲಿ ಕಾರ್ಯಪಡೆ ರಚನೆ ಮಾಡಲಾಗುವುದು ಎಂದು ಸಿಎಂ ಹೇಳಿದ್ದಾರೆ.
ಗಡಿಜಿಲ್ಲೆ ಚಾಮರಾಜನಗರದಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದು, ಬಂಪರ್ ಅನುದಾನ ಸಿಗುವ ನೀರಿಕ್ಷೆ ಇತ್ತು. ಆದರೆ, ಅಲ್ಪ ಅನುದಾನ ಘೋಷಣೆ ಮಾಡಿದ್ದು, ಬಂಡೀಪುರದಲ್ಲಿ ಇಂಟರ್ ಪ್ರಿಟೇಷನ್ ಸೆಂಟರ್ ತೆರೆಯಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಒಟ್ಟಿನಲ್ಲಿ ಸಿದ್ದರಾಮಯ್ಯ ಬಜೆಟ್ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದ ಗಡಿಜಿಲ್ಲೆ ಜನರು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.












Click it and Unblock the Notifications