ಬರಿಗಾಲಲ್ಲಿ ಕಳ್ಳೆ ಮುಳ್ಳಿನ ಗುಡಿ ಏರಿ ಕಳಸ ಕಿತ್ತ ಈರಗಾರರು, ಕಾಡುಗೊಲ್ಲರ ಈ ಆರಾಧ್ಯ ದೈವನ ಪವಾಡ ಎಂತಹದ್ದು ಗೊತ್ತಾ?
ಚಿತ್ರದುರ್ಗ, ಜನವರಿ, 29: ಆಧುನಿಕತೆಯ ಭರಾಟೆಯಲ್ಲಿ ಸಾಂಪ್ರದಾಯಿಕ ಆಚರಣೆಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಹೋಗುತ್ತವೆ. ಆದರೆ ಇಲ್ಲೊಂದು ಬುಡುಕಟ್ಟು ಸಮುದಾಯವೆಂದು ಗುರುತಿಸಿಕೊಂಡಿರುವ ಕಾಡುಗೊಲ್ಲರು ಜನಪದ ಸಂಸ್ಕೃತಿಯನ್ನು ಉಳಿಸಿಕೊಂಡು ಬರುತ್ತಿರುವುದಕ್ಕೆ ಈ ಆಚರಣೆಯೇ ಸಾಕ್ಷಿಯಾಗಿದೆ. ಏನಿದೆ ಈ ಆಚರಣೆ, ಎಲ್ಲಿ ಅಂತೀರಾ ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಮಾಹಿತಿ.
ಕೋಟೆ ನಾಡು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಪರಶುರಾಮಪುರ ವ್ಯಾಪ್ತಿಯ ವಸಲೂದಿಬ್ಬದಲ್ಲಿ (ಪುರ್ಲಹಳ್ಳಿ) ಕಾಡುಗೊಲ್ಲರ ಆರಾಧ್ಯ ದೈವ ಶ್ರೀ ಕ್ಯಾತೇದೇವರ ಬರಿಗಾಲಲ್ಲಿ ಕಳಶ ಕೀಳುವ ಮುಳ್ಳಿನ ಜಾತ್ರೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ಧೂಯಾಗಿ ನೆರವೇರಿತು.

ಈ ಕಳಶ ಕೀಳಲು ಐದು ಜನ ಈರಗಾರರು ಪೈಪೋಟಿಯಲ್ಲಿ ತೊಡಗುತ್ತಾರೆ. ಈ ಬಾರಿ ಶಿರಾ ತಾಲೂಕಿನ ದ್ವಾರನಕುಂಟೆ ಗ್ರಾಮದ ರಾಘವೇಂದ್ರ ಎಂಬ ಈರಗಾರರ ಕಳಶ ಕಿತ್ತು ಭಕ್ತಿ ಪರಾಕಾಷ್ಠೆ ಮೆರೆದಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಕೋಣನ ಗೊಲ್ಲರು ಮತ್ತು ಬೊಮ್ಮನ ಗೊಲ್ಲರು ಸೇರಿದಂತೆ 13 ಗುಡಿಕಟ್ಟಿಗೆ ಸೇರಿದ ದೇವರುಗಳನ್ನು ಈ ಮುಳ್ಳಿನ ಗುಡಿಯಲ್ಲಿ ಪ್ರತಿಷ್ಠಾಪಿಸಿರುತ್ತಾರೆ. ಬರಿಕಾಲಲ್ಲಿ ಮುಳ್ಳಿನ ಗುಡಿಯನ್ನು ಪರಸ್ಪರ ಪೈಪೋಟಿಯಲ್ಲಿ ನಿರ್ಮಿಸುತ್ತಾರೆ. ಅರ್ಧ ಗುಡಿಯನ್ನು ಕೋಣನ ಗೊಲ್ಲರು ಉಳಿದರ್ಧ ಗುಡಿಯನ್ನು ಬೊಮ್ಮನ ಗೊಲ್ಲರು ನಿರ್ಮಿಸುವುದು ವಿಶೇಷ.
15 ದಿನಗಳ ಕಾಲ ನಡೆಯುವ ಜಾತ್ರೆ ಇದಾಗಿದ್ದು, ಈ ಜಾತ್ರೆಗೆ 10 ದಿನಗಳ ಮುಂಚೆಯೇ ಭಕ್ತರೊಬ್ಬರ ಜಮೀನಿನಲ್ಲಿ ಬೆಳೆದ ಹತ್ತಿ ಮರವನ್ನು ಪೂಜಿಸಿ, ಅದನ್ನು ಕಡಿದು ವಸಲುದಿಬ್ಬಕ್ಕೆ ತರುತ್ತಾರೆ. ನಂತರ ಕ್ಯಾತೆದೇವರ ಜಾತ್ರೆಗೆ ಬಂದ್ರೆಕಳ್ಳೆ, ಬಾರೆ ಕಳ್ಳೆಯನ್ನು ಕಡಿದು ತಂದು 15 ಅಡಿ ಅಗಲ ಮತ್ತು 20 ಅಡಿ ಎತ್ತರದ ಮುಳ್ಳಿನ ದೇವರ ಗುಡಿಯನ್ನು ನಿರ್ಮಾಣ ಮಾಡುತ್ತಾರೆ. ಹೀಗೆ ನಿರ್ಮಿಸಿದ ಗುಡಿಯಲ್ಲಿ ಚನ್ನಮ್ಮನಾಗತಿಹಳ್ಳಿಯ ಕ್ಯಾತೆದೇವರು, ಬಂಜಗೆರೆ ಈರಣ್ಣ, ಐಗಾರ್ಲಹಳ್ಳಿಯ ತಾಳಿ ದೇವರನ್ನು ಪ್ರತಿಷ್ಠಾಪಿಸುತ್ತಾರೆ.
ಹೀಗೆ ಕಾಡುಗೊಲ್ಲ ಸಮುದಾಯದವರು ಭಕ್ತಿಯಿಂದ ಮುಳ್ಳಿನ ಗುಡಿಯನ್ನು ನಿರ್ಮಿಸಿದ ನಂತರ ಗೋಪುರದ ತುದಿಯಲ್ಲಿ ಕಂಚಿನ ಕಳಶವನ್ನು ಪ್ರತಿಷ್ಠಾಪಿಸಿ ನಂತರ ಬರಿ ಕಾಲಲ್ಲಿ ಆ ಕಳಶವನ್ನು ಕಿತ್ತು ಕುಣಿದಾಡುವ ಜಾತ್ರೆ ಇದಾಗಿರುತ್ತದೆ. ಕ್ಯಾತೆ ದೇವರಿಗೆ ಸೇರಿದ 13 ಗುಡಿಕಟ್ಟಿನ ಅಣ್ಣ-ತಮ್ಮಂದಿರು ಈ ಜಾತ್ರೆಯನ್ನು ನಡೆಸಿಕೊಂಡು ಬರುತ್ತಾರೆ. ಈ ಕಾಡುಗೊಲ್ಲ ಸಮುದಾಯವು ಒಂದು ತಿಂಗಳ ಕಾಲ "ನವಣೆ" ವ್ರತ ಆಚರಿಸುತ್ತಾರೆ.
ಏಕೆಂದರೆ ಕ್ಯಾತೆ ದೇವರು ಕಾಡುಗೊಲ್ಲರಿಗೆ ಒಲಿಯುವ ಮುನ್ನ ಹೇಮರೆಡ್ಡಿ ಮತ್ತು ಭೀಮರೆಡ್ಡಿ ಗೌಡನಿಗೆ ಒಲಿದಿರುತ್ತದೆ. ಆದರೆ ರೆಡ್ಡಿ ಅವರು ನಿರ್ಲಕ್ಷ ತೋರಿ ಮನೆಯ ದೇವರನ್ನು "ಹುರುಳಿ-ನವಣೆ" ಕಣಜದಲ್ಲಿ ಮುಚ್ಚಿ ಹಾಕಿದ್ದನಂತೆ. ಹೀಗಾಗಿ ರೆಡ್ಡಿ ದುರಹಂಕಾರದಿಂದ ಕ್ಯಾತೆದೇವರು ರೆಡ್ಡಿಯ ಮನೆಯಲ್ಲಿ ಪಶುಪಾಲಕನಾಗಿದ್ದ ಕಾಡುಗೊಲ್ಲರ ಬೊಮ್ಮಲಿಂಗ ಎಂಬುವನಿಗೆ ಒಲಿದಿದೆ ಎಂಬ ಪ್ರತೀತಿ ಇದೆ.
ಕಾಡುಗೊಲ್ಲ ಸಮುದಾಯದವರು ದೇವರಿಗಾಗಿ ನವಣೆ ಮತ್ತು ಹುರುಳಿಯನ್ನು ಒಂದು ತಿಂಗಳ ಕಾಲ ಸೇವಿಸುವುದಿಲ್ಲ. ಅಂತೆಯೇ ಹುರಳಿ ಮತ್ತು ನವಣೆ ಧಾನ್ಯವನ್ನು ಬೆಳೆಯುವ ಹೊಲಗಳಲ್ಲಿ ಕೂಡ ಹೋಗದೆ ಕಟ್ಟು ನಿಟ್ಟಿನ ವ್ರತ ಪಾಲಿಸುತ್ತಾರೆ. ಬರೀ ಕಾಲಲ್ಲಿ ಬಾರೆ ಮುಳ್ಳಿನ ಗುಡಿ ನಿರ್ಮಿಸಿ, ಅರೆ ಬೆತ್ತಲೆಯಲ್ಲಿ ಕಳಶ ಕೀಳುವ ಮೂಲಕ ಬುಡಕಟ್ಟು ಸಮುದಾಯದ ವಂಶಸ್ಥರ ಶೌರ್ಯ ಪ್ರದರ್ಶನವೂ ಆಗುತ್ತದೆ.
ಈ ಆಚರಣೆಯಿಂದಾಗಿ ಈ ನಾಡಿಗೆ ಒಳಿತಾಗುತ್ತದೆ ಎಂಬ ನಂಬಿಕೆ ಭಕ್ತ ಸಮೂಹದಲ್ಲಿದೆ. ಬರೀ ಮೈಯಲ್ಲಿ ಮುಳ್ಳಿನ ಗೋಪುರ ಕಟ್ಟುವುದು ಮತ್ತು ಕಳಶ ಕೀಳುವ ದೃಶ್ಯ ಸುತ್ತಮುತ್ತ ನೆರೆದಿರುವ ಭಕ್ತ ಸಮೂಹವನ್ನು ಒಂದು ಕ್ಷಣ ರೋಮಾಂಚನಗೊಳಿಸುತ್ತದೆ.
ಇನ್ನು ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಕರ್ನಾಟಕದ ನೆರೆಹೊರೆಯ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಸೀಮಾಂದ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ಚಿತ್ರದುರ್ಗ ಜಿಲ್ಲೆಯ ಸುತ್ತಮುತ್ತಲಿನ ಭಕ್ತರು ಜಾತ್ರೆಗೆ ಆಗಮಿಸಿ ದೇವರ ದರ್ಶನ ಪಡೆದು ಪುಳಕಿತರಾಗುತ್ತಾರೆ.
ಒಟ್ಟಾರೆಯಾಗಿ ಈ ಜಾತ್ರೆಯು ರಾಜ್ಯದ ಚಿತ್ರದುರ್ಗ ಜಿಲ್ಲೆಯಲ್ಲಿ ಬಿಟ್ಟರೆ, ಬೇರೆಲ್ಲಿಯೂ ನಡೆಯುವುದಿಲ್ಲ ಎನ್ನಬಹುದಾಗಿದೆ. ಕಾಲಿಗೆ ಒಂದು ಮುಳ್ಳು ಚುಚ್ಚಿದರೆ ನರಕಯಾತನೆ ಅನುಭವಿಸುವ ಸನ್ನಿವೇಶದಲ್ಲಿ ಜನರು ಮುಳ್ಳಿನ ಗುಡಿಯ ಮೇಲೆ ಬರಿಗಾಲಲ್ಲಿ ಕುಣಿದು ಕುಪ್ಪಳಿಸುವ ಈರಗಾರರನ್ನು ಕಂಡು ಒಂದು ಕ್ಷಣ ಭಕ್ತ ಸಮೂಹ ಬೆರಗಾಗುವಂತೆ ಮಾಡುತ್ತದೆ. ಇಂತಹ ಸಾಂಪ್ರದಾಯಿಕ ಬುಡಕಟ್ಟು ಆಚರಣೆಗಳನ್ನು ಕಾಡುಗೊಲ್ಲ ಸಮುದಾಯದಲ್ಲಿ ಮಾತ್ರ ಕಾಣಬಹುದಾಗಿದೆ.












Click it and Unblock the Notifications