ಹೊಸದುರ್ಗ; ಪುಟ್ಟ ಕಂದಮ್ಮನಿಗೆ ಶ್ವಾಸಕೋಶ ತೊಂದರೆ; ಚಿಕಿತ್ಸೆಗೆ ಹಣವಿಲ್ಲದೆ ಪೋಷಕರು ಕಣ್ಣೀರು
ಚಿತ್ರದುರ್ಗ, ಅಕ್ಟೋಬರ್, 04: ಹಸುಗೂಸು ಮಗುವೊಂದು ಕಣ್ಣು ಬಿಟ್ಟು ಇನ್ನೂ ಕೇವಲ ನಾಲ್ಕು ದಿನಗಳು ಕಳೆದಿದೆ. ಆದರೆ ಪುಟ್ಟ ಮಗು ವಿಚಿತ್ರ ಖಾಯಿಲೆಗೆ ಸಿಲುಕಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದೆ. ಸಾವಿನಿಂದ ಪಾರಾಗಲು ಆರ್ಥಿಕ ನೆರವಿನ ಸಹಾಯ ಬೇಕಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ನಗರದ ವಸಂತ್ ಕುಮಾರ್ ಹಾಗೂ ಹೇಮಾವತಿ ಅವರಿಗೆ ಕಳೆದ ನಾಲ್ಕು ದಿನಗಳ ಹಿಂದೆ ಗಂಡು ಮಗು ಜನಿಸಿದೆ. ಶಿವಮೊಗ್ಗದ ವಿನಾಯಕ ಆಸ್ಪತ್ರೆಯಲ್ಲಿ ಗಂಡು ಮಗು ಜನಿಸಿದೆ. ಆದರೆ ಮಗುವಿಗೆ ಶ್ವಾಸಕೋಶ ಹಾಗೂ ಹೃದಯ ಬೆಳವಣಿಗೆ ಖಾಯಿಲೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಮಗುವಿಗೆ ಚಿಕಿತ್ಸೆಯ ಅನಿವಾರ್ಯತೆ ಇದ್ದು, ಚಿಕಿತ್ಸೆಗೆ ಆರ್ಥಿಕ ನೆರವಿಲ್ಲದೆ ದಂಪತಿಗಳು ಪರದಾಡುವಂತೆ ಆಗಿದೆ.
ಮಗುವಿನ ಚಿಕಿತ್ಸೆಗೆ ಹಣವಿಲ್ಲದೇ ಪರದಾಟ
ಮೊದಲು ಶಿವಮೊಗ್ಗದ ವಿನಾಯಕ ಆಸ್ಪತ್ರೆಯಲ್ಲಿ ಒಂದೂವರೆ ದಿನ ಚಿಕಿತ್ಸೆ ಪಡೆದಿದ್ದಾರೆ. ಆದರೆ ಆ ಆಸ್ಪತ್ರೆಯ ವೈದ್ಯರು ಮತ್ತೊಂದು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವಂತೆ ತಿಳಿಸಿದ್ದಾರಂತೆ. ವೈದ್ಯರು ಹೇಳಿದಂತೆ ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ಮಗುವನ್ನು ದಾಖಲಿಸಿದ್ದು, ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಮಗುವಿನ ತಾಯಿ ಜನರಲ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಮಗುವಿಗೆ ಶ್ವಾಸಕೋಶ ಮತ್ತು ಹೃದಯ ಬೆಳವಣಿಗೆ ಕಾಯಿಲೆ ಇರುವುದರಿಂದ ಹೆಚ್ಚಿನ ಚಿಕಿತ್ಸೆ ಬೇಕಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಗುವಿನ ಚಿಕಿತ್ಸೆಗೆ ಹಣವಿಲ್ಲದೆ ಆಸ್ಪತ್ರೆಯಲ್ಲಿ ಮಗುವಿನ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.

ಆಸ್ಪತ್ರೆಯಲ್ಲಿ ಮಗುವಿಗೆ ವಿವಿಧ ಚಿಕಿತ್ಸೆ, ಇಂಜೆಕ್ಷನ್, ಬ್ಲಡ್ ಟೆಸ್ಟ್, ಸ್ಕಾನಿಂಗ್, ಇತರೆ ವೈದ್ಯಕೀಯ ತಪಾಸಣೆ ವೆಚ್ಚ ಸೇರಿದಂತೆ ಪ್ರತಿದಿನ ಸುಮಾರು 50 ಸಾವಿರ ಹಣ ಖರ್ಚು ಆಗುತ್ತಿದೆ. ಈಗಾಗಲೇ ಎರಡು ಲಕ್ಷಕ್ಕೂ ಹೆಚ್ಚು ಹಣ ಖರ್ಚಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದಂಪತಿಗಳು ನೆರವಿನ ಹಸ್ತದ ಮೊರೆ ಹೋಗಿದ್ದಾರೆ.
ಮತ್ತೊಂದು ಕಡೆ ಮನೆಯಲ್ಲಿ ಯಾವುದೇ ರೀತಿಯ ಆದಾಯ ಇಲ್ಲವಾಗಿದ್ದು, ದಂಪತಿಗಳು ತುಂಬಾ ಕಷ್ಟದಲ್ಲಿದ್ದಾರೆ. ಒಂದು ಕಡೆ ಬಡತನ, ಮತ್ತೊಂದು ಕಡೆ ಮಗುವಿನ ಸಾವು ಬದುಕಿನ ಹೋರಾಟ ಆಗಿದೆ. ದಂಪತಿಗಳಿಬ್ಬರು ಮಗುವನ್ನು ಉಳಿಸಿಕೊಳ್ಳಲು ಪೇಚಾಡುತ್ತಿದ್ದಾರೆ.












Click it and Unblock the Notifications