ಹಿರಿಯೂರು: ಹಾವು, ಜರಿ, ಚೇಳು ಹರಕೆ ಸಲ್ಲಿಸುವ ಜಾತ್ರೆಯ ಅಂಬಿನೋತ್ಸವಕ್ಕೆ ಕ್ಷಣಗಣನೆ
ಹಿರಿಯೂರು, ಅಕ್ಟೋಬರ್, 24: ತಾಲೂಕಿನ ವಾಣಿವಿಲಾಸ ಜಲಾಶಯದ ಮೇಲ್ಭಾಗದ ಹಿನ್ನೀರಿನ ದಡದಲ್ಲಿ (ಹೊಸದುರ್ಗ ಗಡಿಭಾಗ) ಐತಿಹಾಸಿಕ ಕಾಡುಗೊಲ್ಲರ ಆರಾಧ್ಯ ದೈವ ಶ್ರೀ ರಂಗನಾಥ ಸ್ವಾಮಿಯ ಅಂಬಿನೋತ್ಸವ ನಡೆಯಲಿದೆ. ಅಲ್ಲದೆ ಈ ಉತ್ಸವವನ್ನು ಕಣ್ತುಂಬಿಕೊಳ್ಳಲು ಭಾಕ್ತರು ಕಾತರದಿಂದ ಕಾಯುತ್ತಿದ್ದಾರೆ.
ಬಯಲು ಸೀಮೆಯ ಪ್ರಮುಖ ಧಾರ್ಮಿಕ ಕೇಂದ್ರ ಹಾಗೂ ಬುಡಕಟ್ಟು ಕಾಡುಗೊಲ್ಲರ ಆರಾಧ್ಯ ದೈವ ಹಾರನಕಣಿವೆ ಶ್ರೀರಂಗನಾಥ ಸ್ವಾಮಿ ಆಗಿದ್ದಾನೆ. ಹಿರಿಯೂರು ತಾಲೂಕು ಹಾಗೂ ಹೊಸದುರ್ಗ ತಾಲೂಕಿನ ವಾಣಿವಿಲಾಸ ಜಲಾಶಯದ ಹಿನ್ನೀರಿನ ದಡದಲ್ಲಿರುವ ಶ್ರೀರಂಗನಾಥ ಸ್ವಾಮಿಯ ಅಂಬಿನೋತ್ಸವ ವರ್ಷಕ್ಕೊಮ್ಮೆ ಅದ್ಧೂರಿಯಾಗಿ ನೆರವೇರುತ್ತದೆ. ವಿಜಯದಶಮಿ ನಂತರದ ದಿನ ಈ ಜಾತ್ರೆ ವಿಜೃಂಭಣೆಯಿಂದ ಜರುಗಲಿದೆ.

ಹೊಸದುರ್ಗ ತಾಲೂಕಿನ ಅಂಚಿ ಬಾರಿಹಟ್ಟಿ ಗ್ರಾಮದ ದೇವರ ಉತ್ಸವ ಮೂರ್ತಿಗೆ ಮೊದಲು ವಾಣಿ ವಿಲಾಸ ಜಲಾಶಯದ ಹಿನ್ನೀರಿನಲ್ಲಿ ಗಂಗಾ ಪೂಜೆ ನೆರವರಿಸಲಾಗುತ್ತದೆ. ನಂತರ ಅಂಚಿಬಾರಿಹಟ್ಟಿಯಿಂದ ಉತ್ಸವ ಮೂರ್ತಿಯನ್ನು ಬಣ್ಣದ ಪಟ್ಟದ ಕುದುರೆ ಹಾಗೂ ಪಲ್ಲಕ್ಕಿ ಮೇಲೆ ಕೂರಿಸಿ ಭಕ್ತಿ ಭಾವದಿಂದ ಮೆರವಣಿಗೆ ಮಾಡಲಾಗುತ್ತದೆ.
ಈ ಮೂಲಕ ಹಾರನಕಣಿವೆ ಶ್ರೀರಂಗನಾಥ ಶಿಲಾಮೂರ್ತಿ ಇರುವ ಜಾಗದಲ್ಲಿ ಸಂಪ್ರದಾಯದಂತೆ ಪೂಜಾರಿ ಪಟ್ಟದ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ನಂತರ ಬನ್ನಿ ಮರದ ಹತ್ತಿರ ಬಾಳೆ ಕಂದು ನೆಟ್ಟು ಪೂಜೆ ಸಲ್ಲಿಸಿ, ಬನ್ನಿ ಮರದ ಸುತ್ತ ಮೂರು ಬಾರಿ ಪ್ರದಕ್ಷಿಣೆ ಹಾಕಲಿದ್ದು, ಬಾಳೆ ಕಂದಿಗೆ ಬಿಲ್ಲು ಬಾಣ ಹೊಡೆಯುವ ಮೂಲಕ ಅಂಬಿನೋತ್ಸವ ನೆರವೇರಿಸಲಾಗುತ್ತದೆ.
ರಂಗನಾಥ ಸ್ವಾಮಿಗೆ ಚೇಳು, ಹಾವು ಅರ್ಪಣೆ
ಯಾರಿಗಾದರೂ ಹಾವು, ಚೇಳು, ಜರಿ, ಹಲ್ಲಿ, ಇರುವೆ, ತಿಗಣೆ ಇತರೆ ವಿಷ ಜಂತುಗಳು ಕಡಿದಾಗ ಅಥವಾ ಕಣ್ಣಿಗೆ ಕಂಡಾಗ ಮೊದಲು ನೆನಪಿಸಿಕೊಳ್ಳುವುದೇ ಹಾರನಕಣಿವೆ ಶ್ರೀರಂಗನಾಥನನ್ನು. ಮನೆಗಳಲ್ಲಿ, ಹೊಲ- ಗದ್ದೆಗಳಲ್ಲಿ ಹಾವು, ಚೇಳು ಕಡಿದಾಗ ಅಥವಾ ಕಾಣಿಸಿಕೊಂಡಾಗ 'ಅಂಬಿನೋತ್ಸವದ ಜಾತ್ರೆಗೆ ಬಂದು ಹಾವು, ಚೇಳು, ಜರಿ ಕೊಟ್ಟು ಹರಕೆ ತೀರಿಸುತ್ತೇನೆ' ಎಂದು ಜನರು ಹರಕೆ ಕಟ್ಟಿಕೊಳ್ಳುವ ಪದ್ಧತಿ ಭಕ್ತ ಸಮೂಹದಲ್ಲಿದೆ.
ತಾವು ಹರಕೆ ಕಟ್ಟಿಕೊಂಡತೆಯೇ ಭಕ್ತರು ಜಾತ್ರೆಯಲ್ಲಿ ಭಾಗವಹಿಸಿ ತಾಮ್ರ, ಬೆಳ್ಳಿಯ ಹಾವು, ಚೇಳು, ಹಲ್ಲಿ, ಜರಿ ಇತರೆ ವಿಷ ಜಂತುಗಳನ್ನು ಖರೀದಿಸಿ ದೇವರಿಗೆ ಅರ್ಪಿಸುತ್ತಾರೆ. ಈ ಐತಿಹಾಸಿಕ ರಂಗಪ್ಪನ ಜಾತ್ರೆಗೆ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ.












Click it and Unblock the Notifications