ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗ: 45 ವರ್ಷಗಳ ಬಳಿಕ ಕೋಡಿ ಬಿದ್ದ ಐಮಂಗಲ ಕೆರೆ, ರೈತರ ಸಂಭ್ರಮ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ನವೆಂಬರ್ 4: ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ನೀರಿಲ್ಲದೆ ಬಳಲಿ ಬೆಂಡಾಗಿ ತತ್ತರಿಸಿ ಹೋಗಿದ್ದ ಜಿಲ್ಲೆ ಇದೀಗ ನೀರಿನಿಂದ ತುಂಬಿ ಸಮೃದ್ಧಿಯಾಗಿದೆ. ಇತ್ತ 45 ವರ್ಷಗಳ ಬಳಿಕ ಹಿರಿಯೂರು ತಾಲ್ಲೂಕಿನ ಐಮಂಗಲ ಕೆರೆ ಕೋಡಿ ಬಿದ್ದು, ಮೈದುಂಬಿ ಹರಿಯುತ್ತಿದ್ದು, ಈ ಭಾಗದ ರೈತರಲ್ಲಿ ಹರ್ಷ ಮನೆ ಮಾಡಿದೆ.

ಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಗ್ರಾಮ ದೇವತೆ ಕಲ್ಕುಂಟಿ ಕರಿಯಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಕೆರೆಗೆ ಗಂಗಾ ಪೂಜೆ ನೇರವೇರಿಸಿ, ಬಾಗಿನ ಅರ್ಪಿಸಿದರು. ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯ ಕೆರೆ ಇದಾಗಿದ್ದು ಹಿರಿಯೂರು ಕಡೆಯಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಚಲಿಸುವಾಗ ಎಡಭಾಗಕ್ಕೆ ಕೆರೆ ಕಾಣಬಹುದಾಗಿದೆ.

ಹಿರಿಯೂರು: 40 ವರ್ಷಗಳ ಬಳಿಕ ಕೋಡಿ ಬಿದ್ದ ಧರ್ಮಪುರ ಕೆರೆಹಿರಿಯೂರು: 40 ವರ್ಷಗಳ ಬಳಿಕ ಕೋಡಿ ಬಿದ್ದ ಧರ್ಮಪುರ ಕೆರೆ

ಈ ವರ್ಷದ ಮುಂಗಾರಿನಲ್ಲಿ ಉತ್ತಮ ಮಳೆಯಾಗಿದ್ದು ಹಲವು ಕೆರೆಗಳು ತುಂಬಿದ್ದರೂ ಐಮಂಗಲ ಕೆರೆ ಮಾತ್ರ ತುಂಬಿರಲಿಲ್ಲ. ಈಗ ನಾಲ್ಕು ದಶಕಗಳ ನಂತರ ಕೆರೆ ತುಂಬಿದೆ. ಒಂದು ಕಾಲದಲ್ಲಿ ಐಮಂಗಲ ತೋಟದಲ್ಲಿ ವೀಳ್ಯದ ಎಲೆ ಪ್ರಸಿದ್ಧಿ ಪಡೆದಿತ್ತು. ಕೆರೆಯಲ್ಲಿ ನೀರು ಇದ್ದಾಗ ತೋಟಗಳ ತೆರೆದ ಬಾವಿಗಳಲ್ಲಿ ನೀರು ಇರುತ್ತಿತ್ತು. 25 ವರ್ಷಗಳಿಂದ ಮಳೆ ಸರಿಯಾಗಿ ಆಗದ ಕಾರಣ ಕೆರೆಯ ಹಿಂಭಾಗದಲ್ಲಿ ಕಂಗೊಳಿಸುತ್ತಿದ್ದ ವೀಳ್ಯದ ಎಲೆ ಬಳ್ಳಿಗಳಿಂದ ಕೂಡಿದ ನೂರಾರು ಎಕರೆ ಅಡಿಕೆ, ತೆಂಗಿನ ತೋಟಗಳು ಕಣ್ಮರೆಯಾಗಿದ್ದವು. ತೋಟವಿದ್ದ ಜಾಗದಲ್ಲಿ ಸೀಮೆ ಜಾಲಿ ಗಿಡಗಳು ಬೆಳೆದಿವೆ.

ನಿಂತಿದ್ದ ಕೊಳವೆ ಬಾವಿಗಳಲ್ಲೂ ನೀರು

ನಿಂತಿದ್ದ ಕೊಳವೆ ಬಾವಿಗಳಲ್ಲೂ ನೀರು

ಕೆರೆಯಲ್ಲಿ ನೀರಿಲ್ಲದೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ನಿರ್ಮಿಸಿದ್ದ ಕೆರೆಯ ಕಾಲುವೆ, ಉಪಕಾಲುವೆಗಳು ನಿರ್ವಹಣೆಯಿಲ್ಲದೆ ಹಾಳಾಗಿವೆ. ಅಲ್ಲದೆ ಜಿಲ್ಲೆಯಲ್ಲೇ ಕುಡಿಯುವ ನೀರಿಗೆ ತೀವ್ರ ಬರ ಇರುವ ಹೋಬಳಿ ಎಂದು ಗುರುತಿಸಿಕೊಂಡಿತ್ತು. ಈ ವರ್ಷ ಹೋಬಳಿಯ ಎಲ್ಲಾ ಕೆರೆಗಳು ಭರ್ತಿಯಾಗಿದ್ದು, ಅಂತರ್ಜಲ ಮಟ್ಟ ಹೆಚ್ಚಳವಾಗಿದೆ. ಇದರಿಂದ ಬತ್ತಿ ಹೋಗಿದ್ದ ಹಲವು ಕೊಳವೆ ಬಾವಿಗಳಲ್ಲಿ ನೀರು ಉಕ್ಕಿ ಬರುತ್ತಿವೆ.

ಇನ್ನು ನಾಲ್ಕು ದಶಕಗಳ ಬಳಿಕ ಕೆರೆ ತುಂಬಿರುವುದರಿಂದ ಹಾಗಾಗಿ ರಾಜಕಾಲುವೆಗಳನ್ನು ದುರಸ್ಥಿ ಮಾಡಿಸಬೇಕು, ತೂಬು, ನಾಲೆಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿದರೆ ಕೆರೆಯ ನೀರು ಸಮರ್ಪಕವಾಗಿ ಬಳಕೆಯಾಗುತ್ತದೆ ಎಂದು ಸ್ಥಳೀಯರು ಅಭಿಪ್ರಾಯವಾಗಿದೆ.

4 ದಶಕಗಳ ನಂತರ ಕೆರೆ ಭರ್ತಿ

4 ದಶಕಗಳ ನಂತರ ಕೆರೆ ಭರ್ತಿ

1982ರಲ್ಲಿ ಧರ್ಮಪುರ ಕೋಡಿ ಬಿದ್ದಿತ್ತು. ಅಕ್ಟೋಬರ್ ಮೊದಲ ವಾರದಲ್ಲಿ ಸುರಿದ ಮಳೆಯಲ್ಲಿ ಕೆರೆ ತುಂಬಿ 40 ವರ್ಷಗಳ ಬಳಿಕ ಕೋಡಿ ಬಿದ್ದಿತ್ತು. ಜಿಲ್ಲೆಯ ಎರಡನೇ ದೊಡ್ಡ ಕೆರೆಯಾಗಿದ್ದು, ನೊಳಂಬರ ಕಾಲದಲ್ಲಿ ಕೆರೆಯನ್ನು ನಿರ್ಮಾಣ ಮಾಡಲಾಗಿದೆ. ಈ ಕೆರೆ 0.3 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿದ್ದು, 500-700 ಹೆಕ್ಟೇರ್ ವಿಸ್ತೀರ್ಣದಲ್ಲಿದೆ . ಸುಮಾರು 900 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರನ್ನು ಒದಗಿಸಲಿದೆ. ಜೊತೆಗೆ ಹತ್ತಾರು ಕಿಲೋಮೀಟರ್ ದೂರದವರೆಗೂ ಅಂತರ್ಜಲ ವೃದ್ಧಿಯಾಗಲಿದೆ.

ಕೋಡಿ ಬಿದ್ದ ಹಲವು ಕೆರೆ, ಜಲಾಶಯ

ಕೋಡಿ ಬಿದ್ದ ಹಲವು ಕೆರೆ, ಜಲಾಶಯ

ಕೇವಲ ಐಮಂಗಲ ಕೆರೆಯಲ್ಲದೆ ತಾಲೂಕಿನ ಅಂಬಲಗೆರೆ, ರಂಗೇನಹಳ್ಳಿ, ಮೇಟಿಕುರ್ಕೆ, ಜವನಗೊಂಡನಹಳ್ಳಿ, ಗಾಂಧಿನಗರ, ಈಶ್ವರಗೆರೆ ಸೇರಿದಂತೆ ಬಹುತೇಕ ಕೆರೆಗಳು ಭರ್ತಿಯಾಗಿ ತುಂಬಿ ಕೋಡಿ ಬಿದ್ದಿವೆ. 42 ವರ್ಷಗಳ ಬಳಿಕ ಧರ್ಮಪುರ ಐತಿಹಾಸಿಕ ಕೆರೆ ಕೋಡಿ ಬಿದ್ದಿದೆ. ಇತ್ತ ಜಿಲ್ಲೆಯ ಏಕೈಕ ಜೀವನಾಡಿಯಾಗಿರುವ ವಾಣಿ ವಿಲಾಸ ಜಲಾಶಯ ಕೂಡ 89 ವರ್ಷಗಳ ಬಳಿಕ ಭರ್ತಿಯಾಗಿ, ಕೋಡಿ ಬಿದ್ದಿತ್ತು. ಇನ್ನು ಗಾಯಿತ್ರಿ ಜಲಾಶಯವು ಸಹ ಕೋಡಿ ಬಿದ್ದಿದ್ದು ತಾಲೂಕಿನಲ್ಲಿ ನೀರಿನ ಬವಣೆ ದೂರವಾಗಿದೆ.

100 ಅಡಿಗೆ ಸಿಗುತ್ತಿರುವ ನೀರು

100 ಅಡಿಗೆ ಸಿಗುತ್ತಿರುವ ನೀರು

ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಬಹುತೇಕ ಕೆರೆ ಕಟ್ಟೆ, ಹಳ್ಳಕೊಳ್ಳಗಳು ಭರ್ತಿಯಾಗಿವೆ. 500 ರಿಂದ 1000 ಅಡಿಯವರೆಗೂ ಬೋರ್ ವೆಲ್ ಕೊರೆಸಿದರೂ ನೀರು ಸಿಗುತ್ತಿರಲ್ಲಿಲ್ಲ. ಇದೀಗ 100 ಅಡಿಗೆ ನೀರು ಸಿಗುತ್ತದೆ. ಇನ್ನು ಒಣಗಿದ್ದ ತೋಟಗಳು ಮಲೆನಾಡಿನ ತೋಟಗಳಂತೆ ಕಂಗೊಳಿಸುತ್ತಿವೆ. ವಿವಿ ಸಾಗರ ಜಲಾಶಯದಲ್ಲಿ ನೀರು ಹೆಚ್ಚು ಇರುವುದರಿಂದ ರೈತರು ಲಾಭದಾಯಕ ಬೆಳೆಗಳಾದ ಅಡಿಕೆ, ತೆಂಗು, ದಾಳಿಂಬೆ, ಬಾಳೆ ಬೆಳೆಯಲು ಮುಂದಾಗಿದ್ದಾರೆ.

English summary
Aimangala lake in Hiriyur taluk of Chitradurga district overflowing after 45 Years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X