ಚಿತ್ರದುರ್ಗದ ಗಣೇಶೋತ್ಸವದ ವೈಭೋಗ ಕಣ್ತುಂಬಿಕೊಳ್ಳಿ

Posted By: ಚಿತ್ರ-ಮಾಹಿತಿ : ಸಮರ್ಥ್ ಕಾಂತಾವರ
Subscribe to Oneindia Kannada

ಚಿತ್ರದುರ್ಗ, ಸೆಪ್ಟೆಂಬರ್ 12 : ಗಣೇಶನ ಮೂರ್ತಿಯ ಪ್ರತಿಷ್ಠಾಪನೆಯಿಂದ ವಿಸರ್ಜನೆಯವರೆಗೆ ಗೌರಿ ತನಯನದೇ ಆರಾಧನೆ. ಅಲ್ಲಿ ನೋಡು ಗಣೇಶ, ಇಲ್ಲಿ ನೋಡು ಗಣೇಶ. ಹಲವಾರು ವೈವಿಧ್ಯಮಯ ಗಣಪತಿಯ ಸುಂದರ ಮೂರ್ತಿಗಳನ್ನು ನೋಡಿರಬಹುದು. ಆದರೆ, ಚಿತ್ರದುರ್ಗದ ಅದ್ಭುತ ಗಣಪನ ಮೂರ್ತಿಯನ್ನು ಆ ಹಬ್ಬದ ವೈಭೋಗವನ್ನು ಎಂದಾದರೂ ನೋಡಿದ್ದೀರಾ?

ಇಲ್ಲದಿದ್ದರೆ, ಚಿತ್ರಸುದ್ದಿಯೇ ಸಾಕು ಕಳೆದ ಐದಾರು ವರ್ಷಗಳಿಂದ ಕೋಟೆಗಳ ನಗರಿ ಚಿತ್ರದುರ್ಗದಲ್ಲಿ ಗಣೇಶೋತ್ಸವವನ್ನು ಎಷ್ಟು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ, ಎಂಥೆಂಥ ಆಕರ್ಷಣೆಗಳಿರುತ್ತವೆ, ಈ ವರ್ಷ ಏನೇನು ವಿಶೇಷಗಳಿದ್ದವು ಎಂಬುದ ತಿಳಿಯಲು.

ದುರ್ಗದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆಯ ಸಂಭ್ರಮವೇ ಅಂತಹುದು. ಒಂದುಕಡೆ ಮಣ್ಣಿನಿಂದಲೇ ಮಾಡಿದ ಗಣಪನ ತ್ರಿಮೂರ್ತಿ ವಿಗ್ರಹ ಒಂದೆಡೆಯಾದರೆ, ಜಾತಿ ಮತ ಎಲ್ಲವನ್ನೂ ಮರೆತು ಇಡೀ ನಗರಕ್ಕೆ ನಗರವೇ ಈ ಸಂಭ್ರಮದಲ್ಲಿ ತೊಡಗಿಕೊಳ್ಳುವುದಿದೆಯಲ್ಲ, ಅದರ ವರ್ಣನೆಯೇ ಪದಗಳಿಗೆ ಮೀರಿದ್ದು.

ಪ್ರತಿವರ್ಷ ಅನಂತ ಚತುರ್ದಶಿಯ ನಂತರ ಬರುವ ಶನಿವಾರದಂದೇ ಆಯೋಜಿಸಲಾಗುವ ಗಣಪತಿ ವಿಸರ್ಜನೆಯ ಉತ್ಸವ ಇಡೀ ಕರ್ನಾಟಕದ ಯಾವುದೇ ನಾಡಹಬ್ಬಕ್ಕಿಂತ ಕಡಿಮೆಯಿರುವುದಿಲ್ಲ. ಶಾಲಾಕಾಲೇಜು, ಸರಕಾರಿ ಕಚೇರಿಗಳಷ್ಟೇ ಏಕೆ, ಎಲ್ಲ ಅಂಗಡಿ ಮುಂಗಟ್ಟು, ವ್ಯಾಪಾರ ವಹಿವಾಟಿಗೂ ಅಂದು ಅಘೋಷಿತ ರಜಾ, ಅಬ್ಬರದ ಸಂಭ್ರಮ.

ಈ ಬಾರಿಯ ಗಣೇಶನ ವಿಶೇಷವೇನು?

ಈ ಬಾರಿಯ ಗಣೇಶನ ವಿಶೇಷವೇನು?

ಒಂದು ಬದಿಯಲ್ಲಿ ಆಂಜನೇಯ, ಇನ್ನೊಂದು ಬದಿಯಲ್ಲಿ ಗರುಡನ ಮುಖವಿರುವ 20 ಅಡಿಯಷ್ಟಿರುವ ನಿಂತಿರುವ ಗಣಪತಿಯ ವಿಗ್ರಹದ ಸೌಂದರ್ಯ ನೋಡಲು ಎರಡು ಕಣ್ಣು ಸಾಲದು. ಈ ಬಾರಿ ಮಹಾರಾಷ್ಟ್ರದ ಸಾಂಗ್ಲಿಯಿಂದ ಮಣ್ಣಿನಿಂದ ತಯಾರಿಸಿದ ಪರಿಸರಪ್ರೇಮಿ ಮೂರ್ತಿಯನ್ನು ತರಿಸಲಾಗಿತ್ತು.

ಈ ಉತ್ಸವ ಆರಂಭವಾಗಿದ್ದಾದರೂ ಹೇಗೆ?

ಈ ಉತ್ಸವ ಆರಂಭವಾಗಿದ್ದಾದರೂ ಹೇಗೆ?

ಈ ಉತ್ಸವದ ಹಿಂದೆ ರೋಚಕ ಕಥೆಯಿದೆ. ಇದು ಆರಂಭವಾದದ್ದು 2011ರಲ್ಲಿ. ಆಗ ಬೆರಳೆಣಿಕೆಯಷ್ಟು ಮಾತ್ರ ಜನ ಸೇರಿದ್ದರು. ಇದನ್ನು ಮನಗಂಡ ಆಯೋಜಕರಾದ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳದವರು ಗಣೇಶೋತ್ಸವವನ್ನು ಇನ್ನೂ ವಿಜೃಂಭಣೆಯಿಂದ ಆಚರಿಸಬೇಕೆಂದು ನಿರ್ಧಾರ ತೆಗೆದುಕೊಳ್ಳಲಾಯಿತು. ಇದಕ್ಕೆ ದುರ್ಗದ ಶಾಸಕ ಜಿಎಚ್ ತಿಪ್ಪಾರೆಡ್ಡಿಯವರ ಬೆಂಬಲವೂ ದಕ್ಕಿದ್ದರಿಂದ ಉತ್ಸವದ ಚಿತ್ರಣವೇ ಬದಲಾಯಿತು.

ಲಕ್ಷಾಂತರ ಜನರಿಂದ ಹೆಚ್ಚಿದ ಉತ್ಸವದ ಕಳೆ

ಲಕ್ಷಾಂತರ ಜನರಿಂದ ಹೆಚ್ಚಿದ ಉತ್ಸವದ ಕಳೆ

2012ರಲ್ಲಿ ಆಂಜನೇಯನ ಹೆಗಲ ಮೇಲೆ ಕುಳಿತ ಗಣೇಶನ ಮೂರ್ತಿ ಯುದ್ಧಕ್ಕೆ ಸನ್ನದ್ಧನಾಗಿ ಕುಳಿತಂತೆ ಇತ್ತು. ಆ ವರ್ಷ ಸುಮಾರು 1 ಲಕ್ಷಕ್ಕೂ ಹೆಚ್ಚು ಜನರು ಜಮಾಯಿಸಿ ಉತ್ಸವದ ಕಳೆಯನ್ನು ಹೆಚ್ಚಿಸಿದ್ದರು. ಇಷ್ಟು ವರ್ಷ ಯಾವುದೇ ಅಹಿತಕರ ಘಟನೆ ನಡೆಯದೇ ಕೋಮು ಸಾಮರಸ್ಯಕ್ಕೆ ಸಾಕ್ಷಿಯಾಗಿದೆ.

ಕಲಾಶ್ರೀಮಂತಿಕೆಯ ಅದ್ಭುತ ಪ್ರದರ್ಶನ

ಕಲಾಶ್ರೀಮಂತಿಕೆಯ ಅದ್ಭುತ ಪ್ರದರ್ಶನ

ಈ ವರ್ಷ ಜಮಾಯಿಸಿದ್ದು ಎರಡೂವರೆ ಲಕ್ಷ ಜನ! ಎಲ್ಲೆಲ್ಲೂ ಜನವೋ ಜನ. ಬೆಳಿಗ್ಗೆ 10 ಗಂಟೆಗೆ ಆರಂಭವಾದ ಮೆರವಣಿಗೆ ರಾತ್ರಿ 11ವರೆಗೆ ನಡೆದಿತ್ತೆಂದರೆ ಉತ್ಸವದ ವೈಭೋಗ ಹೇಗಿತ್ತೆಂದು ಊಹಿಸಿ. ಸ್ಟೇಡಿಯಂ ರಸ್ತೆಯಲ್ಲಿರುವ ಆಂಜನೇಯ ದೇವಸ್ಥಾನದಿಂದ ವಿಸರ್ಜಿಸಲಾಗುವ ಚಂದ್ರವಳ್ಳಿಯ ತೋಟದವರೆಗೆ ಹಾಡು, ಕುಣಿತ, ಕಲಾಶ್ರೀಮಂತಿಕೆಯ ಅದ್ಭುತ ಪ್ರದರ್ಶನ.

ನಾಶಿಕದಿಂದ ಬಂದಿದ್ದ ಡೋಲು ಕಲಾವಿದರು

ನಾಶಿಕದಿಂದ ಬಂದಿದ್ದ ಡೋಲು ಕಲಾವಿದರು

ಮತ್ತೊಂದು ವಿಶೇಷವೆಂದರೆ, ಮಹಾರಾಷ್ಟ್ರದ ನಾಶಿಕದಿಂದ ಡೋಲು ಬಾರಿಸುವವರನ್ನು ಕರೆಸಲಾಗಿತ್ತು, ಕೇರಳದಿಂದ ಚಂಡೆ ಕಲಾವಿದರು ಬಂದಿದ್ದರು. ವೀರಗಾಸೆ, ಛದ್ಮವೇಷ ಧಾರಿಗಳು, ಸೋಮನ ಕುಣಿತ ನೋಡುಗರನ್ನು ಆನಂದ ಸಾಗರದಲ್ಲಿ ಮುಳುಗಿಸಿತ್ತು. ಹುಬ್ಬಳ್ಳಿ, ಬೆಳಗಾವಿ, ದಾವಣಗೆರೆ, ಧಾರವಾಡ, ರಾಣೆಬೆನ್ನೂರು ಮತ್ತು ಚಿತ್ರದುರ್ಗದ ಸುತ್ತಲಿನ ಹಳ್ಳಿಗಳಿಂದಲೂ ಜನರು ಜಮಾಯಿಸಿದ್ದರು. ತಮಿಳುನಾಡು, ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಿಂದಲೂ ಜನ ಬಂದಿದ್ದರು.

ಎಲ್ಲರಿಗೂ ಊಟ ತಿಂಡಿಯ ವ್ಯವಸ್ಥೆ

ಎಲ್ಲರಿಗೂ ಊಟ ತಿಂಡಿಯ ವ್ಯವಸ್ಥೆ

ಇನ್ನು ಲಕ್ಷಲಕ್ಷ ಜನರಿಗೆ ಊಟ, ತಿಂಡಿ, ನೀರಿನ ವ್ಯವಸ್ಥೆಯನ್ನು ಮಾಡಿದ್ದು ಆರ್ಯವೈಶ್ಯ ಮತ್ತು ಜೈನ ಸಮುದಾಯದವರು. ಮೆರವಣಿಗೆಯ ಹಾದಿಯುದ್ದಕ್ಕೂ ಪೆಂಡಾಲ್ ಹಾಕಿ ತಿಂಡಿ ತೀರ್ಥದ ಸೇವೆ ಮಾಡಲಾಗಿತ್ತು. ಆದರೆ, ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ಅದೆಷ್ಟೋ ಜನರಿಗೆ ಊಟ ತಿಂಡಿಯ ಪರಿವೆಯೇ ಇರಲಿಲ್ಲ.

ಚಿತ್ರದುರ್ಗದೆಲ್ಲೆಡೆ ಕೇಸರಿಯ ರಂಗು

ಚಿತ್ರದುರ್ಗದೆಲ್ಲೆಡೆ ಕೇಸರಿಯ ರಂಗು

ಚಿತ್ರದುರ್ಗದಲ್ಲೆಲ್ಲೂ ಅಂದು ಕೇಸರಿ ರಂಗು. ಮುಖಕ್ಕೆ ಕೇಸರಿ ಬಣ್ಣದಿಂದ ಅಲಂಕಾರ ಮಾಡಿಕೊಂಡವರೆಷ್ಟೋ, ಕೇಸರಿ ಪೇಟ ಸುತ್ತಿಕೊಂಡು ನಲಿದಾಡಿದವರೆಷ್ಟೋ, ಎಲ್ಲೆಲ್ಲೂ ಭಜರಂಗಿಯ ಕೇಸರಿ ಬಾವುಟಗಳು, ಕೇಸರಿ ಬ್ಯಾನರುಗಳು, ಕೇಸರಿ ರಂಗೋಲಿ, ಕೇಸರಿ ಮಂಟಪ... ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗಿ ಸಮಾವೇಶದಂತೆ ಕಂಡಿದ್ದರೂ ಅಚ್ಚರಿಯಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Vishwa Hindu Parishat and Bajrang Dal have been organizing Hindu Mahaganapati Shobhayatre in Chitradurga every year. Procession of 20 feet Ganesha idol was taken throught out the day, more than 2.5 lakh people from all parts of India participated in this mega religious event.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ