ಒಂದೇ.. ಒಂದು ಕಾಲ್ ಮಾಡಿದ್ದಕ್ಕೆ ವಿದ್ಯಾರ್ಥಿಗೆ ಹಿಗ್ಗಾಮುಗ್ಗಾ ಥಳಿಸಿದ ಮುಖ್ಯ ಶಿಕ್ಷಕ: ವಿಡಿಯೋ ವೈರಲ್
ಚಿತ್ರದುರ್ಗ, ಅಕ್ಟೋಬರ್ 21: ತನ್ನ ಅಜ್ಜಿಗೆ ವಿದ್ಯಾರ್ಥಿ ಒಂದೇ ಒಂದು ಕಾಲ್ ಮಾಡಿದ್ದಕ್ಕೆ ಮುಖ್ಯ ಶಿಕ್ಷಕ ಥಳಿಸಿದ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿನ ವಸತಿ ಶಾಲೆಯೊಂದರಲ್ಲಿ ನಡೆದಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಇದಕ್ಕೆ ವ್ಯಾಪಕ ಆಕ್ರೋಶಗಳು ವ್ಯಕ್ತವಾಗಿವೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಗ್ರಾಮದ ಸಂಸ್ಕೃತ ವೇದಾಧ್ಯಯನ ವಸತಿ ಶಾಲೆಯಲ್ಲಿ ಮುಖ್ಯ ಶಿಕ್ಷಕ ವೀರೇಶ್ ಹಿರೇಮಠ್ 9 ವರ್ಷದ ವಿದ್ಯಾರ್ಥಿ ತರುಣ್ ಮೇಲೆ ಕ್ರೌರ್ಯ ಮೆರೆದಿದ್ದಾರೆ. ಇದಕ್ಕೆ ಇದೀಗ ಭಾರೀ ಆಕ್ರೋಗಳು ಭುಗಿಲೆದ್ದಿವೆ.

ವಿದ್ಯಾರ್ಥಿ ತನ್ನ ಅಜ್ಜಿಗೆ ಫೋನ್ ಮಾಡಿದ್ದು, ಇದನ್ನು ಪ್ರಶ್ನಿಸಿದ ಶಿಕ್ಷಕ ಆತನ ಮೇಲೆ ತನಗೆ ಇಚ್ಚೆ ಬಂದಂತೆ ಹಲ್ಲೆ ನಡೆಸಿದ್ದಾರೆ. ಸಾಮಾನ್ಯವಾಗಿ ವಿದ್ಯಾರ್ಥಿಗಳು ತಪ್ಪು ಮಾಡಿದರೆ, ಅವರಿಗೆ ಒಂದೆರಡು ಹೊಡೆದು ಬುದ್ಧಿವಾದ ಹೇಳುತ್ತಾರೆ. ಆದರೆ, ಈ ಮುಖ್ಯ ಶಿಕ್ಷಕ ವಿದ್ಯಾರ್ಥಿ ತನ್ನ ಅಜ್ಜಿಗೆ ಪೋನ್ ಮಾಡಿದ್ದಕ್ಕೆ ಆತನನ್ನು ಥಳಿಸಿ ವಿಕೃತಿ ಮೆರೆದಿದ್ದಾರೆ.
ಶಿಕ್ಷಕ ವಿದ್ಯಾರ್ಥಿಗೆ ಕಾಲಿನಿಂದ ಒದ್ದು ವಿಕೃತಿ ಮೆರೆದಿದ್ದಾರೆ. ಈ ಘಟನೆಯ ದೃಶ್ಯಗಳು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಶಿಕ್ಷಕ ನಾಪತ್ತೆ ಆಗಿದ್ದು, ಸಾರ್ವಜನಿಕರು ಹಾಗೂ ಪೋಷಕರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಉತ್ತರ ಕರ್ನಾಟಕ ಮೂಲದ ವಿದ್ಯಾರ್ಥಿ ತರುಣ್ ಹಲ್ಲೆಗೊಳಗಾದವನಾಗಿದ್ದಾನೆ. ದೇಗುಲಕ್ಕೆ ಸೇರಿದ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಅಜ್ಜಿಗೆ ಬೇರೆ ನಂಬರ್‌ನಿಂದ ಕರೆ ಮಾಡಿದರೆ ಬಿಡುವುದಿಲ್ಲ ಎಂದು ಶಿಕ್ಷಕ ವೀರೇಶ್ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆಯ ಕುರಿತು ಗುರು ತಿಪ್ಪೇಸ್ವಾಮಿ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರಪ್ಪ ಅವರು ನಾಯಕನಹಟ್ಟಿ ಪೊಲೀಸ್ ಠಾಣೆಗೆ ದೂರು ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಮತ್ತೊಂದೆಡೆ ಎರಡು ದಿನ ತರಗತಿಗೆ ಬರದ ಹಿನ್ನೆಲೆ ವಿದ್ಯಾರ್ಥಿಯನ್ನು ಕತ್ತಲು ರೂಮಿನಲ್ಲಿ ಕೂಡಿಹಾಕಿ ಪಿವಿಸಿ ಪೈಪ್‌ನಿಂದ ಹೊಡೆದು ಚಿತ್ರಹಿಂಸೆ ಕೊಟ್ಟಿರುವ ಘಟನೆ ಬೆಂಗಳೂರಿನ ಸುಂಕದಕಟ್ಟೆಯ ಖಾಸಗಿ ಶಾಲೆಯೊಂದಲ್ಲಿ ನಡೆದಿದೆ. ಶಿಕ್ಷಕನ ಈ ಕೃತ್ಯದಿಂದ ಐದನೇ ತರಗತಿ ವಿದ್ಯಾರ್ಥಿ ಭಯಗೊಂಡು ನರಳಾಡುತ್ತಿದ್ದು, ಬಳಿಕ ಬಾಲಕ ಮನೆಯಲ್ಲಿ ಕಿರುಚಾಡುತ್ತ ಓಡಾಡುತ್ತ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಈ ಸ್ಥಿತಿ ಕಂಡು ಪೋಷಕರು ಕಂಗಾಲಾಗಿದ್ದು, ಶಿಕ್ಷಕರ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಸುಂಕದಕಟ್ಟೆಯಲ್ಲಿ ಇರುವ ಖಾಸಗಿ ಶಾಲೆಯಲ್ಲಿ ದಿವ್ಯ ದಂಪತಿ ಮಗ 5ನೇ ತರಗತಿಯಲ್ಲಿ ಓದುತ್ತಿದ್ದಾನೆ. ಆದರೆ ಕಳೆದ ವಾರ ಎರಡು ದಿನ ತರಗತಿಗೆ ಹೋಗಿರಲಿಲ್ಲವಂತೆ. ಇದಕ್ಕೆ ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕರು ಕ್ಲಾಸ್ ಬಿಟ್ಟ ನಂತರ ಕ್ಲಾಸ್ ರೂಮಿನಲ್ಲಿ ಕೂಡಿಹಾಕಿ ಪೈಪ್‌ನಿಂದ ಬಾಸುಂಡೆ ಬರುವಂತೆ ಹೊಡೆದಿದ್ದಾರೆ. ಬಳಿಕ ಡಾರ್ಕ್ ರೂಮ್‌ನಲ್ಲಿ ಕೂಡಿಹಾಕಿ ಚಿತ್ರಹಿಂಸೆ ಕೊಟ್ಟಿದ್ದಾರಂತೆ.
ಇದರಿಂದ ದೇಹದ ಕೆಲವು ಭಾಗಗಳಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಆಸ್ಪತ್ರೆಗೆ ಸೇರಿಸಿದ್ದಾರಂತೆ. ಇನ್ನು ಹಲ್ಲೆಯಾದ ಬಳಿಕ ಮನೆಯಲ್ಲಿ ಮಗು ವಿಚಿತ್ರವಾಗಿ ಕಿರುಚಾಡುತ್ತ, ಓಡಾಡುತ್ತಿದ್ದಾನೆ ಎಂದು ಪೋಷಕರು ಆರೋಪ ಮಾಡಿದ್ದಾರೆ. ಅಲ್ಲದೆ, ಮಗುವಿನ ಸ್ಥಿತಿಗೆ ಕಂಗಾಲಾಗಿದ್ದಾರೆ. ಬಳಿಕ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇವರೇನು ಮನುಷ್ಯರಾ ಅಥವಾ ಮೃಗಗಳಾ ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತೊಡಿಸಿದ್ದಾರೆ.
ಹಲ್ಲೆ ಮಾಡಿದ ಬಳಿಕವೂ ಶಾಲಾ ಆಡಳಿತ ಮಂಡಳಿಯವರು ಒಂದೇ ಒಂದು ಕಾಲ್ ಮಾಡಿ ಮಗುವಿನ ಆರೋಗ್ಯದ ಬಗ್ಗೆ ವಿಚಾರಿಸಿಲ್ಲ. ಬದಗಿಲಾ ಆ ವಿದ್ಯಾರ್ಥಿಯೇ ಗಾಂಜಾ ಸೇವನೆ ಮಾಡುತ್ತಾನೆ ಎಂದು ತಮ್ಮ ತಪ್ಪು ಮುಚ್ಚಿಕೊಳ್ಳಲು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications