ಚಿತ್ರದುರ್ಗದಲ್ಲಿ ಬದಲಾಯ್ತು ಚಿತ್ರಣ; ಬರಡಾಗಿದ್ದ ನೆಲದಿಂದ ಚಿಮ್ಮುತ್ತಿದೆ ನೀರು
ಚಿತ್ರದುರ್ಗ, ಅಕ್ಟೋಬರ್ 25: ನೀರಿಲ್ಲದೇ ಸೊರಗಿ ಹೋಗಿದ್ದ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಈಗ ಕೊಳವೆ ಬಾವಿಗಳಲ್ಲಿ ನೀರು ಚಿಮ್ಮುತ್ತಿದೆ. ಕಳೆದ ನಾಲ್ಕೈದು ದಿನಗಳಿಂದ ಜಿಲ್ಲೆಯಲ್ಲಿ ಮಳೆಯಾಗುತ್ತಿರುವುದು ಜಿಲ್ಲೆಯ ಜನರಿಗೆ ನೆಮ್ಮದಿಯನ್ನು ತಂದಿದೆ. ಬಿರು ಬಿಸಿಲನ್ನೇ ಹಾಸಿ ಹೊದ್ದಂತಿದ್ದ ಚಿತ್ರದುರ್ಗದಲ್ಲಿ ಮಳೆಯಾಗುತ್ತಿರುವುದು ರೈತರಲ್ಲಿ ಭರವಸೆಯನ್ನೂ ಮೂಡಿಸಿದೆ. 800-1000 ಅಡಿಯವರೆಗೂ ಕೊರೆಸಿದರೂ ಕೊಳವೆಬಾವಿಯಲ್ಲಿ ನೀರು ಕಾಣಿಸಿಕೊಳ್ಳುತ್ತಿರಲಿಲ್ಲ. ಇದೀಗ ನೀರು ಚಿಮ್ಮುತ್ತಿರುವುದು ಜನರಲ್ಲಿ ಸಂತಸ ಮೂಡಿಸಿದೆ.

ಅಂತರ್ಜಲ ಹೆಚ್ಚಳದ ಸೂಚನೆ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಯಲ್ಲದಕೆರೆ ಕರಿಯಮ್ಮ ದೇವಸ್ಥಾನದ ಆವರಣದಲ್ಲಿ ಇಂದು ಕೊಳವೆಬಾವಿಯಲ್ಲಿ ಕಂಡುಬಂದಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ತಿಂಗಳು ಒಂದಷ್ಟು ಮಳೆಯಾಗಿತ್ತು. ನಂತರ ಹಿಂಗಾರು ಮಳೆಯೂ ಆಗಿದ್ದು, ನೆಲದಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿರುವುದನ್ನು ತೋರುತ್ತಿದೆ. ಜಿಲ್ಲೆಯಲ್ಲಿ ಬಹುತೇಕ ಎಲ್ಲ ಕಡೆ ಮಳೆಯಾಗಿದ್ದು, ಕೆರೆ ಕಟ್ಟೆಗಳು, ಚೆಕ್ ಡ್ಯಾಂಗಳು ತುಂಬಿ ಹರಿಯುತ್ತಿವೆ. ನಾಲ್ಕು ದಿನಗಳ ಹಿಂದೆ ಹೊಸದುರ್ಗದಲ್ಲಿ ಸುರಿದ ಮಳೆಗೆ ನೀರಗುಂದ ಕೆರೆ ಒಡೆದುಹೋಗಿ ಅನೇಕ ಗ್ರಾಮಗಳಿಗೆ ನೀರು ನುಗ್ಗಿತ್ತು. ಬತ್ತಿ ಹೋಗಿದ್ದ ಬೋರ್ವೆಲ್ ಗಳು ಮಳೆಯಿಂದ ಸೀಪೇಜ್ ಆಗಿದ್ದು ಅಲ್ಲಲ್ಲಿ ಕೊಳವೆ ಬಾವಿಯಲ್ಲಿ ನೀರು ಚಿಮ್ಮಿ ಬರುತ್ತಿವೆ. ಮೂರು ದಿನಗಳ ಹಿಂದೆಯೂ ಹೊಸದುರ್ಗ ತಾಲೂಕಿನ ಅಗರಸರಳ್ಳಿ ರೈತನ ಹೊಲದಲ್ಲಿ ಇದೇ ತರಹ ಕೊಳವೆ ಬಾವಿಯಲ್ಲಿ ನೀರು ಚಿಮ್ಮುತ್ತಿತ್ತು.

ಮತ್ತೆ ಕೃಷಿಯೆಡೆಗೆ ಮುಖ ಮಾಡಿದ ರೈತರು
ಜಿಲ್ಲೆಯಲ್ಲಿ ಸತತವಾಗಿ ಸುರಿದ ಮಳೆಯಿಂದ ಸುಮಾರು ವರ್ಷಗಳ ನಂತರ ಹಿರಿಯೂರಿನ ಹೃದಯಭಾಗದಲ್ಲಿರುವ ವೇದಾವತಿ ನದಿ ಹರಿದಿದೆ. ಇದರಿಂದ ಅಕ್ಕಪಕ್ಕದ ತೋಟಗಳು ಹಸಿರಿನಿಂದ ನಳನಳಿಸುತ್ತಿವೆ. ಕೃಷಿಯ ಬಗ್ಗೆ ನಂಬಿಕೆ ಕಳೆದುಕೊಂಡಿದ್ದ ರೈತರು ಮತ್ತೆ ಕೃಷಿ ಚಟುವಟಿಕೆಯ ಕಡೆ ಮುಖಮಾಡಿದ್ದಾರೆ. ವೇದಾವತಿ ನದಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹುಟ್ಟಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮುಖಾಂತರವಾಗಿ ಚಳ್ಳಕೆರೆ ತಾಲೂಕಿನ ನಾರಾಯಣಪುರ ಡ್ಯಾಮ್ ಮೂಲಕ ಆಂಧ್ರ ಪ್ರದೇಶ ಸೇರುತ್ತದೆ.

ಇಂದಿನ ಚಿತ್ರದುರ್ಗದ ಚಿತ್ರಣವೇ ಬೇರೆ
ಕೆಲವೇ ತಿಂಗಳ ಹಿಂದೆ ಮಳೆ ಇಲ್ಲದೆ ಕಂಗಾಲಾಗಿದ್ದ ಚಿತ್ರದುರ್ಗ ಜಿಲ್ಲೆಯಲ್ಲಿ ತೋಟಗಳು ಒಣಗಿದ್ದವು. ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿತ್ತು. ಜಾನುವಾರುಗಳು ನೀರು ಮೇವಿಲ್ಲದೆ ಸಾವಿನ ದವಡೆಯಲ್ಲಿದ್ದವು. ಅಂತರ್ಜಲ ಮಟ್ಟ ಕುಸಿದಿತ್ತು. 800-1000 ಅಡಿಯವರೆಗೂ ಬೋರ್ ಕೊರೆಸಿದರೂ ನೀರು ಬರುತ್ತಿರಲಿಲ್ಲ, ತೋಟಗಳನ್ನು ಉಳಿಸಿಕೊಳ್ಳಲು ರೈತರು ಟ್ಯಾಂಕರ್ ಮೂಲಕ ನೀರು ಹರಿಸುತ್ತಿದ್ದರು. ಈಗ ಅದೇ ಕೊಳವೆಬಾವಿಯಲ್ಲಿ ನೀರು ಚಿಮ್ಮಿಬರುತ್ತಿವೆ.

ಬರದ ಆತಂಕ ದೂರ
ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರುವುದರಿಂದ ಜನರಿಗೆ ನೀರಿನ ಬರದ ಆತಂಕ ದೂರವಾಗಿದೆ. ಎಷ್ಟೋ ವರ್ಷದಿಂದ ಜಿಲ್ಲೆಯಲ್ಲಿ ಸಮರ್ಪಕವಾಗಿ ಮಳೆ ಆಗಿರಲಿಲ್ಲ. ಮಳೆಗಾಗಿ ಜನ ಕಾದು ಕುಳಿತಿದ್ದರು. ಈ ವರ್ಷ ಮಳೆ ಜನರ ನಿರೀಕ್ಷೆಯನ್ನು ಹುಸಿಗೊಳಿಸಿಲ್ಲ. ಈ ವರ್ಷದಲ್ಲಿ ವಿವಿ ಸಾಗರದ ನೀರಿನ ಮಟ್ಟ 91.50 ಅಡಿ ಇದೆ. ಪ್ರಸ್ತುತ ವರ್ಷದಲ್ಲಿ ಜಲಾಶಯಕ್ಕೆ 30 ಅಡಿ ನೀರು ಹರಿದುಬಂದಿದೆ.












Click it and Unblock the Notifications