ಮತ್ತೆ ಸಚಿವರಾಗಲಿದ್ದಾರೆಯೇ ಜಿ. ಎಂ. ಸಿದ್ದೇಶ್ವರ್?
ಚಿತ್ರದುರ್ಗ, ಜುಲೈ 02; "ಕೇಂದ್ರ ಸಂಪುಟದಲ್ಲಿ ಮಂತ್ರಿಯನ್ನಾಗಿ ಮಾಡುವುದು ಪ್ರಧಾನಿ ಇಚ್ಛೆಗೆ ಬಿಟ್ಟಿದ್ದು, ಅವರು ಯಾರನ್ನು ಮಂತ್ರಿ ಮಾಡುತ್ತಾರೋ ಗೊತ್ತಿಲ್ಲ. ನಾನಂತೂ ಆಕಾಂಕ್ಷಿಯಲ್ಲ" ಎಂದು ದಾವಣಗೆರೆ ಸಂಸದ ಜಿ. ಎಂ. ಸಿದ್ದೇಶ್ವರ್ ಹೇಳಿದರು.
ಶುಕ್ರವಾರ ಚಿತ್ರದುರ್ಗ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ನನ್ನ ಹೆಸರಿಲ್ಲ, ಅವರ ಹೆಸರಿಲ್ಲ ಎಂದು ಮಾಧ್ಯಮಗಳು ಬಿತ್ತರ ಮಾಡಿದ್ದವು. ಆದರೆ ಕೊನೆ ಗಳಿಗೆಯಲ್ಲಿ ಅನಂತಕುಮಾರ್ ಹೆಗಡೆ ಸಚಿವರಾದರು" ಎಂದರು.
"ಈ ಬಾರಿ ಯಾರನ್ನೂ ಕೇಂದ್ರ ಮಂತ್ರಿ ಮಾಡುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ. ಕೇಂದ್ರದ ಮಂತ್ರಿ ಸ್ಥಾನದ ಆಕಾಕ್ಷಿಯಂತೂ ನಾನಲ್ಲ. ಆದರೆ ಕೊಟ್ಟರೆ ಮಾತ್ರ ಸ್ವೀಕರಿಸುವೆ" ಎನ್ನುವ ಮೂಲಕ ಪರೋಕ್ಷವಾಗಿ ಸಚಿವ ಸ್ಥಾನದ ಆಸೆ ಬಿಚ್ಚಿಟ್ಟರು.

"ಕೊಟ್ಟ ಕುದುರೆ ಏರದವ ವೀರನೂ ಅಲ್ಲ ಶೂರನೂ ಅಲ್ಲ. ಆದರೆ ಯುವಕರಿಗೆ ಮಂತ್ರಿ ಪದವಿ ಕೊಟ್ಟರೆ ತುಂಬಾ ಉತ್ತಮ" ಎಂದು ಸಿದ್ದೇಶ್ವರ್ ಹೇಳಿದರು.
ವಿಚಾರ ನನಗೆ ಗೊತ್ತಿಲ್ಲ; "ಶ್ರೀರಾಮುಲು ಆಪ್ತನ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿದ್ದೇಶ್ವರ್, "ಈ ವಿಚಾರ ನನಗೆ ಗೊತ್ತಿಲ್ಲ. ಯಾರೋ ಮಾಡಿದ ತಪ್ಪಿಗೆ ಬಿಜೆಪಿ ಹೆಸರು ಹೇಳುವುದು ತಪ್ಪು. ಬಿಜೆಪಿ ರಾಷ್ಟ್ರೀಯ ಪಕ್ಷ ಸಂಘ ಸಂಸ್ಥೆಗಳಿಂದ ಬೆಳೆದ ಪಕ್ಷ. ಯಾರೋ ಬರುತ್ತಾರೆ. ಯಾರೋ ಹೆಸರು ಹೇಳಿ ಮಾಡುತ್ತಾರೆ. ನನ್ನ ಹೆಸರು ಹೇಳಿ ಭ್ರಷ್ಟಾಚಾರ ಮಾಡಿದರೆ ನಾನೇನು ಮಾಡಲಿ?" ಎಂದರು.
"ಕಾಂಗ್ರೆಸ್‌ನಲ್ಲಿ 4 ಜನ ಸಿಎಂ ಸ್ಥಾನಕ್ಕೆ ಓಡಾಡುತ್ತಿದ್ದಾರೆ. ಬಿಜೆಪಿ ಒಂದು ಮನೆ, ಸ್ವಲ್ಪ ಗುದ್ದಾಡಿ ಸರಿ ಹೋಗುತ್ತಾರೆ. ಯಡಿಯೂರಪ್ಪನವರೇ ಇನ್ನೆರಡು ವರ್ಷ ಮುಖ್ಯ ಮಂತ್ರಿಯಾಗಿರುತ್ತಾರೆ" ಎಂದು ಹೇಳಿದರು.
ಜಿ. ಎಂ. ಸಿದ್ದೇಶ್ವರ್ ಹಿಂದೆ ಪ್ರಧಾನಿ ಮೋದಿ ಸಂಪುಟದಲ್ಲಿ ಸಚಿವರಾಗಿದ್ದರು. ಭಾರೀ ಕೈಗಾರಿಕೆ ರಾಜ್ಯ ಖಾತೆ ಸಚಿವರಾಗಿದ್ದ ಅವರು 2016ರಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.












Click it and Unblock the Notifications