ಶ್ರೀ ರಾಮುಲು ಸೋಲಿನ ಬಳಿಕ ಮೊಳಕಾಲ್ಮೂರಿನಿಂದ ಪಲಾಯನ ಮಾಡಬಹುದು- ವಿ.ಎಸ್ ಉಗ್ರಪ್ಪ
ಚಿತ್ರದುರ್ಗ, ಡಿಸೆಂಬರ್ 5: ಮುಂಬರುವ 2023ರ ವಿಧಾನಸಭಾ ಚುನಾವಣೆಗೆ ಕೆಲವು ತಿಂಗಳು ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ಕೆಲವರು ಕ್ಷೇತ್ರಕ್ಕಾಗಿ ಹುಡುಕಾಟ ಆರಂಭಿಸಿದ್ದಾರೆ. ಇನ್ನು ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲೂ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಜಟಾಪಟಿ ಜೋರಾಗಿದೆ.
ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಸಚಿವ ಬಿ. ಶ್ರೀರಾಮುಲು ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಸಿದ್ಧರಾಗಿದ್ದಾರೆ.
ಹೊಸನಾಯಕರಹಟ್ಟಿಯಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಶಿಕ್ಷಕಿಯಾದ ಶಾಸಕಿ ಪೂರ್ಣಿಮಾ
ಈ ಕುರಿತು ಜಿಲ್ಲೆಯ ಹಿರಿಯೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಂಸದ ವಿ.ಎಸ್ ಉಗ್ರಪ್ಪ, ಸೋಲಿನ ಭಯದಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ಪಲಾಯನ ಮಾಡುವುದು ಬೇಡ. ನೀವು ಮೊಳಕಾಲ್ಮೂರು ಕ್ಷೇತ್ರದಲ್ಲಿ ಸ್ಪರ್ಧಿಸಿ, ನಾನು ನಿಮ್ಮ ವಿರುದ್ಧ ಸ್ಪರ್ಧಿಸಲು ಸಿದ್ಧ, ನನ್ನ ವಿರುದ್ಧ ಸೋಲುವ ಮೂಲಕ ಪಲಾಯನ ಮಾಡಬಹುದು ಎಂದು ಸಾರಿಗೆ ಸಚಿವ ಶ್ರೀರಾಮುಲು ವಿರುದ್ಧ ಉಗ್ರಪ್ಪ ವ್ಯಂಗ್ಯವಾಡಿದ್ದಾರೆ.

ಮೊಳಕಾಲ್ಮೂರಿನ ಜನ ನನಗೆ ಪರಿಚಿತರು-ವಿ.ಎಸ್ ಉಗ್ರಪ್ಪ
ಈಗಾಗಲೇ ಪಕ್ಷದ ಹಿರಿಯ ನಾಯಕರ ಒತ್ತಾಯದಿಂದ ಮೊಳಕಾಲ್ಮೂರು ಕ್ಷೇತ್ರದಲ್ಲಿ ಸ್ಪರ್ಧಿಸಲು ಅರ್ಜಿ ಸಲ್ಲಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಅರ್ಜಿ ಹಾಕಲಾಗಿದೆ. ನನ್ನ ಜೊತೆಗೆ ಅಲ್ಲಿನ ಕೆಲವು ಮುಖಂಡರು ಅರ್ಜಿ ಸಲ್ಲಿಸಿದ್ದಾರೆ. ಈ ಭಾಗದ ಹೆಚ್ಚು ಜನರು ನನಗೆ ಪರಿಚಿತರಾಗಿದ್ದರಿಂದ , ಸ್ಥಳೀಯವಾಗಿ ಒಳ್ಳೆಯ ಕಾರ್ಯಕರ್ತರು ಹಾಗೂ ನಾಯಕರಿದ್ದಾರೆ. ಸಚಿವ ಶ್ರೀರಾಮುಲು ಅವರ ಪ್ರೌವೃತ್ತಿಯನ್ನು ವಿರೋಧ ಮಾಡುವ ಜೊತೆಗೆ ಕಾಂಗ್ರೆಸ್ ಪಕ್ಷವನ್ನು ಜಯಗಳಿಸುವ ನಿಟ್ಟಿನಲ್ಲಿ ನೀವು ಅಭ್ಯರ್ಥಿ ಆಗಬೇಕು ಎನ್ನುವ ಅಭಿಪ್ರಾಯ ಬಂದಿದೆ. ಹಾಗಾಗಿ ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಲಾಗಿದೆ ಎಂದರು.

ಗೋತ್ರದ ಪ್ರಕಾರ ನಾನು ನೀನು ಬಾವ-ಬಾವೈದ
ನೋಡಪ್ಪಾ ಶ್ರೀರಾಮುಲು ನೀನು ಪಲಾಯನ ಮಾಡುವುದು ಬೇಡ. ನಾನು ನೀನು ಗೋತ್ರದ ಪ್ರಕಾರ ಬಾವ-ಬಾವೈದ ಆಗುತ್ತೇವೆ. ಮೊಳಕಾಲ್ಮೂರಿನಲ್ಲಿ ಕೃಷ್ಣ-ಅರ್ಜುನರ ಯುದ್ಧವಾಗಲಿ ಎಂದರು. ನೀನು ಏನಾದರೂ ಸಾಧನೆ ಮಾಡಿ ಕುಡಿದು ಕಟ್ಟೇ ಹಾಕಿದ್ದೀನಿ ಎನ್ನುವುದಾರೆ, ಮೊಳಕಾಲ್ಮೂರಿನಿಂದ ಪಲಾಯನ ಮಾಡಬಾರದು. ನೀವು ಈಗ ಇರುವ ಕ್ಷೇತ್ರದಲ್ಲೇ ನಿಲ್ಲಬೇಕು. ನನ್ನ ಪಕ್ಷ ಭಯಸಿ ಟಿಕೆಟ್ ನೀಡಿದರೆ ನಾನು ನಿಮ್ಮ ವಿರುದ್ಧ ಸ್ಪರ್ಧಿಸಲಾಗುವುದು ಎಂದು ವಿ.ಎಸ್ ಉಗ್ರಪ್ಪ ಹೇಳಿದರು.

ಚುನಾವಣೆಯಲ್ಲಿ ಜನಪರ ಏನು ಎನ್ನುವುದು ತಿಳಿಯುತ್ತದೆ
ಮಾತು ಮುಂದುವರಿಸಿದ ಅವರು, ಜನರ ಆಶೀರ್ವಾದಿಂದ, ನಿಮ್ಮ ಜನವಿರೋಧಿ ನೀತಿಯಿಂದ ಅಲ್ಲಿನ ಮತದಾರರು ನಿಮ್ಮನ್ನು ಸೋಲಿಸಲಿದ್ದಾರೆ. ಇದು ಸಿದ್ಧಾಂತದ ಚುನಾವಣೆ, ನಿಮ್ಮದು ಬಲಪಂಥೀಯ ಸಿದ್ಧಾಂತ, ನಮ್ಮದು ಜನಪರವಾದ ಸಿದ್ಧಾಂತವಾಗಿದೆ. ನಾನು ಕಾಂಗ್ರೆಸ್‌ನಿಂದ ಅಭ್ಯರ್ಥಿಯಾಗಲು ಸಿದ್ಧ, ನೀವು ಬಿಜೆಪಿ ಪಕ್ಷದಿಂದ ಅಭ್ಯರ್ಥಿಯಾಗಿ. ಚುನಾವಣೆಯಲ್ಲಿ ಜನರು ತೀರ್ಮಾನ ಮಾಡಿ, ಯಾರು ಜನಪರವಾಗಿ ಇದ್ದಾರೆ ಎಂಬುದು ತಿಳಿಯುತ್ತದೆ. ನಿಮ್ಮ ವಿರುದ್ಧ ಗೆಲ್ಲುವ ವಿಶ್ವಾಸ ನನಗಿದೆ ಎಂದರು.

ಹಿಂದುಳಿದ ವರ್ಗದ ಮಕ್ಕಳ ಭವಿಷ್ಯದ ಮೇಲೆ ಚಪ್ಪಡಿ ಕಲ್ಲು
ಇನ್ನು ಇತ್ತೀಚಿಗೆ ಬಿಜೆಪಿ ವಿರುದ್ಧ ಕಿಡಿಕಾರಿದ್ದ ಮಾಜಿ ಸಂಸದ ವಿ.ಎಸ್ ಉಗ್ರಪ್ಪ, ರಾಜ್ಯ ಹಾಗೂ ರಾಷ್ಟ್ರದಲ್ಲಿ ಡಬಲ್ ಇಂಜಿನ್ ಸರ್ಕಾರ ಆಡಳಿತದಲ್ಲಿದ್ದು ಪ್ರಧಾನಿ ಮೋದಿಯವರು ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಅವರು ಅಧಿಕಾರ ನಡೆಸುತ್ತಿದ್ದಾರೆ. ಇವರ ಅಧಿಕಾರ ಅವಧಿಯಲ್ಲಿ ಸಾಮಾಜಿಕ ನ್ಯಾಯ ಸಮಾಧಿಯಾಗುತ್ತಿದೆ. ಸಮಾಜದ ವ್ಯವಸ್ಥೆಯ ಕಟ್ಟ ಕಡೆಯ ಬಡವರು ಅದರಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದ ಮಕ್ಕಳ ಭವಿಷ್ಯದ ಮೇಲೆ ಚಪ್ಪಡಿ ಕಲ್ಲು ಎಳೆಯುವಂತಹ ಪ್ರಯತ್ನ ನರೇಂದ್ರ ಮೋದಿಯವರಿಂದ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.