ಕಾಂಗ್ರೆಸ್‌ಗೆ ಗುಡ್ ಬೈ ಹೇಳಿದ ರಘು ಆಚಾರ್: ಏ.14ರಂದು ಜೆಡಿಎಸ್ ಸೇರ್ಪಡೆ
ಚಿತ್ರದುರ್ಗ, ಏಪ್ರಿಲ್ 7: ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಎಂಎಲ್‌ಸಿ ಜಿ. ರಘು ಆಚಾರ್ ಕಾಂಗ್ರೆಸ್ ಪಕ್ಷ ತೊರೆಯಲು ಸಜ್ಜಾಗಿದ್ದಾರೆ. ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ಅಸಮಾಧಾನಗೊಂಡಿರುವ ರಘು ಆಚಾರ್ ಜೆಡಿಎಸ್ ಸೇರ್ಪಡೆಗೆ ಏಪ್ರಿಲ್ 14ರಂದು ದಿನಾಂಕ ನಿಗದಿಯಾಗಿದೆ ಎಂದು ತಿಳಿದು ಬಂದಿದೆ.
ಅತೃಪ್ತರಾಗಿರುವ ರಘು ಆಚಾರ್ ಅವರ ನಿವಾಸಕ್ಕೆ ಪರಿಷತ್ ಸದಸ್ಯ ಟಿ.ಎ. ಶರವಣ ಅವರು ಶುಕ್ರವಾರ ಭೇಟಿ ಮಾಡಿ ಜೆಡಿಎಸ್ ಪಕ್ಷಕ್ಕೆ ಬರುವಂತೆ ಆಹ್ವಾನ ಕೊಟ್ಟಿದ್ದಾರೆ.

ರಘು ಆಚಾರ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶರವಣ, ಎಪ್ರಿಲ್ 14ಕ್ಕೆ ರಘು ಆಚಾರ್ ಬೆಂಗಳೂರಿನ ಜೆಪಿ ಭವನದಲ್ಲಿ ಜೆಡಿಎಸ್ ಸೇರ್ಪಡೆ ಆಗಲಿದ್ದಾರೆ. ಪಕ್ಷ ಸೇರ್ಪಡೆಗೆ ಒಪ್ಪಿಗೆ ಸೂಚಿಸಿದ್ದಾರೆ. ಕಾಂಗ್ರೆಸ್ ಪಕ್ಷ ಟಿಕೆಟ್ ನೀಡುತ್ತೇವೆ ಎಂದು ರಘು ಆಚಾರ್ ಅವರ ಬೆನ್ನಿಗೆ ಚೂರಿ ಹಾಕಿದೆ. ಇನ್ನು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ರಘು ಆಚಾರ್ ಕಣಕ್ಕಿಳಿಯಲಿದ್ದಾರೆ ಎಂದು ತಿಳಿಸಿದರು.
ಶರವಣ ಭೇಟಿ ಬಳಿಕ ಪ್ರತಿಕ್ರಿಯೆ ನೀಡಿರುವ ಮಾಜಿ ಎಂಎಲ್ಸಿ ರಘು ಆಚಾರ್ ಎಪ್ರಿಲ್ 14 ರಂದು ಮಧಾಹ್ನ 12.07ಕ್ಕೆ ಜೆಡಿಎಸ್ ಸೇರ್ಪಡೆಯಾಗುತ್ತೇನೆ. ಚಿತ್ರದುರ್ಗದಲ್ಲಿ ಆರು ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಲಿದೆ. ಆರಕ್ಕೆ ಆರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸೋಲಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿದ್ದ ಮಾಜಿ ಎಂಎಲ್ಸಿ ರಘು ಆಚಾರ್‌ಗೆ ಭಾರೀ ನಿರಾಸೆಯಾಗಿದೆ. ಕೆ.ಸಿ ವೀರೇಂದ್ರ ಪಪ್ಪಿ ಅವರಿಗೆ ಟಿಕೆಟ್ ನೀಡಿರುವುದರಿಂದ ಕಾಂಗ್ರೆಸ್ ಪಕ್ಷದ ಮೇಲೆ ತೀವ್ರ ಅಸಮಧಾನಗೊಂಡಿದ್ದಾರೆ.

ಕಾಂಗ್ರೆಸ್‌ನವರು ನನಗೆ ಮೋಸ ಮಾಡಿದರು.ಕಾಂಗ್ರೆಸ್ ನಾಯಕರು ಟಿಕೆಟ್ ನೀಡುವಲ್ಲಿ ಮೋಸ ಮಾಡಿದ್ದಾರೆ. ನಾನೊಂದು ಸಣ್ಣ ಸಮುದಾಯದ ನಾಯಕ ಎಂದು ಹೀಗೆ ಮಾಡಿದ್ದಾರೆ. 197 ಸಮುದಾಯಗಳು ಮತ ಹಾಕೋಕೆ ಬೇಕು. ಟಿಕೆಟ್ ನೀಡೋಕೆ ಬೇಡಾ ಅಂದ್ರೆ ಹೇಗೆ, ಕಾಂಗ್ರೆಸ್ ನನ್ನನ್ನು ಅರ್ಧ ದಾರಿಗೆ ತಂದು ಕತ್ತು ಕೊಯ್ದಿದಿದೆ ಎಂದು ಕಿಡಿಕಾರಿದ್ದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ರಾಜ್ಯಾದ್ಯಂತ ನಾನು ಸಂಚಾರ ಮಾಡುತ್ತೇನೆ. ಪ್ರತೀ ಕ್ಷೇತ್ರದಲ್ಲಿ ಸುತ್ತಿ ಕಾಂಗ್ರೆಸ್‌ಗೆ ಮತ ಹಾಕದಂತೆ ನಮ್ಮ ಸಮುದಾಯದವರಲ್ಲಿ ಮನವಿ ಮಾಡುತ್ತೇನೆ ಎಂದಿದ್ದ ರಘು ಆಚಾರ್, ಸದ್ಯ ಜೆಡಿಎಸ್ ಸೇರುವುದಾಗಿ ಸ್ಪಷ್ಟಪಡಿಸಿದ್ದಾರೆ. ಇನ್ನು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ರಘು ಆಚಾರ್ ಕಣಕ್ಕಿಳಿಯುತ್ತಿದ್ದು, ಏಪ್ರಿಲ್ 17ರಂದು ನಾಮಪತ್ರ ಸಲ್ಲಿಸಲಿದ್ದಾರೆ.
ಕಾಂಗ್ರೆಸ್ ವಿರುದ್ಧ ಬೇಸರಗೊಂಡಿರುವ ಬಂಡಾಯದ ಬಾವುಟ ಹಾರಿಸಲು ಮುಂದಾಗಿರುವ ರಘು ಆಚಾರ್ ನಿವಾಸಕ್ಕೆ ಶುಕ್ರವಾರ ಬೆಳಗ್ಗೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೀರಂದ್ರ ಪಪ್ಪಿ ಭೇಟಿ ನೀಡಿ ಸಂಧಾನ ನಡೆಸಲು ಪ್ರಯತ್ನಿಸಿದ್ದರು. ಆದರೆ ರಘು ಆಚಾರ್ ಜೊತೆ ಕಾಂಗ್ರೆಸ್ ನಾಯಕರು ನಡೆಸಿದ ಸಭೆ ವಿಫಲವಾಗಿದೆ.
ಕಾಂಗ್ರೆಸ್ ನಾಯಕರ ಸಭೆ ಬಳಿಕ ತಮ್ಮ ನಿಲುವಿನ ಬಗ್ಗೆ ಸ್ಪಷ್ಟಪಡಿಸಿದ್ದ ರಘು ಆಚಾರ್, ರಾಜಕೀಯ ಬೇರೆ ಸ್ನೇಹ ಸಂಬಂಧವೇ ಬೇರೆ. ನನಗೂ ಹಾಗೂ ಕೈ ಅಭ್ಯರ್ಥಿ ವೀರೇಂದ್ರ ಪಪ್ಪಿಗೂ ರಾಜಕೀಯ ಜಿದ್ದಾಜಿದ್ದಿ ಇದೆ. ರಾಜಕೀಯವಾಗಿ ಕೆಸಿ. ವೀರೇಂದ್ರ ಪಪ್ಪಿ ಅವರಿಗೆ ಒಳ್ಳೆಯದಾಗಲಿ ಎಂದಿದ್ದರು. u












Click it and Unblock the Notifications