ಕಾರ್ಮಿಕ ಇಲಾಖೆ ಆಹಾರ ಕಿಟ್; ಹುಳ, ಅವಧಿ ಮುಗಿದ ಪದಾರ್ಥಗಳು!
ಚಿತ್ರದುರ್ಗ, ಆಗಸ್ಟ್ 25; ಸರ್ಕಾರದಿಂದ ಬಡ ಕಾರ್ಮಿಕರಿಗೆ ವಿತರಿಸಿರುವ ಆಹಾರ ಕಿಟ್‌ಗಳ ಅಕ್ಕಿಯಲ್ಲಿ ಹುಳ ಬಿದ್ದಿದೆ ಹಾಗೂ ಅವಧಿ ಮುಗಿದ ಆಹಾರ ಪದಾರ್ಥಗಳನ್ನು ವಿತರಿಸಿದ್ದಾರೆ ಎಂಬ ಆರೋಪ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿ ಕೇಳಿ ಬಂದಿದೆ.
ಹೊಸದುರ್ಗ ಕ್ಷೇತ್ರದ ಶಾಸಕರು ಕೋವಿಡ್ -19 ಹಿನ್ನೆಲೆಯಲ್ಲಿ ಬಡ ಕಾರ್ಮಿಕರಿಗೆ ಸರ್ಕಾರದಿಂದ ಬಂದಿರುವ ಆಹಾರ ಕಿಟ್ ವಿತರಣೆ ಮಾಡಿದ್ದರು. ಸರ್ಕಾರದಿಂದ ತಾಲೂಕಿಗೆ 10 ಸಾವಿರ ಆಹಾರ ಕಿಟ್ ಕೊಡಲಾಗಿತ್ತು.
ತಾಲೂಕಿಗೆ ಆಹಾರ ಕಿಟ್ ಬಂದು ಎರಡು ತಿಂಗಳಾದರೂ ಸರಿಯಾಗಿ ಕಿಟ್ ವಿತರಣೆ ಮಾಡಿಲ್ಲ. ಕಾರ್ಮಿಕ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನದ ಹಿನ್ನಲೆಯಲ್ಲಿ ಅಕ್ಕಿಯಲ್ಲಿ ಹುಳ ಬಿದ್ದಿದ್ದು, ಬೇಳೆ, ಸಾಂಬಾರ್ ಪುಡಿ, ರವೆ ಇತರ ಪದಾರ್ಥಗಳ ಅವಧಿ ಮುಗಿದಿದೆ. ಇಂತಹವುಗಳನ್ನು ಬಡ ಜನರಿಗೆ ವಿತರಿಸಲಾಗಿದೆ.

10 ಸಾವಿರ ಆಹಾರ ಕಿಟ್ ಬಂದು ಎರಡು ತಿಂಗಳು ಕಳೆದಿವೆ. ಬಂದಂತಹ ಆಹಾರದ ಕಿಟ್‌ಗಳನ್ನು ಗೋದಾಮಿನಲ್ಲಿ ಶೇಖರಣೆ ಮಾಡಿದ್ದರು. ಕ್ಷೇತ್ರದ ಶಾಸಕರು ಪಂಚಾಯಿತಿ ಮೂಲಕ ಕಿಟ್ ವಿತರಣೆ ಮಾಡಿಕೊಂಡು ಬರುತ್ತಿದ್ದು, 33 ಗ್ರಾಮ ಪಂಚಾಯಿತಿಗಳಲ್ಲಿ 13 ಪಂಚಾಯಿತಿಗಳಿಗೆ ಮಾತ್ರ ವಿತರಿಸಿದ್ದಾರೆ.
ಉಳಿದ 20 ಗ್ರಾ.ಪಂಚಾಯಿತಿಯ ಬಡ ಕಾರ್ಮಿಕ ಕುಟುಂಬಗಳಿಗೆ ಕಿಟ್ ವಿತರಣೆ ಮಾಡಲು ಇನ್ನೆಷ್ಟು ತಿಂಗಳು ಕಳೆಯಬೇಕು? ಎಂಬುದು ತಿಳಿದಿಲ್ಲ. ಈಗಾಗಲೇ ವಿತರಿಸಿರುವ ಆಹಾರ ಕಿಟ್‌ಗಳಲ್ಲಿ ಒಂದು ಕೆಜಿ ರವೆ ಕೊಟ್ಟಿದ್ದು ಅದರ ಬಳಸುವ ಅವಧಿ (16/8/2021) ಮುಕ್ತಾಯವಾಗಿದೆ.
ಇನ್ನು ಗೋಧಿ ಹಿಟ್ಟು ಕೂಡ ಅವಧಿ ಮುಗಿಯುವ ಅಂಚಿನಲ್ಲಿದೆ. ಅಕ್ಕಿ ಹುಳ ಹಿಡಿದೆ. ಅಕ್ಕಿಯಲ್ಲಿ ಕೈ ಇಟ್ಟರೆ ಕೈಗೆಲ್ಲ ಹಿಟ್ಟು ತಗಲುತ್ತದೆ. ಕಾರ್ಮಿಕರ ಆಹಾರದ ಕಿಟ್‌ಗಳಲ್ಲಿ ಸೊಸೈಟಿ ( ಪಡಿತರ) ಅಕ್ಕಿಯನ್ನು ಕೊಡಲಾಗಿದೆ.

ಮಾಜಿ ಶಾಸಕರ ಆರೋಪ: ಕಳಪೆ ಆಹಾರ ಕಿಟ್ ವಿತರಣೆ ಬಗ್ಗೆ ಮಾಜಿ ಶಾಸಕ ಬಿ. ಜಿ. ಗೋವಿಂದಪ್ಪ ಆರೋಪ ಮಾಡಿದ್ದಾರೆ. ಹುಳ ಬಿದ್ದಿರುವ ಹಾಗೂ ಅವಧಿ ಮುಗಿದು ಹೋದ ಆಹಾರ ಕಿಟ್ ಗಳನ್ನ ತಾಲೂಕಿನಾದ್ಯಂತ ಶಾಸಕ ಗೂಳಿಹಟ್ಟಿ ಶೇಖರ್ ಹಂಚಿದ್ದಾರೆಂದು ಆರೋಪಿಸಿದ್ದಾರೆ.
"ಕಾರ್ಮಿಕ ಇಲಾಖೆ ವತಿಯಿಂದ ಕೊಡುತ್ತಿರುವ ಆಹಾರ ಕಿಟ್‌ಗಳು ಕಳಪೆಯಿಂದ ಕೂಡಿದೆ. ಅವಧಿ ಮುಗಿದಿರುವ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಗಿದೆ. ಪ್ಯಾಕ್ ಮಾಡಿದ ವಸ್ತುಗಳ ಮೇಲೆ ಇಂತಿಷ್ಟು ಅವಧಿ ಎಂದು ಇರುತ್ತದೆ ಅದರೊಳಗೆ ಪದಾರ್ಥಗಳನ್ನು ನಾವು ಬಳಸಬೇಕು. ಮೂರು ತಿಂಗಳ ಹಿಂದೆ ಕೊಡಬೇಕಾಗಿದ್ದ ಕಿಟ್‌ಗಳನ್ನು ಶಾಸಕರು ಪ್ರಚಾರದ ಸಲುವಾಗಿ ಅವಧಿ ಮೀರಿದ ಆಹಾರ ಸಾಮಾಗ್ರಿಗಳನ್ನು ಈಗ ಹಂಚುತ್ತಿದ್ದಾರೆ" ಎಂದು ದೂರಿದ್ದಾರೆ.
ಪಂಚಾಯಿತಿ ಮೂಲಕ ಕಿಟ್ ವಿತರಣೆ ಮಾಡಿಕೊಂಡು ಬರುತ್ತಿದ್ದು. 33 ಪಂಚಾಯಿತಿಗಳಲ್ಲಿ ಕಂಚೀಪುರ, ಮತ್ತೊಡು, ಕಾರೇಹಳ್ಳಿ, ದೊಡ್ಡತೇಕಲವಟ್ಟಿ, ಹುಣವಿನಡು, ಕೆಲ್ಲೋಡ್, ಗುಡ್ಡದನೇರಲಕೆರೆ , ಚಿಕ್ಕಬ್ಯಾಲದಕೆರೆ ಹೀಗೆ 13 ಗ್ರಾಮ ಪಂಚಾಯಿತಿಗೆ ವಿತರಿಸಲಾಗಿದೆ. ಇನ್ನು 20 ಪಂಚಾಯಿತಿಗಳಿಗೆ ವಿತರಿಸುವ ಬಾಕಿ ಇದೆ.
ಹಿರಿಯೂರು ತಾಲೂಕಿನಲ್ಲಿ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಒಂದೇ ದಿನದಲ್ಲಿ ವ್ಯವಸ್ಥಿತವಾಗಿ 9 ಸಾವಿರ ಕಾರ್ಮಿಕರಿಗೆ ಕಿಟ್ ವಿತರಿಸಿದ್ದಾರೆ. ಅವರನ್ನು ನೋಡಿ ಕಲಿಯಬೇಕು ಎಂದಿದ್ದಾರೆ. ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣ ಗಮನ ಹರಿಸಿ ಹುಳ ಹಿಡಿಯುವ ಮುನ್ನ ಬಡವರ ಹೊಟ್ಟೆ ತುಂಬಿಸಿ ಎಂದು ಸಾಮಾಜಿಕ ಕಾರ್ಯಕರ್ತ ಮೋಹನ್ ಗುಜ್ಜಾರ್ ಆಗ್ರಹಿಸಿದರು.
ಒಟ್ಟಾರೆಯಾಗಿ ದೇವರು ಕೊಟ್ರು, ಪೂಜಾರಿ ಕೊಡಲಿಲ್ಲ ಎಂಬ ಗಾದೆ ಮಾತಿನಂತೆ ಕಾರ್ಮಿಕ ಇಲಾಖೆ ಕೊಟ್ಟರೂ ಸ್ಥಳೀಯ ಕಾರ್ಮಿಕ ಅಧಿಕಾರಿಗಳು ಕೊಡಲಿಲ್ಲ ಎನ್ನುವಂತಾಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಉಳಿದ ಆಹಾರ ಕಿಟ್ ಗಳನ್ನು ಬಡ ಕಾರ್ಮಿಕರಿಗೆ ಹಂಚುತ್ತಾರಾ? ಕಾದು ನೋಡಬೇಕಿದೆ.












Click it and Unblock the Notifications