ಒಂದೇ ರಾತ್ರಿ ಐದು ಮನೆಯಲ್ಲಿ ಕಳ್ಳತನ: ಬೆಚ್ಚಿಬಿದ್ದ ಮಸ್ಕಲ್ ಗ್ರಾಮಸ್ಥರು
ಚಿತ್ರದುರ್ಗ, ಡಿಸೆಂಬರ್ 5: ಒಂದೇ ರಾತ್ರಿ ಐದು ಮನೆಗಳಲ್ಲಿ ಸರಣಿ ಕಳ್ಳತನ ನಡೆದಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ತಡರಾತ್ರಿ ಬೆಳಕಿಗೆ ಬಂದಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಧರ್ಮಪುರ ರಸ್ತೆಯಲ್ಲಿ ಬರುವ ಮಸ್ಕಲ್ ಗ್ರಾಮದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿ ಐದು ಮನೆಗಳಲ್ಲಿ ಸರಣಿ ಕಳ್ಳತನ ಮಾಡಿದ್ದಾರೆ.
ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಸೇರಿದಂತೆ ಲಕ್ಷಾಂತರ ರುಪಾಯಿ ಹಣ ದೋಚಿ ಪರಾರಿಯಾಗಿದ್ದಾರೆ. ಇದರಿಂದ ಮಸ್ಕಲ್ ಗ್ರಾಮದ ಜನತೆ ಬೆಚ್ಚಿ ಬಿದ್ದಿದ್ದಾರೆ. ಮಸ್ಕಲ್ ಗ್ರಾಮದ ಲಕ್ಷ್ಮೀದೇವಿ, ಚಂದ್ರಣ್ಣ, ಪುಷ್ಪಮ್ಮ, ಶಿವಲಿಂಗಣ್ಣ ಹಾಗೂ ಶಕುಂತಲಾ ಎನ್ನುವವರ ಮನೆಯಲ್ಲಿ ಕಳ್ಳತನ ನಡೆಸಲಾಗಿದೆ.

ಕಳ್ಳತನ ವಿಷಯ ತಿಳಿದ ತಕ್ಷಣವೇ ಹಿರಿಯೂರು ಗ್ರಾಮಾಂತರ ಪಿಎಸ್ಐ ಪರಮೇಶ್ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಶ್ವಾನ ಹಾಗೂ ಬೆರಳಚ್ಚು ತಜ್ಞರಿಂದ ಪರಿಶೀಲನೆ ನಡೆಸಿದ್ದು, ಗ್ರಾಮದಲ್ಲಿ ಅನುಮಾನದ ವ್ಯಕ್ತಿಗಳು ಕಂಡುಬಂದರೆ ಕೂಡಲೇ ಪೊಲೀಸರಿಗೆ ತಿಳಿಸಬೇಕು ಎಂದು ಗ್ರಾಮಸ್ಥರಿಗೆ ಸೂಚನೆಯನ್ನು ನೀಡಿದ್ದಾರೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದರೋಡೆಕೋರರ ಬಂಧನಕ್ಕೆ ಪೊಲೀಸರು ಶೋಧ ಮುಂದುವರಿಸಿದ್ದಾರೆ.












Click it and Unblock the Notifications