ಚಿತ್ರದುರ್ಗ: ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಕೊಲೆ ಆರೋಪಿ ನಟ ದರ್ಶನ್ ಭಾವಚಿತ್ರದ ಫ್ಲ್ಯಾಗ್ ಹಾರಾಟ: ಮುಂದೇನಾಯ್ತು?
ಚಿತ್ರದುರ್ಗ, ಸೆಪ್ಟೆಂಬರ್ 28: ಈಗಾಗಾಗಲೇ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಆದರೂ ಶನಿವಾರ (ಸೆಪ್ಟೆಂಬರ್ 28) ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆಯಲ್ಲಿ ಕೆಲ ಅಭಿಮಾನಿಗಳು ದರ್ಶನ್ ಭಾವಚಿತ್ರದ ಬಾವುಟ ಹಿಡಿದಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ವೇಳೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಹಾಗೂ ದರ್ಶನ್ ಫ್ಯಾನ್ಸ್ ಮಧ್ಯೆ ವಾಗ್ವಾದ ನಡೆಯಿತು.
ನಗರದ ಮದಕರಿ ಸರ್ಕಲ್‌ನಲ್ಲಿಈ ಘಟನೆ ನಡೆದಿದೆ. ಮದಕರಿ ವೃತ್ತದಲ್ಲಿ ಕೆಲವರು ಸುದೀಪ್ ಭಾವಚಿತ್ರದ ಫ್ಲ್ಯಾಗ್ ಹಿಡಿದು ಡಾನ್ಸ್ ಮಾಡಿದ್ದು, ಮತ್ತೊಂದೆಡೆ ಇನ್ನೂ ಕೆಲವರು ದರ್ಶನ್ ಭಾವಚಿತ್ರದ ಫ್ಲ್ಯಾಗ್ ಪ್ರದರ್ಶನ ಮಾಡಿದ್ದಾರೆ.

ಈ ವೇಳೆ ದರ್ಶನ್ ಭಾವಚಿತ್ರದ ಫ್ಲ್ಯಾಗ್ ಹಾರಿಸುವುದಕ್ಕೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ವಿರೋಧ ವ್ತಕ್ತೊಡಿಸಿದ್ದಾರೆ. ಅಲ್ಲದೆ, ದರ್ಶನ್ ಅಭಿಮಾನಿಗಳಿಂದ ಫ್ಲ್ಯಾಗ್ ಕಿತ್ತುಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ದರ್ಶನ್ ಭಾವಚಿತ್ರದ ಫ್ಲ್ಯಾಗ್ ಕಿತ್ತು ಪೊಲೀಸರಿಗೆ ನೀಡಿದರು. ಈ ಮೂಲಕ ದರ್ಶನ್ ಭಾವಚಿತ್ರವಿರುವ ಬಾವುಟವನ್ನು ಸೀಜ್ ಮಾಡಿದ್ದಾರೆ.
ಈಗಾಗಲೇ ಹಲವೆಡೆ ಗಣಪತಿ ವಿಸರ್ಜನೆ ವೇಳೆ ಗಲಾಟೆಗಳು ನಡೆದಿರುವ ಉದಾಹರಣೆಗಳಿವೆ. ಅದರಲ್ಲೂ ದೇಶದಲ್ಲಿಯೇ ಅತೀ ದೊಡ್ಡದಾಗಿ ಎರಡನೇ ಹಿಂದೂ ಮಹಾಗಣಪತಿ ಮೆರವಣಿಗೆ ನಡೆಯುವುದು ಕೋಟೆನಾಡು ಚಿತ್ರದುರ್ಗದಲ್ಲಿ. ಇಲ್ಲಿ ಇದುವರೆಗೂ ಹಿಂದೂ ಮಹಾಗಣಪತಿ ವಿಸರ್ಜನೆ ಮೆರವಣಿಗೆಯನ್ನು ಯಾವುದೇ ಗಲಾಟೆ ಆಗದಂತೆ ಮಾಡಿಕೊಂಡು ಬಂದಿದ್ದಾರೆ.
ಇನ್ನೂ ಇತ್ತೀಚೆಗೆ ಫ್ಯಾನ್ ವಾರ್‌ಗಳು ಹೆಚ್ಚಾಗುತ್ತಿವೆ. ಅಂಧಾಭಿಮಾನಿಗಳಿಂದಲೇ ಇಂತಹ ಘಟನೆಗಳು ನಡೆಯಲು ಸಾಧ್ಯ. ಹಾಗೆಯೇ ಇಂದು ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಕೆಲವು ಅಭಿಮಾನಿಗಳು ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಬಾವುಟವನ್ನು ಹಾರಿಸಿದ್ದಾರೆ.
ಆಗ ಬಾವುಟ ಕಿತ್ತುಕೊಳ್ಳಲು ಮುಂದಾಗ ಹಿಂದೂ ಪರಿಷತ್ ಕಾರ್ಯಕರ್ತರು ಹಾಗೂ ದರ್ಶನ್ ಅಭಿಮಾನಿಗಳ ನಡುವೆ ವಾಗ್ವಾದ ನಡೆದಿದೆ. ಕೊನೆಗೆ ಈ ಗಲಾಟೆಯನ್ನು ವಿಎಚ್‌ಪಿ ಕಾರ್ಯಕರ್ತರು ತಣ್ಣಗಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನೀರಜ್ ದೋನೆರಿಯಾ ಹೇಳಿದ್ದೇನು?: ನಾವೆಲ್ಲಾ ಹಿಂದೂ ಒಗ್ಗಟ್ಟಾಗಿ ಇರಬೇಕಿದೆ. ಬಿಡಿ ಬಿಡಿಯಾದರೆ ಬಲವಿಲ್ಲ, ಇಂತಹ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ನಾವೆಲ್ಲಾ ಸಂಘಟನೆಯಾಗಬೇಕಿದೆ ಎಂದು ಭಂಜರಂಗ ದಳದ ರಾಷ್ಟ್ರೀಯ ಸಂಯೋಜಕ ನೀರಜ್ ದೋನೆರಿಯಾ ಕರೆ ನೀಡಿದ್ದಾರೆ.
ಭಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್‍ವತಿಯಿಂದ ನಡೆಯುತ್ತಿರುವ ಹಿಂದೂ ಮಹಾ ಗಣಪತಿಯ ಶೋಭಾಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಇತ್ತೀಚಿನ ದಿನಮಾನದಲ್ಲಿ ಹಿಂದೂ ಸಮಾಜವನ್ನು ಹೊಡೆಯುವ ಘಟನೆಗಳು ನಡೆಯುತ್ತಿವೆ. ಇದಕ್ಕೆ ತಕ್ಕ ಉತ್ತರವನ್ನು ನಾವುಗಳು ನೀಡಬೇಕಿದೆ ಎಂದರು.
ಹಿಂದೂ ಸಾಮ್ರಾಜ್ಯ ಪುರಾತನವಾದ ಸಾಮ್ರಾಜ್ಯವಾಗಿದೆ. ಇದಕ್ಕೆ ತನ್ನದೆ ಆದ ಇತಿಹಾಸ ಇದೆ ಇದನ್ನು ನಾವುಗಳು ಮರೆಯಬಾರದು, ಭಾರತದಲ್ಲಿ ಹಿಂದುಗಳಿಗೆ ಮಾನ್ಯತೆ ದೂರೆಯಬೇಕಿದೆ, ನಮ್ಮನ್ನಾಳಿದ ಶ್ರೀರಾಮನ ದೇವಾಲಯವನ್ನು ಆಯೋದ್ಯೆಯಲ್ಲಿ ನಿರ್ಮಾಣ ಮಾಡಲಾಗಿದೆ. ಇದು ನಮ್ಮ ಹೆಮ್ಮೆಯ ಸಂಕೇತವಾಗಿದೆ ಎಂದರು.
ಚಿತ್ರದುರ್ಗದಲ್ಲಿ ನಡೆಯುತ್ತಿರುವ ಹಿಂದೂ ಮಹಾ ಗಣಪತಿಯ ಈ ಶೋಭಾಯಾತ್ರೆ ಅತಿ ದೊಡ್ಡದಾದ ಶೋಭಾಯಾತ್ರೆಯಾಗಿದೆ ಇದು ದೇಶದಲ್ಲಿಯೇ ಹೆಸರುವಾಸಿಯಾಗಿದೆ. ಇಲ್ಲಿನ ವಿಶ್ವ ಹಿಂದು ಪರಿಷತ್ ಮತ್ತು ಭಜರಂಗ ದಳ ಉತ್ತಮವಾದ ಕಾರ್ಯವನ್ನು ಮಾಡಿದೆ. ಇಷ್ಟೊಂದು ಜನತೆಯನ್ನು ಸೇರಿಸುವುದರ ಮೂಲಕ ಅತಿ ದೊಡ್ಡದಾದ ಕಾರ್ಯವನ್ನು ಮಾಡಿದೆ. ಇದು ಇದೇ ರೀತಿ ಮುಂದುವರೆಯಬೇಕಿದೆ. ಇಲ್ಲಿ ಮಠಗಳು ಸಂಖ್ಯೆ ಹೆಚ್ಚಾಗಿದ್ದು ಇದರಿಂದ ಎಲ್ಲಾ ಮಠಾಧೀಶರ ಆರ್ಶೀವಾದ ನಮ್ಮೆಲ್ಲರ ಮೇಲಿದೆ, ಇದರಿಂದ ನಮ್ಮ ಸನಾತನ ಧರ್ಮ ಗಟ್ಟಿಯಾಗಿ ನಿಂತಿದೆ ಎಂದರು.












Click it and Unblock the Notifications