ಚಿತ್ರದುರ್ಗ: ಆಪರೇಷನ್ ಥಿಯೇಟರ್‌ನಲ್ಲಿ ಪ್ರೀ ವೆಡ್ಡಿಂಗ್ ಶೂಟ್, ಎದ್ದು ಕುಳಿತ ರೋಗಿ..!
ಚಿತ್ರದುರ್ಗ, ಫೆಬ್ರವರಿ 09: ಇತ್ತಿಚಿನ ದಿನಗಳಲ್ಲಿ ಮದುವೆಯ ಪ್ರೀ-ವೆಡ್ಡಿಂಗ್ ಶೂಟ್ ಟ್ರೆಂಡಿಂಗ್ ಆಗಿದೆ. ವಿಭಿನ್ನ ರೀತಿಯ ಪ್ರೀ-ವೆಡ್ಡಿಂಗ್ ಶೂಟ್ ಫೋಟೋಗಳು ಪ್ರತಿದಿನವೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಹೊಸ ಹೊಸ ಥಿಮ್ಗಳೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಜೋಡಿಗಳು ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ಇಲ್ಲೊಂದು ಪ್ರೀ-ವೆಡ್ಡಿಂಗ್ ಶೂಟ್ ಎಲ್ಲರನ್ನು ಅಚ್ಚರಿಗೊಳಿಸಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮದಲ್ಲಿನ ಸರ್ಕಾರಿ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ಜೋಡಿಗಳು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಗುತ್ತಿಗೆ ಆಧಾರಿತ ವೈದ್ಯ ಡಾ.ಅಭಿಷೇಕ್ ಎಂಬುವವರು ಭರಮಸಾಗರ ಸರ್ಕಾರಿ ಆಸ್ಪತ್ರೆಯ ಆಪರೇಷನ್ ಥಿಯೇಟರ್ ನಲ್ಲಿ ಪ್ರೀ-ವೆಡ್ಡಿಂಗ್ ವಿಡಿಯೋ ಶೂಟ್ ಮಾಡಿಸಿಕೊಂಡಿದ್ದು, ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

ಭರಮಸಾಗರ ಮೂಲದ ವೈದ್ಯ ಡಾ.ಅಭಿಷೇಕ್ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಸಲುಗೆ ಮೇರೆಗೆ ಆಪರೇಷನ್ ಥಿಯೇಟರ್‌ನಲ್ಲಿ ತಮ್ಮ ವೃತ್ತಿಗೆ ತಕ್ಕಂತೆ ಫ್ರೀ ವೆಡ್ಡಿಂಗ್ ಶೂಟ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ವೈದ್ಯರ ನಡೆಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಫ್ರೀ ವೆಡ್ಡಿಂಗ್ ಶೂಟ್ ವಿಡಿಯೋದಲ್ಲೇನಿದೆ..?
ವಿಡಿಯೋದಲ್ಲಿ ವೈದ್ಯ ಅಭಿಷೇಕ್ ಆಪರೇಷನ್ ಮಾಡುತ್ತಿರುವಂತೆ, ಈ ವೇಳೆ ಆತನಿಗೆ ಭಾವಿ ಪತ್ನಿ ಸಹಾಯ ಮಾಡುವಂತೆ ಚಿತ್ರೀಕರಣ ಮಾಡಲಾಗಿದೆ. ಕೆಲವೇ ಸೆಕೆಂಡ್ಗಳ ವಿಡಿಯೋ ಕೊನೆಗೆ ಆಪರೇಷನ್ ಮಾಡಿಸಿಕೊಳ್ಳುತ್ತಿರುವಂತೆ ಮಲಗಿದ್ದ ರೋಗಿ ಎದ್ದು ಕುಳಿತುಕೊಳ್ಳುತ್ತಾರೆ. ಬಳಿಕ ಎಲ್ಲರೂ ಜೋರಾಗಿ ನಗುತ್ತಾರೆ. ಈ ಸನ್ನಿವೇಶದ ಚಿಕ್ಕ ವಿಡಿಯೋ ವೈರಲ್ ಆಗುತ್ತಿದ್ದು, ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ವಿಡಿಯೋಗ್ರಾಫರನ್ನು ಕೂಡ ಕಾಣಬಹುದುದಾಗಿದೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಗರಂ ಆಗಿದ್ದು, ಸರ್ಕಾರಿ ಆಸ್ಪತ್ರೆಯನ್ನು ತಮ್ಮ ಖಾಸಗಿ ಜೀವನಕ್ಕೆ ಬಳಸಿಕೊಂಡ ಅಧಿಕಾರಿಗಳ ವಿರುದ್ಧ ಸಂಬಂಧಪಟ್ಟ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಚಳ್ಳಕೆರೆ ಬಂದ್ ಯಶಸ್ವಿ
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಆಗ್ರಹಿಸಿ ರೈತ ಸಂಘ ಹಾಗೂ ವಿವಿಧ ಸಂಘಟನೆಗಳು ಚಳ್ಳಕೆರೆಗೆ ಕರೆ ಕೊಟ್ಟಿದ್ದ ಬಂದ್ ಯಶಸ್ವಿಯಾಗಿದೆ.
ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಘೋಷಿಸಿದಂತೆ 5,300 ಕೋಟಿ ಹಣ ಬಿಡುಗಡೆಗೆ ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಗೆ ಕೆಲವು ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತರಾಗಿ ಮುಚ್ಚಿ ಬಂದ್‌ಗೆ ಬೆಂಬಲ ಸೂಚಿಸಿದರು. ಗಾಂಧಿ ವೃತ್ತದಲ್ಲಿ ಪ್ರತಿಭಟನಾಕಾರರು ಮಾನವ ಸರಪಳಿ ಹಾಕಿಕೊಂಡು ಸರ್ಕಾರದ ವಿರುದ್ಧ ಕಿಡಿಕಾರಿದರು. ಈ ಪ್ರತಿಭಟನೆಯಿಂದ ವಾಹನ ಸಂಚಾರವಿಲ್ಲದೆ ಪ್ರಯಾಣಿಕರು ಪರದಾಡುವ ಸ್ಥಿತಿ ಕಂಡುಬಂದಿತ್ತು.












Click it and Unblock the Notifications