ಸಚಿವರೇ ನೋಡೆಲ್ ಅಧಿಕಾರಿ ನೇಮಕ ಯಾವಾಗ?: ಡಿ.ಸುಧಾಕರ್‌ಗೆ ಹಿರಿಯೂರು ತಾಲೂಕಿನ ಜನರ ಪ್ರಶ್ನೆ
ಹಿರಿಯೂರು, ಜನವರಿ, 25: ತಾಲೂಕಿನ ವಿವಿಧ ಸರ್ಕಾರಿ ವಸತಿ ಯೋಜನೆಗಳ ಸಾವಿರಾರು ಮನೆಗಳ ಸ್ಥಿತಿ ಗತಿ ನೋಡಿಕೊಳ್ಳುವ ವಸತಿ ನೋಡಲ್ ಅಧಿಕಾರಿ ಹುದ್ದೆ 8 ತಿಂಗಳಿನಿಂದ ಖಾಲಿಯಿದ್ದರೂ, ಆ ಹುದ್ದೆಗೆ ಅಧಿಕಾರಿ ನೇಮಕ ಮಾಡಿಕೊಳ್ಳುವ ಯಾವ ಲಕ್ಷಣಗಳು ಕಾಣುತ್ತಿಲ್ಲ.
ಈಗಾಗಲೇ ಇಬ್ಬರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬದಲಾಗಿದ್ದಾರೆ. ಆದರೂ ಸಹ ವಸತಿ ನೋಡಲ್ ಅಧಿಕಾರಿ ಕುರ್ಚಿ ಧೂಳಿಡಿದಿದೆ. ಈ ಹಿಂದೆ ಇದ್ದ ವಸತಿ ನೋಡಲ್ ಅಧಿಕಾರಿಯನ್ನು ಮೂಲ ಹುದ್ದೆಗೆ ವರ್ಗಾವಣೆ ಮಾಡಿದ್ದೇ ಬಂತು ಅಲ್ಲಿಂದ ಇಲ್ಲಿಯವರೆಗೆ ಆ ಜಾಗಕ್ಕೆ ಹೊಸಬರು ಬಂದಿಲ್ಲ.

2017-18ರ ಪಿಎಂಎವೈಜಿಯ 1800 ಮನೆಗಳ ಅನುದಾನ ನಿಂತಿದ್ದು, ತಾಲೂಕಿನಲ್ಲಿ ಅರ್ಧ ಕಟ್ಟಿದ ಮನೆಗಳ ದರ್ಶನ ಎಲ್ಲಾ ಕಡೆಯೂ ಸಿಗುತ್ತದೆ. ಸರ್ಕಾರದ ಮನೆ ಮಂಜೂರು ಆದ ಖುಷಿಯಲ್ಲಿ ಫಲಾನುಭವಿಗಳು ಇದ್ದ ಗುಡಿಸಲು, ಜೋಪಡಿ ಹಾಗೂ ಹಳೇ ಮನೆಯನ್ನು ಕಿತ್ತು ಹಾಕಿದ್ದು ಈಗ ಗುಡಿಸಲು ಇಲ್ಲ ಮನೆಯೂ ಇಲ್ಲ ಎಂಬಂತಾಗಿದೆ.
ಎನ್‌ಸಿಸಿ ಸರ್ವೆಯಲ್ಲಿಲ್ಲದವರನ್ನು ಫಲಾನುಭವಿಗಳನ್ನಾಗಿ ಆಯ್ಕೆ ಮಾಡಿದ್ದೇ ಈ ಎಲ್ಲಾ ಅವಾಂತರಗಳಿಗೆ ಕಾರಣವಾಗಿದೆ ಎನ್ನಲಾಗಿದ್ದು, ಜಾತಿ ಮತ್ತು ಆರ್ಥಿಕ ಗಣತಿಗೆ ಒಳಪಟ್ಟವರನ್ನು ಮಾತ್ರ ಆಯ್ಕೆ ಮಾಡಬೇಕಿತ್ತಂತೆ. ತಾಲೂಕಿನಲ್ಲಿ ಸಾವಿರಾರು ಮನೆಗಳಿಗೆ ಕೆಲವರು ತಳಪಾಯ ಹಾಕಿದ್ದಾರೆ. ಇನ್ನು ಕೆಲವರು ಗೋಡೆ ಕಟ್ಟಿಕೊಂಡು ಬಿಲ್‌ಗಾಗಿ ದಿನನಿತ್ಯ ಕಛೇರಿಗೆ ಅಲೆದಾಡುತ್ತಿದ್ದಾರೆ.
ಆದರೆ ವಸತಿ ಮನೆಗಳ ಆಯ್ಕೆ, ಪರಿಶೀಲನೆ, ಬಿಲ್‌ಗಳನ್ನು ಗಮನಿಸಬೇಕಾದ ಅಧಿಕಾರಿ ಹುದ್ದೆಯೇ ಖಾಲಿ ಇರುವುದು ಫಲಾನುಭವಿಗಳಿಗೆ ನುಂಗಲಾರದ ತುತ್ತಾಗಿದೆ. ದೇವರಾಜ ಅರಸು ವಸತಿ ಯೋಜನೆ, ರಾಜೀವ್ ಗಾಂಧಿ ವಸತಿ ಯೋಜನೆ, ಅಂಬೇಡ್ಕರ್ ವಸತಿ ಯೋಜನೆ, ಪಿಎಂಎವೈಜಿ ಆವಾಸ್ ಯೋಜನೆಯ ಮನೆಗಳು, ಅಲೆಮಾರಿ, ಅರೆ ಅಲೆಮಾರಿ ಮನೆಗಳು ಮತ್ತು ಕೆಲ ಹೆಚ್ಚುವರಿ ಮನೆಗಳು ಮಂಜೂರಾಗಿದ್ದು, ಅವುಗಳ ಪ್ರಗತಿಯ ಬಗ್ಗೆ ಜವಾಬ್ದಾರಿ ಹೊರುವವರೇ ಇಲ್ಲದಂತಾಗಿದೆ.
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕ್ಷೇತ್ರದ ಶಾಸಕರಾದ ಡಿ ಸುಧಾಕರ್ ಅವರು ಗಮನಹರಿಸಿ ಖಾಲಿಯಿರುವ ನೋಡಲ್ ಅಧಿಕಾರಿ ಹುದ್ದೆಗೆ ಅಧಿಕಾರಿ ನೇಮಕ ಮಾಡಿ ಸಮಸ್ಯೆ ಬಗೆಹರಿಸುವಂತೆ ಫಲಾನುಭವಿಗಳ ಒತ್ತಾಯಿಸಿದ್ದಾರೆ.
ಈ ಕುರಿತು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ, ಸತೀಶ್ ಕುಮಾರ್ ದೂರವಾಣಿ ಮೂಲಕ ಮಾತನಾಡಿ, ವಸತಿ ಯೋಜನೆಯ ನೋಡಲ್ ಅಧಿಕಾರಿ ಹುದ್ದೆ ಖಾಲಿಯಿದ್ದು, ಈ ಬಗ್ಗೆ ಸಚಿವರ ಗಮನಕ್ಕೆ ತರಲಾಗಿದೆ. ಸದ್ಯದ ಮಟ್ಟಿಗೆ ಮನೆಗಳ ಸ್ಥಿತಿ ಗತಿಯನ್ನು ನಮ್ಮ ಇಲಾಖೆಯ ಕೇಸ್ ವರ್ಕರ್ ನೋಡಿಕೊಳ್ಳುತ್ತಿದ್ದಾರೆ. ಕೆಲವು ತಾಲೂಕುಗಳಲ್ಲಿ ಇಬ್ಬಿಬ್ಬರು ನೋಡಲ್ ಅಧಿಕಾರಿಗಳಿದ್ದಾರೆ. ಅಂತಹ ತಾಲೂಕಿನಿಂದ ಒಬ್ಬರನ್ನು ಕರೆಸಿಕೊಳ್ಳುವ ಯೋಚನೆಯಿದೆ. ಶೀಘ್ರದಲ್ಲೇ ನಮ್ಮ ತಾಲೂಕಿನಲ್ಲಿರುವ ನೋಡಲ್ ಅಧಿಕಾರಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.












Click it and Unblock the Notifications