Darshan News: 'ನನ್ನ ಮಗನ ಗತಿಯೇ ದರ್ಶನ್ ಮಗನಿಗೂ ಬರಬೇಕು'- ಗೋಳಾಡಿದ ರೇಣುಕಾಸ್ವಾಮಿ ತಾಯಿ
ಚಿತ್ರದುರ್ಗ ಜೂನ್ 12: 'ನನ್ನ ಮಗನಿಗೆ ಆದ ಸ್ಥಿತಿಯೇ ದರ್ಶನ್ ಮಗನಿಗೂ ಆಗಬೇಕು' ಎಂದು ತನ್ನ ಮಗ ರೇಣುಕಾಸ್ವಾಮಿಯನ್ನು ಕಳೆದುಕೊಂಡ ತಾಯಿ ರತ್ನಪ್ರಭಾ ಹಿಡಿ ಶಾಪ ಹಾಕಿದ್ದಾರೆ.
ರೇಣುಕಾಸ್ವಾಮಿ ಅವರದ್ದು ಕೊಲೆ ಎಂದು ಗೊತ್ತಾಗುತ್ತಿದ್ದಂತೆ ಅವರ ತಾಯಿ ಜೀವ ನರಳಾಡುತ್ತಿದೆ. ಗೋಳಾಡಿ ಮರುಕ ವ್ಯಕ್ತಪಡಿಸಿದ ತಾಯಿ ರತ್ನಪ್ರಭಾ ನಟ ದರ್ಶನ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ, 'ದರ್ಶನ್ ಒಬ್ಬ ನಟ ಎಂದು ಹೇಳುತ್ತಾರೆ. ಆದರೆ ಆತ ಕಳ್ಳ. ನನ್ನ ಮಗನನ್ನು ಕೊಂದ ಪಾಪಿ. ದರ್ಶನ್ ಸಿನಿಮಾವನ್ನು ರಿಲೀಸ್ ಮಾಡಬಾರದು, ಇಂಡಸ್ಟ್ರಿಯಿಂದ ಅವರನ್ನು ಬ್ಯಾನ್ ಮಾಡಬೇಕು' ಎಂದು ರೇಣುಕಾಸ್ವಾಮಿ ತಾಯಿ ಹಿಡಿ ಶಾಪ ಹಾಕಿದ್ದಾರೆ.
'ಆತನ ಬಳಿ ದೊಡ್ಡ ಮನುಷ್ಯನ ಗುಣಗಳು ಇಲ್ಲ. ಡಿ ಬಾಸ್ ಎನ್ನುವ ಅಭಿಮಾನಿಗಳು ಈ ಹೇಯ ಕೃತ್ಯವನ್ನು ನೋಡಲಿ. ನನ್ನ ಮಗನಿಗೆ ಆದ ಸ್ಥಿತಿಯೇ ದರ್ಶನ್ ಮಗನಿಗೂ ಆಗಬೇಕು. ಆತನ ಕುಟುಂಬ ಸರ್ವನಾಶ ಆಗಬೇಕು' ಎಂದು ಕಣ್ಣೀರು ಹಾಕಿದ್ದಾರೆ.
ರೇಣುಕಾಸ್ವಾಮಿ ಪತ್ನಿ ಗರ್ಭಿಣಿಯಾಗಿದ್ದು ಆಕೆಯ ಮುಂದಿನ ಜೀವನ ಹೇಗೆ ಎಂದು ತಾಯಿ ಪ್ರಶ್ನೆ ಮಾಡಿದ್ದಾರೆ. ನನ್ನ ಸೊಸೆಗೆ ಅನ್ಯಾಯವಾಗಿದೆ. ಆಕೆಗೆ ನ್ಯಾಯ ಕೊಡಿಸಿ ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಆಕೆಗೆ ಸರ್ಕಾರಿ ನೌಕರಿ ನೀಡಿ ಆಸರೆಯಾಗಬೇಕು ಎಂದು ಅವರು ಬೇಡಿಕೆ ಇಟ್ಟಿದ್ದಾರೆ.

ಚಿತ್ರದುರ್ಗ ರೇಣುಕಾಸ್ವಾಮಿ ಅವರ ಮೃತ ದೇಹ ಭಾನುವಾರ (ಜೂನ್ 9) ಬೆಂಗಳೂರಿನ ಕಾಮಾಕ್ಷಿಪಾಳ್ಯ ಮೋರಿಯಲ್ಲಿ ಪತ್ತೆಯಾಗಿತ್ತು. ನಾಯಿಗಳು ಎಳೆದಾಡುತ್ತಿದ್ದ ಮೃತ ದೇಹದ ಬಗ್ಗೆ ಸ್ಥಳೀಯ ಅಪಾರ್ಟ್‌ಮೆಂಟ್ ಒಂದರ ಸೆಕ್ಯೂರಿಟಿ ಗಾರ್ಡ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದಾಗ ಇದೊಂದು ಕೊಲೆ ಎಂದು ಗೊತ್ತಾಗಿದೆ.
ಅಷ್ಟರಲ್ಲಿ ಠಾಣೆಗೆ ಕೆಲವರು ಆಗಮಿಸಿ ಕೊಲೆ ತಾವೇ ಮಾಡಿದವರು ಎಂದು ಹೇಳಿಕೊಂಡಿದ್ದಾರೆ. ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಈ ಕೊಲೆಯ ಹಿಂದೆ ನಟ ದರ್ಶನ್ ಹೆಸರು ಕೇಳಿ ಬಂದಿದೆ. ವಿಚಾರಣೆ ಚುರುಕುಗೊಳಿಸಿದಾಗ ಆರೋಪಿಗಳು ದರ್ಶನ್ ಸೂಚನೆ ಮೇರೆಗೆ ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.
ಶನಿವಾರ (ಜೂನ್ 8) ಬೆಳಗ್ಗೆ ಚಿತ್ರದುರ್ಗದಿಂದ ರೇಣುಕಾಸ್ವಾಮಿ ಅವರನ್ನು ದರ್ಶನ್ ಗ್ಯಾಂಗ್ ಅಪಹರಣ ಮಾಡಿದೆ. ಮದ್ಯಾಹ್ನ ರೇಣುಕಾಸ್ವಾಮಿ ಅವರನ್ನು ಬೆಂಗಳೂರಿನಲ್ಲಿರುವ ನಟ ದರ್ಶನ್ ಆಪ್ತರ ಶೆಡ್ಡಿಗೆ ಕರೆದುಕೊಂಡು ಬರಲಾಗಿದೆ. ರೇಣುಕಾಸ್ವಾಮಿ ಅವರನ್ನು ಶೆಡ್ಡಿಗೆ ಕರೆತಂದ ಗ್ಯಾಂಗ್ ದರ್ಶನ್‌ಗೆ ಮಾಹಿತಿ ನೀಡಿದೆ. ಅಲ್ಲಿಗೆ ರಾತ್ರಿ ದರ್ಶನ್ ಹಾಗೂ ಪವಿತ್ರಾ ಗೌಡ ಕೂಡ ತೆರಳಿದ್ದಾರೆ. ಅಲ್ಲಿ ರೇಣುಕಾಸ್ವಾಮಿಗೆ ಮನಬಂದಂತೆ ಥಳಿಸಲಾಗಿದೆ.
ಹಲ್ಲೆಯಿಂದಾಗಿ ರೇಣುಕಾಸ್ವಾಮಿ ಸಾವನ್ನಪ್ಪಿದ್ದು, ಆತನ ಮೃತದೇಹವನ್ನು ಅಲ್ಲಿಂದ ಸಾಗಿಸಿ ಚರಂಡಿಗೆ ದರ್ಶನ್ ಗ್ಯಾಂಗ್ ಎಸೆದು ಹೋಗಿದೆ. ಭಾನುವಾರ (ಜೂನ್ 9) ಬೆಳಗ್ಗೆ ರೇಣುಕಾಸ್ವಾಮಿ ಮೃತದೇಹ ಚರಂಡಿಯಲ್ಲಿ ಪತ್ತೆಯಾಗಿದೆ.












Click it and Unblock the Notifications