Actor Darshan Case: ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿ ₹1,00,000 ಧನಸಹಾಯ ಮಾಡಿದ ವಿನೋದ್ ರಾಜ್-ಅವರು ಹೇಳಿದ್ದೇನು?
ಚಿತ್ರದುರ್ಗ, ಜುಲೈ, 27: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ & ಗ್ಯಾಂಗ್ ಈಗಾಲೇ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ನಟ ವಿನೋದ್ ರಾಜ್‌ಕುಮಾರ್ ದರ್ಶನ್‌ನನ್ನು ಭೇಟಿಯಾಗಿದ್ದು, ಇದೀಗ ಕೊಲೆಯಾದ ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಮೃತನ ಕುಟುಂಬಕ್ಕ ವೈಯಕ್ತಿಕ ಧನಸಹಾಯ ಮಾಡಿ ಸಾಂತ್ವನ ಹೇಳಿದ್ದಾರೆ.
ನಟ ದರ್ಶನ್ ಮತ್ತು ಗ್ಯಾಂಗ್‌ನಿಂದ ಕೊಲೆಯಾಗಿರುವ ಮೃತ ರೇಣುಕಾ ಸ್ವಾಮಿ ಮನೆಗೆ ಹಿರಿಯ ನಟ ವಿನೋದ್ ರಾಜ್ ಭೇಟಿ ನೀಡಿದ್ದು, ಮೃತರ ಪೋಷಕರು ಹಾಗೂ ಪತ್ನಿಯನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಅಲ್ಲದೆ, ₹1,00,000 ವೈಯಕ್ತಿಕ ಧನಸಹಾಯ ಮಾಡಿದರು.

ಇನ್ನು ಇತ್ತೀಚಿಗಷ್ಟೇ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ ಅವರನ್ನು ವಿನೋದ್ ರಾಜ್ ಭೇಟಿ ಮಾಡಿದ್ದರು. ಮೊದಲು ರೇಣುಕಾಸ್ವಾಮಿ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಎಂದು ನೆಟ್ಟಿಗರು ಆಗ್ರಹಿಸಿದ್ದರು. ಅದರಂತೆಯೇ ಇಂದು (ಜುಲೈ 26) ನಟ ವಿನೋದ್ ರಾಜ್ ಭೇಟಿ ನೀಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು, "ಮೃತ ರೇಣುಕಾಸ್ವಾಮಿ ಅವರು ಮನೆಗೆ ಆಧಾರವಾಗಿದ್ದರು. ಆದರೆ ಇಂದು ಅವರೇ ಕುಟುಂಬದಲ್ಲಿ ಇಲ್ಲ. ವಯಸ್ಸಾದ ಅಜ್ಜಿ ಇದಾರೆ, ಈಗ ಅವರನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ಜೀವನ ಇಡೀ ಸಂಪಾದನೆ ಹೆಸರು ಮಾಡೋದು ಅಲ್ಲ. ಜೀವನವಿಡೀ ನಾವು ಒಳ್ಳೆಯದನ್ನೇ ಮಾಡಬೇಕು. ತಂದೆ ರೂಪದಲ್ಲಿ ದೇವರು ಮನುಷ್ಯ ಜೀವಿಯನ್ನು ಸೃಷ್ಟಿ ಮಾಡಿದ್ದಾರೆ. ಕಲಾವಿದರಾದ ನಾವು ಸರಿಯಾಗಿ ನಡೆದುಕೊಳ್ಳಬೇಕು.
ನಾವು ತಪ್ಪು ಮಾಡಿದರೂ, ಅದು ಸರಿನಾ ಅನ್ನೋ ಭಾವನೆ ಜನರಿಗೆ ಬರುತ್ತದೆ," ಎಂದರು.
ಕಲಾವಿದರಾದ ನಾವು ಮಾತನಾಡಿದ್ರೆ ಅದು ದೊಡ್ಡದಾಗಿ ಕಾಣುತ್ತದೆ. ಕಲಾವಿದರಾದ ನಾವು ಜನಸಮಾನ್ಯರಂತೆಯೇ ಇರುತ್ತೇವೆ. ಆದರೆ ನಮಗೆ ಗೌರವದ ಜೊತೆ ಜವಾಬ್ದಾರಿ ಕೊಟ್ಟು ಬಿಟ್ಟಿರುತ್ತಾರೆ. ನಾವು ಸಮಾಜದಲ್ಲಿ ಬಹಳ ಎಚ್ಚರಿಕೆಯಿಂದ ಬಾಳಬೇಕು. ಮಾಧ್ಯಮದವರು ಮಿತ್ರರೇ ಹೊರತು ಶತ್ರುಗಳಲ್ಲ. ಅವರು ಕೆಲವು ಬಾರಿ ನಮಗೆ ತಿದ್ದಿ ಬುದ್ದಿ ಹೇಳುತ್ತಾರೆ. ನಾವು ಅವರೊಂದಿದೆ ತುಂಬಾ ಒಳ್ಳೆಯ ರೀತಿ ನಡೆದುಕೊಳ್ಳಬೇಕು. ಇಲ್ಲದಿದ್ದರೆ ಇಂತಹ ಅಚಾತುರ್ಯ ನಡೆಯುತ್ತದೆ ಎಂದರು.
ಇನ್ನು ಜೈಲಲ್ಲಿ ದರ್ಶನ್ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಜೈಲಲ್ಲಿ ನನ್ನ ಜೊತೆ 5 ಜನ ದರ್ಶನ್ ಅವರನ್ನು ಭೇಟಿ ಮಾಡಿದರು. ಈ ವೇಳೆ ನಮ್ಮನ್ನು ನೋಡಿ ದರ್ಶನ್ ಭಾವುಕರಾದರು. ಈ ವೇಳೆ ಅವರು ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಅಂತಿದಾರೆ. ಅವರು ಹೇಳಿದ್ದನ್ನು ಬಿಟ್ಟು ನಾನು ಬೇರೇನು ಹೇಳಲು ಸಾಧ್ಯ ಎಂದರು.
ದರ್ಶನ್ ಭೇಟಿ ಬಳಿಕ ರೇಣುಕಾಸ್ವಾಮಿ ಮನೆ ಭೇಟಿ ಕುರಿತು ಮಾತನಾಡಿದ ಅವರು, ದರ್ಶನ್ ಭೇಟಿಗೆ ಮೊದಲೇ ಬರಬೇಕು ಅಂತಿದ್ದೆ. ಆದರೆ ನನಗೆ 7ನೇ ತಾರೀಕು ಮೇಜರ್ ಸರ್ಜರಿ ಆಯ್ತು. ಈಗ ನಾನು ಸುಧಾರಿಸಿಕೊಂಡ ಬಳಿಕ ಭೇಟಿ ಮಾಡಿದೆ ಎಂದರು.
ನಾವು ಸಂಧಾನಕ್ಕೆ ಮುಂದಾಗಿಲ್ಲ: ನಟ ದರ್ಶನ್ ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿದರೆ ನಾವು ಸ್ವಾಗತಿಸುತ್ತೇವೆ ಎಂಬ ಸುದ್ದಿಯಾದ ಹಿನ್ನೆಲೆ ನಾವು ಯಾವ ಸಂದಾನಕ್ಕೆ ಮುಂದಾಗಿಲ್ಲ. ನನ್ನ ಮಗನ ಸಾವಿಗೆ ನ್ಯಾಯ ಸಿಗಬೇಕು ಎಂದು ರೇಣುಕಾಸ್ವಾಮಿ ತಂದೆ ಕಾಶೀನಾಥ ಶಿವನಗೌಡ್ರ ಕಣ್ಣೀರು ಹಾಕಿದರು.
ವಿನೋದ್ ರಾಜ್ ಮುಂದೆ ಕೇಣುಕಾಸ್ವಾಮಿ ತಂದೆ ಕಣ್ಣೀರು ಇಟ್ಟರು. ಅವನು ನರಳಿದ್ದ ರೀತಿ ಕೇಳಿದ್ರೆ ನಮ್ಮ ಕರುಳು ಕಿತ್ತು ಬರುತ್ತಿದೆ. ನಾವು ಬಹಳ ನೊಂದಿದ್ದೇವೆ, ನನ್ನ ಮನೆತನ ನಾಶವಾಗಿದೆ. ನನ್ನ ಮಗ ಹೋದಾಗಿಂದ ತುಂಬಾ ನೋವಿನಲ್ಲಿದೆ. ಸರ್ಕಾರಕ್ಕೆ ವಿನಂತಿ ಮಾಡುತ್ತೇವೆ. ಸೊಸೆಗೆ ಸರ್ಕಾರಿ ಕೆಲಸ ಕೊಡಿ, ನನ್ನ ಮಗನಿಗೆ ನ್ಯಾಯಸಿಗಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ರೇಣುಕಾಸ್ವಾಮಿ ತಂದೆ ಕಾಶೀನಾಥ ಅವರು ಅಳಲು ತೋಡಿಕೊಂಡಿದ್ದಾರೆ.












Click it and Unblock the Notifications