ಸದಸ್ಯರ ಜಟಾಪಟಿ; ಹಿರಿಯೂರು ನಗರಸಭೆ ಸಾಮಾನ್ಯ ಸಭೆ ಅನೂರ್ಜಿತ
ಚಿತ್ರದುರ್ಗ, ಆಗಸ್ಟ್ 20; ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವಿನ ಜಟಾಪಟಿ ಮುಂದುವರೆದಿದೆ. ಜುಲೈ 14ರಂದು ನಡೆದ ನಗರಸಭೆ ಸಾಮಾನ್ಯ ಸಭೆಯನ್ನು ಚಿತ್ರದುರ್ಗ ಜಿಲ್ಲಾಧಿಕಾರಿಗಳು ಅನೂರ್ಜಿತಗೊಳಿಸಿ ಆದೇಶಿ ಹೊರಡಿಸಿದ್ದಾರೆ.
ಶುಕ್ರವಾರ ನಗರಸಭೆಯ ಬಿಜೆಪಿ ಬೆಂಬಲತ ಸದಸ್ಯ ಎಂ. ಡಿ. ಸಣ್ಣಪ್ಪ ಕಾಂಗ್ರೆಸ್ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ. "ನಗರಸಭೆಯಲ್ಲಿ ಕಾಂಗ್ರೆಸ್ ಆಡಳಿತಾರೂಢ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರು ಅಧಿಕಾರ ದುರುಪಯೋಗ ಮಾಡಿಕೊಂಡು ನಗರಸಭೆಯ ಸಭಾಂಗಣವನ್ನೇ ಕಾಂಗ್ರೆಸ್ ಕಚೇರಿ ರೀತಿಯಲ್ಲಿ ಬಳಕೆ ಮಾಡಿಕೊಂಡು, ಕಾಂಗ್ರೆಸ್ ಪಕ್ಷದ ಕಾರ್ಯಚಟುವಟಿಕೆಗಳು ಹಾಗೂ ಕಾಂಗ್ರೆಸ್ ಸದಸ್ಯರುಗಳ ಡೀಲಿಂಗ್ ಪ್ರಕರಣಗಳಿಗೆ ಬಳಸಿಕೊಳ್ಳುತ್ತಿರುವುದು ಖಂಡನೀಯ" ಎಂದು ಗಂಭೀರ ಆರೋಪ ಮಾಡಿದ್ಧಾರೆ.
"ಅಧ್ಯಕ್ಷೆಯ ಸಹೋದರ ಅಧ್ಯಕ್ಷರ ಪರವಾಗಿ ಹಾಗೂ ಉಪಾಧ್ಯಕ್ಷರುಗಳು ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರನ್ನು ವೈಯಕ್ತಿಕ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವಂತೆ ಒತ್ತಡ ಹೇರಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ" ಎಂದು ದೂರಿದ್ದಾರೆ.

"ಜುಲೈ 14ರಂದು ನಡೆದ ಸಾಮಾನ್ಯ ಸಭೆಯನ್ನು ಜಿಲ್ಲಾಧಿಕಾರಿಗಳು ಅಮಾನತ್ತಿನಲ್ಲಿಟ್ಟು ಆದೇಶ ಹೊರಡಿಸಿದ ಆದೇಶ ಪ್ರತಿ ತಲುಪಿದ ಕೂಡಲೇ ಬಾಲಸುಟ್ಟ ಬೆಕ್ಕಿನಂತೆ ಆದ ಅಧ್ಯಕ್ಷೆ, ಉಪಾಧ್ಯಕ್ಷರು ಹಾಗೂ ಕೆಲ ಕಾಂಗ್ರೆಸ್ ಸದಸ್ಯರು ನಗರಸಭೆಯ ಅಧಿಕೃತ ವಾಟ್ಸಾಪ್ ಗ್ರೂಪ್‌ಗಳಲ್ಲಿ ತುರ್ತು ಸಭೆ ನಡೆಯುವ, ಈ ಸಭೆಗೆ ಕೇವಲ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರು, ಅವರುಗಳೊಂದಿಗೆ ನಗರಸಭೆ ಪೌರಾಯುಕ್ತ ಸೇರಿ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ತಾಕೀತು ಮಾಡಿರುವುದಲ್ಲದೇ ಈ ಸಭೆಯಲ್ಲಿ ಭಾಗವಹಿಸಲು ನಿರಾಕರಿಸಿದ ಕಮೀಷನರ್‌ಗೆ ಆವಾಜ್ ಹಾಕಿರುವುದು ಆಡಳಿತದ ದೌರ್ಜನ್ಯಕ್ಕೆ ಸಾಕ್ಷಿಯಾಗಿವೆ" ಎಂದು ಆರೋಪಿಸಿದರು.
"ಕಾಂಗ್ರೆಸ್ ಸಭೆ ನಡೆಸಬೇಕೆಂದಿದ್ದರೆ ನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆಸಿಕೊಳ್ಳಲಿ. ನಮ್ಮದೇನು ಅಭ್ಯಂತರ ಇರುವುದಿಲ್ಲ. ಆದರೆ ಅವರ ಸ್ವಹಿತಾಸಕ್ತಿಗಾಗಿ ನಗರಸಭೆಯ ಕಚೇರಿ ಹಾಗೂ ಅಧಿಕಾರಿ ವರ್ಗದವರನ್ನು ದುರ್ಬಳಕೆ ಮಾಡಿಕೊಡುವ ಪ್ರವೃತ್ತಿ ನಿಲ್ಲಿಸದಿದ್ದರೇ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ " ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
"ನಗರಸಭೆಯಲ್ಲಿ ನಡೆಸಿದ ಕಾಂಗ್ರೆಸ್ ಸಭೆಗೆ ಸ್ಥಾಯಿ ಸಮಿತಿ ಅಧ್ಯಕ್ಷ ಚಿತ್ರಜಿತ್ ಯಾದವ್ ಹಾಗೂ ಮತ್ತೂರ್ವ ಬಿಜೆಪಿ ಸದಸ್ಯ ಮಹೇಶ್ ಪಲ್ಲವರೊಡನೆ ಸಭೆಗೆ ಹೋಗಿ ಸಭೆ ನಡೆಸದಂತೆ ಅಧಿಕಾರಿಗಳಿಗೆ ಹಾಗೂ ಅಧ್ಯಕ್ಷೆ, ಉಪಾಧ್ಯಕ್ಷ ಮತ್ತು ಕೆಲವು ಕಾಂಗ್ರೆಸ್ ಸದಸ್ಯರುಗಳಿಗೆ ಎಚ್ಚರಿಕೆ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಇದು ಮುಂದುವರೆದರೇ ಹಾಗೂ ಅಧಿಕಾರಿಗಳು ಸಭೆಗೆ ಭಾಗವಹಿಸಿದರೇ ಆಗು ಹೋಗುಗಳಿಗೆ ಅವರೇ ನೇರ ಹೊಣೆಯಾಗಬೇಕಾಗುತ್ತದೆ" ಎಂದರು.

ನಡಾವಳಿಗಳು ಅನೂರ್ಜಿತ; ಚಿತ್ರದುರ್ಗ ಜಿಲ್ಲಾಧಿಕಾರಿಗಳು ಹಿರಿಯೂರು ನಗರಸಭೆಯಲ್ಲಿ ಜುಲೈ 14ರಂದು ನಡೆದ ಸಭೆಯನ್ನು ಅನೂರ್ಜಿತಗೊಳಿಸಿ ಆದೇಶ ಹೊರಡಿಸಿದ್ದಾರೆ. ಸೂಚನೆಯನ್ನು ನಿಗದಿತ ವೇಳೆಯಲ್ಲಿ ಜಾರಿ ಮಾಡದ ನಿಯಮ ಬಾಹಿರ ನಡಾವಳಿಗಳನ್ನು ಮಾಡಿರುವುದರಿಂದ ಸಾಮಾನ್ಯ ಸಭೆಯ ನಡಾವಳಿಗಳನ್ನು ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಪ್ರಕರಣ 309ರ ಪ್ರಕಾರ ನಿಬಂಧನೆಯಲ್ಲಿರಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಪ್ರಾದೇಶಿಕ ಆಯುಕ್ತರಿಗೆ ಈ ಬಗ್ಗೆ ವರದಿ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ನಗರಸಭೆಯ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹಾಗೂ ಕೆಲವು ಸದಸ್ಯರ ಹಿತಾಸಕ್ತಿಗಷ್ಟೇ ಅಜೆಂಡಾ ತಯಾರಿಸಿದ್ದು, ಸರ್ವ ಸದಸ್ಯರ ಸಭೆಯ ನೋಟೀಸ್ ಕೇವಲ 2-3 ದಿನಗಳ ಹಿಂದಷ್ಟೇ ಬಿಜೆಪಿ ಹಾಗೂ ಬಿಜೆಪಿ ಬೆಂಬಲಿತ ಸದಸ್ಯರುಗಳಿಗೆ ತಲುಪಿಸಲಾಗಿತ್ತು. ಇದರಿಂದ ಜಿಲ್ಲಾಧಿಕಾರಿಗಳು ಸಭೆಯನ್ನು ಅನೂರ್ಜಿತ ಗೊಳಿಸಿದ್ದಾರೆ.
ಈ ಅಂಜೆಂಡಾದಲ್ಲಿ ಯಾವುದೇ ನಗರಾಭಿವೃದ್ಧಿ ವಿಷಯಗಳು ಇಲ್ಲ, ಕೆಲವು ಕಾಂಗ್ರೆಸ್ ಸದಸ್ಯರು ಪರೋಕ್ಷವಾಗಿ ಭಾಗಿಯಾಗಿ ಅಜೆಂಡಾವನ್ನು ಭೂಪರಿವರ್ತನೆ ವಿಷಯಕ್ಕೆ ಮಾತ್ರ ಸೀಮಿತಗೊಳಿಸಿದ್ದಾರೆ. ಅಲ್ಲದೆ ಬಿಜೆಪಿ ಬೆಂಬಲಿತ ಸದಸ್ಯೆ ಮಂಜುಳಾ ಸೂಚಿಸಿದ ಸರ್ವೆ ನಂ. 152/1 ಜಾಗದ ಕರುಡು ವಿನ್ಯಾಸ ಸಾಮಾನ್ಯ ಸಭೆಯಲ್ಲಿ ಸೇರಿಸಿಲ್ಲ, ಜೊತೆಗೆ ಸ್ಥಾಯಿ ಸಮಿತಿ ಸಭೆ ನಡೆಸದೇ ಸಾಮಾನ್ಯ ಸಭೆ ನಡೆಸಿದ ಬಗ್ಗೆ ಸ್ಥಾಯಿ ಸಮಿತಿ ಅಧ್ಯಕ್ಷರು ವಿರೋಧ ವ್ಯಕ್ತಪಡಿಸಿದ್ದರು. ಈ ಎಲ್ಲಾ ಕಾರಣಗಳಿಂದಾಗಿ ಜಿಲ್ಲಾಧಿಕಾರಿಗಳು ಈ ಸಭೆಯನ್ನು ಅನೂರ್ಜಿತ ಮಾಡಿದ್ದಾರೆ.












Click it and Unblock the Notifications