ಚಿತ್ರದುರ್ಗ: ಐವರ ಅಸ್ಥಿಪಂಜರ ಪ್ರಕರಣ ಪತ್ತೆ ಬಗ್ಗೆ ಎಫ್‌ಎಸ್‌ಎಲ್ ವರದಿಯಲ್ಲಿ ಏನಿದೆ?
ಚಿತ್ರದುರ್ಗ, ಮೇ, 16: ನಗರದ ಬೆಂಗಳೂರು ರಸ್ತೆಯ ಪಾಳು ಬಿದ್ದ ಮನೆಯೊಂದರಲ್ಲಿ ಒಂದೇ ಕುಟುಂಬದ ಐವರ ಅಸ್ಥಿಪಂಜರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಎಸ್‌ಎಲ್ ವರದಿ ಬಂದಿದ್ದು, ವರದಿಯಲ್ಲಿ ನಿದ್ದೆ ಮಾತ್ರೆ ಅಂಶ ಪತ್ತೆಯಾಗಿದೆ.
ನಿವೃತ್ತ ಎಇಈ ಜಗನಾಥ್ ರೆಡ್ಡಿ, ಪತ್ನಿ ಪ್ರೇಮ ಲೀಲಾ, ಪುತ್ರಿ ತ್ರಿವೇಣಿ, ಪುತ್ರರಾದ ಕೃಷ್ಣ, ನರೇಂದ್ರ ಹೀಗೆ ಐವರು ಸಾಮೂಹಿಕವಾಗಿ ಮನೆಯಲ್ಲಿ ಮೃತಪಟ್ಟಿದ್ದರು. ಇವರ ಅಸ್ಥಿಪಂಜರಗಳು ಮೃತಪಟ್ಟು 4-5 ವರ್ಷಗಳ ಬಳಿಕ, ಮೃತದೇಹಗಳು ಪತ್ತೆಯಾಗಿದ್ದವು. ಈ ಸಾವಿನ ಕಾರಣ ತಿಳಿಯಲು FSLಗೆ ಪೊಲೀಸರು ವರದಿ ಕಳುಹಿಸಿದ್ದರು.

ಇದೀಗ ಮೃತದೇಹ ಮರಣೋತ್ತರ ಪರೀಕ್ಷೆ ಮಾಡಿ ವರದಿ ಬಂದಿದ್ದು, ಐವರ ಮೃತದೇಹಗಳಲ್ಲಿ ಬಹುತೇಕ ನಿದ್ರೆ ಮಾತ್ರೆಯ ಅಂಶ ಪತ್ತೆ. ಇನ್ನು ಈ ವರದಿಯಲ್ಲಿ ನಿದ್ದೆಮಾತ್ರೆ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಎಫ್‌ಎಸ್‌ಎಲ್ ವರದಿ ಪ್ರಕರಣದ ತನಿಖಾಧಿಕಾರಿ ಕೈ ಸೇರಿದ್ದು, ನಿದ್ರೆ ಮಾತ್ರೆ ಸೇವಿಸಿ ಮೃತಪಟ್ಟದ್ದನ್ನು ಅಲ್ಲಗಳೆಯುವಂತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಈ ಪ್ರಕರಣ ಚಿತ್ರದುರ್ಗ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಈ ವಿಚಾರವಾಗಿ ಎಸ್ಪಿ ಸುದ್ದಿಗೋಷ್ಠಿ ನಡೆಸಿ ನಂತರ ಮಾಹಿತಿ ನೀಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಎಸ್ಪಿ ಹೇಳಿದ್ದೇನು?: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 6 ತಿಂಗಳ ಬಳಿಕ ಎಫ್.ಎಸ್.ಎಲ್ ವರದಿ ತನಿಖಾಧಿಕಾರಿ ಕೈ ಸೇರಿದ್ದು, ವರದಿಯಲ್ಲಿ ನಿದ್ರೆ ಮಾತ್ರೆ ಅಂಶ ಪತ್ತೆಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು FSL ವರದಿ ತನಿಖಾಧಿಕಾರಿ ಕೈ ಸೇರಿದೆ ಎಂದು ಎಸ್ಪಿ ತಿಳಿಸಿದರು.
71 ಸಾಕ್ಷ್ಯಗಳನ್ನು ಸಂಗ್ರಹಣೆ ಮಾಡಿ ಲ್ಯಾಬ್‌ಗೆ ಕಳುಹಿಸಲಾಗಿತ್ತು. FSL ಟೀಂ ಸಹ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ಮಾಡಿದ್ದರು. ಆಸ್ಪತ್ರೆಯಲ್ಲಿ ಡಾ.ವೇಣು, ಶ್ರೀಕೃಷ್ಣ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಈ ಪ್ರಕರಣದ ಬಗ್ಗೆ ಪವನ್ ಕುಮಾರ್ ಎಂಬುವವರು ದೂರು ಕೊಟ್ಟಿದ್ದರು.
ಐದು ಮಂದಿ ವಾಸ ಮಾಡ್ತಾ ಇದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಮರಣೋತ್ತರ ಪರೀಕ್ಷೆಯಲ್ಲಿ ಮೂಲೆಗಳಿಗೆ ಪೆಟ್ಟಾದ ಅಂಶ ಕಂಡು ಬಂದಿಲ್ಲ. ಐದು ಅಸ್ತಿ ಪಂಜರದಲ್ಲಿ ಡ್ರಗ್ ಅಂಶ ಸಿಕ್ಕಿದೆ. ನಿದ್ರೆ ಮಾತ್ರೆ ಸೇವಿಸಿ ಸಾವನ್ನಪ್ಪಿರಬಹುದು. ಮನೆಯ ಅಡುಗೆ ಮೆನೆಯಲ್ಲಿದ್ದ ಪಾತ್ರೆಗಳಲ್ಲಿ ಸೈನೈಡ್ ಅಂಶ ಸಿಕ್ಕಿದೆ. ಆದರೆ ಆಸ್ತಿ ಪಂಜರದಲ್ಲಿ ಸೈನೈಡ್ ಏನು ಸಿಕ್ಕಿಲ್ಲ. ಮನೆಯಲ್ಲಿ ಟ್ಯಾಬ್ಲೆಟ್ ಹಾಗೂ ಮೆಡಿಸಿನ್ ಸಹ ಸಿಕ್ಕಿತ್ತು ಎಂದು ತಿಳಿಸಿದರು.
ನಿದ್ರೆ ಮಾತ್ರೆ ಸೇವಿಸಿ ಸಾವಗಿರಬಹುದು: ಐದು ಮಂದಿ 2019, ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಸಾವನ್ನಪ್ಪಿರುವ ಶಂಕೆಯಿದೆ. ಮರಣೋತ್ತರ ಪರೀಕ್ಷೆಯಲ್ಲಿ ಸಹ ಐದು ವರ್ಷಗಳು ಆಗಿರಬಹುದು ಎಂದು ಹೇಳಲಾಗಿದೆ. ನಮಗೆ ಸಿಕ್ಕ ಪತ್ರ ಯಾರ ಬರಹ ಎಂದು ತಿಳಿಯಲು ಸ್ಯಾಂಪಲ್ ಸಿಕ್ಕಿಲ್ಲ. ವಿಶ್ವಾಸ್ ಅಂತಾ ಪತ್ರದಲ್ಲಿ ಉಲ್ಲೇಖವಿದ್ದ ವ್ಯಕ್ತಿಯನ್ನು ವಿಚಾರಣೆ ಮಾಡಲಾಯಿತು. ಆದರೆ ಆ ವ್ಯಕ್ತಿಗೆ ಈ ಸಾವುಗಳಿಗೆ ಸಂಬಂಧ ಇಲ್ಲ ಎಂದು ತಿಳಿಯಿತು.
ಇನ್ನೂ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಹಾಗಾಗಿ ಈ ತನಿಖೆ ಮುಂದುವರೆಯುತ್ತದೆ. ಹೇಗೆ ಐವರು ಮೃತಪಟ್ಟಿದ್ದಾರೆ ಎಂಬುದು FSLನಲ್ಲಿ ಧೃಡ ಆಗಿದೆ ಎಂದು ಚಿತ್ರದುರ್ಗ ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ಮಾಹಿತಿ ನೀಡಿದರು.
ಪ್ರಕರಣ ಹಿನ್ನೆಲೆ: 2023 ಡಿಸೆಂಬರ್ 28ರಂದು ಮನೆಯೊಂದರಲ್ಲಿ ಐದು ಮೃತಪಟ್ಟ ದೇಹಗಳ ಅಸ್ಥಿಪಂಜರ ಇರುವುದು ಪತ್ತೆಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ನಗರದ ಬಡಾವಣೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದರು. ಸಾವಿಗೆ ನಿಖರ ಕಾರಣ ತಿಳಿಯಲು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಎಫ್ಎಸ್ಎಲ್ ವರದಿಗೆ ಕಳುಹಿಸಿದ್ದರು.
ಚಿತ್ರದುರ್ಗ ತಾಲ್ಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ನಿವೃತ್ತ ಎಇಇ ಜಗನಾಥ್ ರೆಡ್ಡಿ, ಪತ್ನಿ ಪ್ರೇಮ ಲೀಲಾ, ಪುತ್ರಿ ತ್ರಿವೇಣಿ, ಪುತ್ರರಾದ ಕೃಷ್ಣಾರೆಡ್ಡಿ, ನರೇಂದ್ರ ರೆಡ್ಡಿ ಮೃತಪಟ್ಟಿದ್ದರು.












Click it and Unblock the Notifications