ಚಳ್ಳಕೆರೆ: ಖಾಸಗಿ ಶಾಲೆಯಲ್ಲಿ ರಾಷ್ಟ್ರ ಧ್ವಜಕ್ಕೆ ಅವಮಾನ, ಸಾರ್ವಜನಿಕರ ಆಕ್ರೋಶ
ಚಿತ್ರದುರ್ಗ, ಜೂನ್, 06: ರಾಷ್ಟ್ರದ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿರುವ ಘಟನೆ ಕೋಟೆ ನಾಡು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಚಿನ್ಮಯ್ ಶಾಲೆಯಲ್ಲಿ ನಡೆದಿದ್ದು, ಇದೀಗ ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಅಲ್ಲದೆ ಈ ಘಟನೆಗೆ ಸಾರ್ವಜನಿಕರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಹಾಗೆಯೆ ತ್ರಿವರ್ಣ ಧ್ವಜಕ್ಕೆ ಅಪಮಾನ ಮಾಡಿರುವ ಶಾಲೆಯ ಸಿಬ್ಬಂದಿ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಶಾಲೆ ಮುಂಭಾಗ ಇರುವ ಕಸದ ತೊಟ್ಟಿಯಲ್ಲಿ ರಾಷ್ಟ್ರಧ್ವಜ ಪತ್ತೆಯಾಗಿದ್ದು, ಈ ಶಾಲೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಇನ್ನು ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದುಬಂದಿದೆ.

ದೇಶದಲ್ಲಿ ಯಾರಿಗೂ ಕೊಡದಷ್ಟು ಗೌರವವನ್ಜು ತ್ರಿವರ್ಣ ಧ್ವಜಕ್ಕೆ ನೀಡುತ್ತಾರೆ. ಈ ತ್ರಿವರ್ಣ ಧ್ವಜ ಅಷ್ಟರಮಟ್ಟಿಗೆ ನಮ್ಮಲ್ಲಿ ಪ್ರಸಿದ್ಧಿಯಾಗಿದೆ. ಏಕೆಂದರೆ ಈ ಧ್ವಜದಲ್ಲಿರುವ ಮೂರು ಬಣ್ಣಗಳು ಕೂಡ ದೇಶಕ್ಕೆ ಒಳಿತಾಗುವಂತಹ ಒಂದೊಂದು ಸಂಕೇತವನ್ನು ಸೂಚಿಸುತ್ತವೆ. ಶಾಂತಿ, ಸಮೃದ್ಧಿಯ ಸಂಕೇತಗಳನ್ನು ಇಲ್ಲಿ ಕಾಣಬಹುದಾಗಿದೆ. ಈ ಧ್ವಜವನ್ನು ದೇಶಕ್ಕೆ ಸೇವೆ ಸಲ್ಲಿಸುವ ಮಹಾನಿಯರ ಮೇಲೆ ಹಾಕುತ್ತಾರೆ. ಇಂತದರಲ್ಲಿ ಇದಕ್ಕೆ ಯಾರಾದರೂ ಅವಮಾನ ಮಾಡಿದರೆ ನಮ್ಮ ಜನ ಸುಮ್ಮನಿರುತ್ತಾರಾ..
ಅಲ್ಲದೆ ರಾಷ್ಟ್ರಧ್ವಜ ಅಥವಾ ರಾಷ್ಟ್ರಗೀತೆ "ಜನಗನಮನ"ಕ್ಕೆ ಅವಹೇಳನ ಮಾಡಿದರೆ ಮೂರು ವರ್ಷ ಜೈಲು ಶಿಕ್ಷೆ ಜೊತೆಗೆ ದಂಡ ಕಟ್ಟಬೇಕು. ಭಾರತ ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜಕ್ಕೆ ಅವಹೇಳನ ಮಾಡದಂತೆ ಭಾರತ ಸರ್ಕಾರ ದಿ ಪ್ರಿವೆಷನ್ಸನ್ ಆಫ್ ಇನ್‌ಸಲ್ಟ್ ಟು ನ್ಯಾಷನಲ್ ಹಾನರ್ ಅಕ್ಟ್ 1971 ಕಾಯ್ದೆ ಮೂಲಕ ಕೊಟ್ಟಿರುವ ರಕ್ಷಣೆಯಿದು. ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ಭಾರತ ಧ್ವಜ, ಸಂವಿಧಾನ, ನಾಡಗೀತೆಗೆ ಪ್ರತಿಯೊಬ್ಬ ಭಾರತೀಯ ಪರಮೋಚ್ಛ ಗೌರವ ಕೊಡಬೇಕು. ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ ಕೂಡ.
ಕರ್ನಾಟಕ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದದ ಬೆನ್ನಲ್ಲೇ ರಾಜ್ಯದಲ್ಲಿ ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವುಂಪು ಅವರು ರಚಿಸಿರುವ 'ಜಯ ಭಾರತ ಜನನಿಯ ತನುಜಾತೆ'ಗೆ ಅವಮಾನ ಮಾಡಿದ ಪ್ರಕರಣ ದೊಡ್ಡ ಚರ್ಚೆ ಹುಟ್ಟು ಹಾಕಿದೆ. ರೋಹಿತ್ ಚಕ್ರತೀರ್ಥನನ್ನು ಬಂಧಿಸಬೇಕು ಎಂದು ಕೆಲವರು ಕಳೆದ ಕೆಲ ದಿನಗಳ ಹಿಂದೆಯಷ್ಟೇ ಆಗ್ರಹಿಸಿದ್ದರು.
ಬಿಜೆಪಿಯವರು ಅಂತೂ ನಾಡಗೀತೆಗೆ ಅವಮಾನ ಮಾಡಿದ ಚಕ್ರತೀರ್ಥ ಪ್ರತಿಭೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಒಂದು ರಾಷ್ಟ್ರಕ್ಕೆ ರಾಷ್ಟ್ರಗೀತೆ ಪ್ರಶ್ನಾತೀತ. ಆದರೆ ರಾಜ್ಯದ ವಿಚಾರಕ್ಕೆ ಬಂದರೆ, ನಾಡಿನ ಜಲ, ನೆಲ, ಭಾವನೆಗಳಿಗೆ ಗೌರವ ಕೊಡಲಿಕ್ಕೆ ಸಂವಿಧಾನವೇ ಅವಕಾಶ ಕೊಟ್ಟಿದೆ. ಹೀಗಾಗಿ ಒಂದು ರಾಜ್ಯದ ಭಾವನೆ ವಿಚಾರ ಬಂದಾಗ ನಾಡಗೀತೆ, ನಾಡಧ್ವಜ ಮುಖ್ಯವಾಗುತ್ತದೆ.
ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ರಾಷ್ಟ್ರಧ್ವಜ, ರಾಷ್ಟ್ರಗೀತೆ ಪ್ರಶ್ನಾತೀತ. ನಾಡಿನ ವಿಚಾರಕ್ಕೆ ಬಂದರೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗದಂತೆ ಸಂವಿಧಾನದ ಚೌಕಟ್ಟಿನಲ್ಲಿ ನಾಡ ಧ್ವಜ ಮತ್ತು ನಾಡಗೀತೆಗೆ ಅವಮಾನ ಮಾಡುವರನ್ನು ಪ್ರತ್ಯೇಕವಾಗಿ ದಂಡಿಸುವ ಕಾನೂನು ರೂಪಿಸುವುದರಲ್ಲಿ ತಪ್ಪೇನಿದೆ? ಎಂಬ ಅಭಿಪ್ರಾಯ ವ್ಯಕ್ತವಾಗಿದೆ.












Click it and Unblock the Notifications