ವಿರೋಧ ಪಕ್ಷಗಳಲ್ಲಿ ಹುಟ್ಟಿಕೊಂಡಿದೆ ಸೋಲಿನ ಭೀತಿ; ಬಿ.ವೈ.ವಿಜಯೇಂದ್ರ
ಚಿತ್ರದುರ್ಗ, ಅಕ್ಟೋಬರ್ 22: ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಲೆ ಎದ್ದಿರುವುದು ವಿರೋಧ ಪಕ್ಷಗಳಿಗೆ ಭಯ ಹುಟ್ಟಿಸಿದೆ. ಶಿರಾ ಮತ್ತು ಆರ್.ಆರ್. ನಗರ ಉಪಚುನಾವಣೆಯಲ್ಲಿ ಸೋಲಿನ ಭೀತಿಯಿಂದ ವಿರೋಧ ಪಕ್ಷಗಳು ಆಧಾರರಹಿತ ಆರೋಪ ಮಾಡುತ್ತಿವೆ ಎಂದಿದ್ದಾರೆ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ.
ಇಂದು ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠಕ್ಕೆ ಭೇಟಿ ನೀಡಿ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರ ಆಶೀರ್ವಾದ ಪಡೆದುಕೊಂಡ ಅವರು ಮಾಧ್ಯಮದವರ ಜೊತೆ ಮಾತನಾಡಿದರು.
ಸಿಎಂ ಮಗ ನಾಳೆ ಬೆಳಗ್ಗೆ ಈ ಕಡೆ ತಿರುಗಿ ನೋಡಲ್ಲ; ಎಚ್ಡಿಕೆ
ವಿಜಯೇಂದ್ರ ಅಕ್ರಮ ಹಣ ಸುರಿದು ಶಿರಾ ಕ್ಷೇತ್ರದ ಚುನಾವಣೆ ಮಾಡುತ್ತಿದ್ದಾರೆ ಎಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಅವರು,"ಸೋಲಿನ ಭೀತಿಯಿಂದ ವಿರೋಧ ಪಕ್ಷದವರು ಆಧಾರರಹಿತವಾಗಿ ಮಾತನಾಡುತ್ತಿದ್ದಾರೆ" ಎಂದರು.
ಅ.21ಕ್ಕೆ ತುಮಕೂರಿನಲ್ಲಿ ಚುನಾವಣಾ ಪ್ರಚಾರದಲ್ಲಿದ್ದ ಎಚ್. ಡಿ. ಕುಮಾರಸ್ವಾಮಿ, "ಬಿ.ವೈ.ವಿಜಯೇಂದ್ರ ಯುವಕರಿಗೆ ಆಮಿಷವೊಡ್ಡಿ ದಾರಿ ತಪ್ಪಿಸುತ್ತಿದ್ದಾರೆ" ಎಂದು ವಿಜಯೇಂದ್ರ ವಿರುದ್ಧ ಟೀಕಿಸಿದ್ದರು.
ಕ್ಷೇತ್ರದ ಮತದಾರರು ಬದಲಾವಣೆ ಬಯಸಿದ್ದಾರೆ. ಬಿಜೆಪಿಯನ್ನು ಅಧಿಕಾರಕ್ಕೆ ತರುವ ವಿಶ್ವಾಸ ಪಕ್ಷದ ಕಾರ್ಯಕರ್ತರಲ್ಲಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಆಗಬೇಕು ಎಂಬ ಬಯಕೆಯನ್ನು ಆ ಕ್ಷೇತ್ರದ ಜನರು ವ್ಯಕ್ತಪಡಿಸಿದ್ದಾರೆ. ಅಭಿವೃದ್ಧಿ ಆಧಾರದ ಮೇಲೆ ಚುನಾವಣೆ ಎದುರಿಸುತ್ತಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ವಿಜಯೇಂದ್ರ ಉತ್ತರಿಸಿದರು.