Monsoon Rain: ಮಳೆಗಾಲ ಮುನ್ನ BWSSB ಅಲರ್ಟ್: 15 ದಿನಗಳ ವಿಶೇಷ ಕಾರ್ಯಾಚರಣೆ ಆರಂಭ
ಬೆಂಗಳೂರು; ಮಳೆಗಾಲ ಆರಂಭವಾದರೆ ಸಾಕು ನಗರದ ಅನೇಕ ಕಡೆಗಳಲ್ಲಿ ನಾಗರಿಕ ಸಮಸ್ಯೆಗಳು ತಲೆದೂರುತ್ತವೆ. ಅದರ ನಿರ್ವಹಣೆಗೆ ಈಗಾಗಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಕ್ರಮ ಕೈಗೊಂಡಿದ್ದು, ಇದೀಗ ಬೆಂಗಳೂರು ಜಲಮಂಡಳಿಯು ಸಹ ಹದಿನೈದು ದಿನಗಳ ಮಹತ್ವದ ಕಾರ್ಯಾಚರಣೆ ಹಮ್ಮಿಕೊಂಡಿದೆ.
ಇನ್ನೇನು ಜೂನ್ ಆರಂಭದಲ್ಲಿ ಮುಂಗಾರು ಮಳೆ 2026 (Monsoon Rain 2026) ಶುರುವಾಗುತ್ತದೆ. ಮಳೆಗಾಲದಲ್ಲಿ ನಗರದ ಜನತೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಹಾಗೂ ಮುಂದಿನ 15 ದಿನಗಳ ಒಳಗಾಗಿ ಒಳಚರಂಡಿ ಹೂಳೆತ್ತುವ ಕಾಮಗಾರಿಗಳನ್ನು ಸಂಪೂರ್ಣವಾಗಿ ಪೂರ್ಣಗೊಳಿಸುವಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚಂರಂಡಿ ಮಂಡಳಿ (BWSSB) ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ
ಮಂಗಳವಾರ ಬೆಂಗಳೂರಿನ ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಮುಂಗಾರು ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಳೆಗಾಲದಲ್ಲಿ ನಗರದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗದಂತೆ ಹಾಗೂ ಮ್ಯಾನ್‌ಹೋಲ್‌ಗಳು ಉಕ್ಕಿಹರಿಯದಂತೆ ತಡೆಯುವುದು ನಮ್ಮ ಮೊದಲ ಆದ್ಯತೆಯಾಗಬೇಕು. ಮಳೆಯಿಂದ ಹಾನಿಗೊಳಗಾಗುವ ಸೂಕ್ಷ್ಮ ಪ್ರದೇಶಗಳನ್ನು ತಕ್ಷಣವೇ ಗುರುತಿಸಿ, ಮುಂದಿನ 15 ದಿನಗಳ ಒಳಗೆ ಕಡ್ಡಾಯವಾಗಿ ಮ್ಯಾನ್‌ಹೋಲ್‌ಗಳ ಸ್ವಚ್ಛತೆ ಹಾಗೂ ಹೂಳೆತ್ತುವ ಕಾರ್ಯವನ್ನು (Desilting) ಪೂರ್ಣಗೊಳಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಮಳೆ ನೀರು ನುಗ್ಗದಂತೆ ಕ್ರಮ; ವರದಿ ಸಲ್ಲಿಕೆ ಕಡ್ಡಾಯ
ಕ್ಷೇತ್ರ ಮಟ್ಟದ ಪರಿಶೀಲನೆ ಹಾಗೂ ತಾಂತ್ರಿಕ ಎಚ್ಚರಿಕೆ ಕುರಿತು ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಮಳೆನೀರು ನಮ್ಮ ಒಳಚರಂಡಿ ವ್ಯವಸ್ಥೆಯೊಳಗೆ ನುಗ್ಗದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ವಲಯವಾರು ಮುಖ್ಯ ಅಭಿಯಂತರರು ಕೇವಲ ಕಚೇರಿಗೆ ಸೀಮಿತವಾಗದೆ, ಖುದ್ದು ಸ್ಥಳಗಳಿಗೆ ಭೇಟಿ ನೀಡಿ ಈ ಕಾರ್ಯಗಳ ಬಗ್ಗೆ ವಾಸ್ತವ ಪರಿಶೀಲನೆ ನಡೆಸಬೇಕು. ಹಾಗೆಯೇ, ತಾವು ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಕೇಂದ್ರ ಕಚೇರಿಗೆ ಸಮಗ್ರ ವರದಿ ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಹೇಳಿದರು.
ತುರ್ತು ಸಂದರ್ಭಗಳ ನಿರ್ವಹಣೆ ಕುರಿತು ಅಧಿಕಾರಿಗಳನ್ನು ಎಚ್ಚರಿಸಿದ ಡಾ. ರಾಮ್ ಪ್ರಸಾತ್ ಮನೋಹರ್, ಮಳೆಗಾಲದಲ್ಲಿ ಯಾವುದೇ ಪ್ರದೇಶದಲ್ಲಿ ಮ್ಯಾನ್‌ಹೋಲ್ ಕಟ್ಟಿಕೊಳ್ಳುವ ಅಥವಾ ಇನ್ನಿತರ ತೊಂದರೆಗಳು ಎದುರಾದರೆ, ತಕ್ಷಣವೇ ಸ್ಪಂದಿಸಲು ನಮ್ಮ ವ್ಯವಸ್ಥೆ ಸಿದ್ಧರಿರಬೇಕು. ಇದಕ್ಕಾಗಿ, ಪ್ರತಿಯೊಂದು ಕಾರ್ಪೊರೇಷನ್ ವ್ಯಾಪ್ತಿಗೂ ಒಂದು ಪ್ರತ್ಯೇಕ ತುರ್ತು ನಿರ್ವಹಣಾ ತಂಡವನ್ನು ಸದಾ ಸನ್ನದ್ಧ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಸಾರ್ವಜನಿಕರ ದೂರುಗಳಿಗೆ ವಿಳಂಬವಿಲ್ಲದೆ ಪರಿಹಾರ ಒದಗಿಸಬೇಕು ಎಂದು ಹೇಳಿದರು.
ಉನ್ನತ ಮಟ್ಟದ ಸಭೆಯಲ್ಲಿ ಜಲಮಂಡಳಿಯ ಪ್ರಧಾನ ಮುಖ್ಯ ಅಭಿಯಂತರರು, ಎಲ್ಲಾ ವಲಯಗಳ ಮುಖ್ಯ ಅಭಿಯಂತರರು ಸೇರಿದಂತೆ ಮಂಡಳಿಯ ಹಿರಿಯ ಅಧಿಕಾರಿಗಳು ಪಾಲ್ಗೊಂಡು ಮಳೆ ಮುಂಜಾಗ್ರತೆ ದೃಷ್ಟಿಯಿಂದ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದರು.













Click it and Unblock the Notifications