Bengaluru: ಶಿಥಿಲ ಕಟ್ಟಡಗಳ ತೆರವಿಗೆ ಡೆಡ್‌ಲೈನ್: ನಿರ್ಲಕ್ಷ್ಯಕ್ಕೆ ಅಧಿಕಾರಿಗಳೇ ಹೊಣೆ: ಜಿಬಿಎ ಎಚ್ಚರಿಕೆ
Bengaluru: ಶಿಥಿಲ ಕಟ್ಟಡಗಳ ತೆರವಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಡೆಡ್‌ಲೈನ್ ನಿಗದಿ ಮಾಡಿದೆ. ಅಲ್ಲದೆ ನಿರ್ಲಕ್ಷ್ಯಕ್ಕೆ ಅಧಿಕಾರಿಗಳೇ ಹೊಣೆ ಎಂದು ಹೇಳಲಾಗಿದೆ. ಇನ್ನು ಬೃಹತ್ ಮಳೆ ನೀರು ಕಾಲುವೆಗಳ ನಿರ್ವಹಣೆಗೆ ಸಮಗ್ರ ಕ್ರಿಯಾ ಯೋಜನೆ ರೂಪಿಸುವಂತೆ ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್.ರಮೇಶ್ ಅವರು ನಿರ್ದೇಶನ ನೀಡಿದ್ದಾರೆ.
ಬೆಂಗಳೂರು ಪೂರ್ವ ನಗರ ಪಾಲಿಕೆಯ ಕಾಮಗಾರಿ ವಿಭಾಗಕ್ಕೆ ಸಂಬಂಧಿಸಿದಂತೆ ಬೃಹತ್ ಮಳೆ ನೀರು ಕಾಲುವೆಗಳ ನಿರ್ವಹಣೆ, ಸಿಎಂಐಡಿಪಿ ಮತ್ತು ಎಸ್ಎಸ್ಐಪಿ ಅನುದಾನದಡಿ ಕೈಗೊಂಡಿರುವ ಅಭಿವೃದ್ದಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಹಾಗೂ ಶಿಥಿಲಾವಸ್ಥೆ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಆಯುಕ್ತರಾದ ಡಿ.ಎಸ್.ರಮೇಶ್ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಬೃಹತ್ ಮಳೆ ನೀರುಗಾಲುವೆ ನಿರ್ವಹಣೆ
ನಗರ ಪಾಲಿಕೆಯ ಮಹದೇವಪುರ ವಲಯದಲ್ಲಿ ಸುಮಾರು 35 ಕಿ.ಮೀ ಮತ್ತು ಕೆ.ಆರ್ ಪುರ ವಲಯ ವ್ಯಾಪ್ತಿಯಲ್ಲಿ ಸುಮಾರು 45ಕಿ.ಮೀ. ಉದ್ದದ ಕಾಂಕ್ರೀಟ್ ಮಳೆ ನೀರು ಕಾಲುವೆಗಳ ನಿರ್ವಹಣೆ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು.
* ಮಳೆ ನೀರು ಕಾಲುವೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ವಾರ್ಡ್ ವಾರು ಕ್ರಿಯಾ ಯೋಜನೆ ಸಿದ್ದಪಡಿಸಿಕೊಂಡು ಕಾರ್ಯ ನಿರ್ವಹಿಸುವುದು.ಪ್ರತಿ ಮೂರು ತಿಂಗಳಿಗೊಮ್ಮೆಯಂತೆ ವರ್ಷಕ್ಕೆ 4 ಬಾರಿ ನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಮಳೆ ನೀರು ಕಾಲುವೆಗಳಲ್ಲಿ ಹೂಳು ಎತ್ತುವ ಕಾರ್ಯವನ್ನು ಕೈಗೊಳ್ಳಲು ನಿರ್ದೇಶನ ನೀಡಲಾಯಿತು.
* ಸಂಬಂಧಪಟ್ಟ ವಿಭಾಗದ ಕಾರ್ಯಪಾಲಕ ಎಂಜಿನಿಯರರು ಕಾಲುವೆ ನಿರ್ವಹಣೆ ಕಾಮಗಾರಿಯನ್ನು ನಿರಂತರವಾಗಿ ಮೇಲ್ವಿಚಾರಣೆ ನಡೆಸುವುದಕ್ಕೆ ನಿರ್ದೇಶನ ನೀಡಲಾಯಿತು.
* ಪ್ರತಿದಿನ ಕಾಲುವೆಗಳ ಸ್ವಚ್ಚತೆಗೆ ಗುರಿ ನಿಗದಿಪಡಿಸಿಕೊಂಡು, ಎಷ್ಟು ಕಿ.ಮೀ ವ್ಯಾಪ್ತಿಯಲ್ಲಿ ಕಾಲುವೆಗಳನ್ನು ಸ್ವಚ್ಚಗೊಳಿಸಲಾಗಿದೆ ಎಂಬ ವರದಿಯನ್ನು ಸಲ್ಲಿಸುವುದು.
* ಮಳೆ ನೀರು ಕಾಲುವೆಗಳನ್ನು ಸ್ವಚ್ಚಗೊಳಿಸಿರುವ ಬಗ್ಗೆ ಕಾಲುವೆ ನಿರ್ವಹಣೆಯ ಪೂರ್ವ ಮತ್ತು ನಂತರದ ಡ್ರೋನ್ ವಿಡಿಯೋ ಮತ್ತು ಛಾಯಾಚಿತ್ರವನ್ನು ಸಲ್ಲಿಸುವುದು.
* ವಿಶ್ವ ಬ್ಯಾಂಕ್ ಅನುದಾನದಡಿ ಬೃಹತ್ ಮಳೆ ನೀರು ಕಾಲುವೆಗಳನ್ನು ಅಭಿವೃದ್ದಿಪಡಿಸುತ್ತಿರುವ ಸ್ಥಳಗಳಲ್ಲಿ ಯೋಜನಾ ಅನುಸ್ಠಾನ ಘಟಕದೊಂದಿಗೆ ಸಮನ್ವಯ ಸಾಧಿಸಿ ಕಾಲುವೆಗಳ ನಿರ್ವಹಣೆಗೆ ಕ್ರಮವಹಿಸುವುದು ಹಾಗೂ ಕಾಲುವೆಗಳನ್ನು ಸ್ವಚ್ಚಗೊಳಿಸಿರುವ ಕಡೆಯಲ್ಲಿ ಅನಿರೀಕ್ಷಿತವಾಗಿ ತಪಾಸಣೆಯನ್ನು ನಡೆಸಲಾಗುವುದು,ಈ ಸಂದರ್ಭಗಳಲ್ಲಿ ಕಾಲುವೆಗಳಲ್ಲಿ ಹೂಳು ತುಂಬಿರುವುದು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಯನ್ನೆ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.
* ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನೆರೆ ಹಾವಳಿ ಉಂಟುಮಾಡುವ ಪ್ರಮುಖ ಸ್ಥಳಗಳ್ನನು ಪರಿಶೀಲಿಸಿ ಮಳೆಗಾಲದಲ್ಲಿ ನೀರು ನಿಲ್ಲದಂತೆ ಸೂಕ್ತ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಆಯುಕ್ತರು ನಿರ್ದೇಶನ ನೀಡಿದರು.
ಸಿಎಂಐಡಿಪಿ - ಎಸ್.ಎಸ್.ಐ.ಪಿ: ಕಾಮಗಾರಿಗಳಿಗೆ ವೇಗ ನೀಡಿ
ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಿಎಂಐಡಿಪಿ ಮತ್ತು ಎಸ್.ಎಸ್.ಐ.ಪಿ ಅನುದಾನದ ಅಡಿಯಲ್ಲಿ ಕೈಗೊಂಡಿರುವ ಆರ್ಟಿಯಲ್, ಸಬ್ ಆರ್ಟಿಯಲ್ ಹಾಗೂ ವಾರ್ಡ್ ರಸ್ತೆಗಳ ಸಮಗ್ರ ಅಭಿವೃದ್ದಿಗೆ ಸಂಬಂಧಿಸಿದಂತೆ ಈಗಾಗಲೇ ಸಿವಿಲ್ ಕಾಮಗಾರಿಗಳು ಪೂರ್ಣಗೊಂಡಿರುವ ಕಡೆಗಳಲ್ಲಿ ಮೇ 15ರೊಳಗೆ ರಸ್ತೆ ಡಾಂಬರೀಕರಣವನ್ನು ಪೂರ್ಣಗೊಳಿಸುವಂತೆ ಹಾಗೂ ಸಿವಿಲ್ ಕಾಮಗಾರಿಗಳು ಇನ್ನೂ ಬಾಕಿಯಿರುವ ಕಡೆಗಳಲ್ಲಿ ಮೇ 30ರೊಳಗೆ ಸಂಪೂರ್ಣ ಅಭಿವೃದ್ದಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದರು.
ಶಿಥಿಲಗೊಂಡಿರುವ ಹಳೆಯ ಕಟ್ಟಡ - ಕಾಂಪೌಂಡ್ ತೆರವುಗೊಳಿಸಿ
ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಶಿಥಿಲಗೊಂಡಿರುವ ಹಳೆ ಕಟ್ಟಡಗಳು, ಕಾಂಪೌಂಡ್‌ಗಳು, ತಡೆಗೋಡೆಗಳು,ಇನ್ನಿತರೆ ಅಪಾಯಕಾರಿ ನಿರ್ಮಾಣಗಳನ್ನು ಕೂಡಲೇ ಗುರುತಿಸುವುದು. ಸರ್ಕಾರಿ ಜಾಗಗಳಲ್ಲಿರುವ ಅಪಾಯಕಾರಿ ಕಟ್ಟಡಗಳನ್ನು ಕೂಡಲೇ ತೆರವುಗೊಳಿಸಲು ಕ್ರಮವಹಿಸುವುದು ಹಾಗೂ ಖಾಸಗೀ ಸ್ವತ್ತಿನಲ್ಲಿರುವ ಅಪಾಯಕಾರಿ ಕಟ್ಟಡಗಳ ತೆರವಿಗೆ ನೋಟಿಸ್ ನೀಡುವುದರೊಂದಿಗೆ ಸೂಕ್ತ ಬ್ಯಾರಿಕೇಡ್ ವ್ಯವಸ್ಥೆ, ಸಾರ್ವಜನಿಕ ಪ್ರಕಟಣೆ ಪ್ರಕಟಿಸುವುದು, ಸಾರ್ವಜನಿಕರು ಮತ್ತು ವಾಹನ ಸವಾರರು ಸಂಚರಿಸದಂತೆ ಬದಲಿ ವ್ಯವಸ್ಥೆ ಕಲ್ಪಿಸಲು ಆಯುಕ್ತರು ಸೂಚಿಸಿದರು.
ನಗರ ಪಾಲಿಕೆ ವ್ಯಾಪ್ತಿಯಲ್ಲಿ ಶಿಥಿಲಗೊಂಡಿರುವ ಕಟ್ಟಡ ಅಥವಾ ನಿರ್ಮಾಣಗಳಿಂದ ಯಾವುದೇ ತೊಂದರೆಯಾದರೆ ಸಂಬಂಧಪಟ್ಟ ಕಾರ್ಯಪಾಲಕ ಎಂಜಿನಿಯರರು ಮತ್ತು ಸಹಾಯಕ ಕಾರ್ಯಪಾಲಕ ಎಂಜಿನಿಯರರೇ ನೇರ ಜವಾಬ್ದಾರರಾಗಿದ್ದು, ಶಿಥಿಲಗೊಂಡಿರುವ ಕಟ್ಟಡಗಳ ತೆರವಿಗೆ ನಿರ್ದಾಕ್ಷಿಣ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದ್ದಾರೆ.












Click it and Unblock the Notifications