ಬಿಟ್ ಕಾಯಿನ್ ಹಗರಣದ ತಪ್ಪಿತಸ್ಥರಿಗೆ ಶಿಕ್ಷೆ ಖಚಿತ: ಬಿಜೆಪಿ ಶಾಸಕ
ಚಿತ್ರದುರ್ಗ, ನವೆಂಬರ್ 13: "ರಾಜ್ಯದಲ್ಲಿ ಬಿಟ್ ಕಾಯಿನ್ ಸದ್ದು ಜೋರಾಗಿದ್ದು, ಬಿಟ್ ಕಾಯಿನ್ ವಿಚಾರದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗುವುದು ಶತಸಿದ್ಧ, ಅವರು ಯಾರೇ ಆಗಿರಲಿ ತಪ್ಪು ಮಾಡಿದವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ," ಎಂದು ಬಿಜೆಪಿ ಹಿರಿಯ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೇಳಿದರು.
ಚಿತ್ರದುರ್ಗ ನಗರದ ಐಶ್ವರ್ಯ ಫೋರ್ಟ್ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ವಿರೋಧ ಪಕ್ಷದವರು ಏನಾದರೂ ಆರೋಪ ಮಾಡುವಾಗ ಅದಕ್ಕೆ ತಕ್ಕಂತೆ ಆಧಾರವನ್ನು ನೀಡಬೇಕು ಇಲ್ಲವಾದಲ್ಲಿ ಆರೋಪ ಮಾಡುವುದನ್ನು ನಿಲ್ಲಿಸಬೇಕೆಂದು," ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಕಾಂಗ್ರೆಸ್ ಮುಖಂಡರಿಗೆ ಕಿವಿಮಾತು ಹೇಳಿದರು.
"ರಾಜ್ಯದಲ್ಲಿ ವಿರೋಧ ಪಕ್ಷ ಇದೆ ಎಂದು ಜನತೆಗೆ ಗೊತ್ತಾಗಬೇಕೆಂದು ಈ ರೀತಿಯಾದ ಆಧಾರ ರಹಿತವಾದ ಆರೋಪಗಳನ್ನು ಮಾಡುತ್ತಿದ್ದಾರೆ. ಅವರು ನಿಜವಾಗಿಯೂ ಆರೋಪ ಮಾಡುವುದಾದರೆ ಅದಕ್ಕೆ ತಕ್ಕ ಸಾಕ್ಷಿಗಳನ್ನು ನೀಡಿ ಕಾಂಗ್ರೆಸ್ ಆರೋಪಿಸಲಿ," ಎಂದರು.
"ಇನ್ನು ಬಿಟ್ ಕಾಯಿನ್ ಆರೋಪದಡಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುತ್ತಾರೆ ಎಂಬ ಕಾಂಗ್ರೆಸ್ ಪಕ್ಷದವರ ಆರೋಪ ನಿರಾಧಾರವಾದದ್ದು, ಇದರಲ್ಲಿ ಮುಖ್ಯಮಂತ್ರಿಗಳ ಪಾತ್ರ ಏನು ಇಲ್ಲ, ಬೊಮ್ಮಾಯಿಯವರು ಉತ್ತಮವಾದ ಆಡಳಿತವನ್ನು ನೀಡುತ್ತಿದ್ದಾರೆ," ಎಂದು ತಿಳಿಸಿದರು.
"ಬಸವರಾಜ ಬೊಮ್ಮಾಯಿ ಅವರ ತಂದೆಯಿಂದ ರಾಜಕೀಯ ಕಲಿತಿರುವುದರಿಂದ ರಾಜ್ಯಕ್ಕೆ ಉತ್ತಮವಾದ ಆಡಳಿತ ನೀಡುತ್ತಾ ಬಂದಿದ್ದಾರೆ. ಜನತೆಯೂ ಸಹ ಅವರನ್ನು ಮೆಚ್ಚಿಕೊಂಡು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು. ಮುಂದಿನ ಚುನಾವಣೆಯಲ್ಲಿ ಬಿಜೆಪಿ 140 ಸ್ಥಾನವನ್ನು ಗಳಿಸುವುದರ ಮೂಲಕ ಅಧಿಕಾರವನ್ನು ಹಿಡಿಯುವುದರಲ್ಲಿ ಯಾವುದೇ ಆನುಮಾನ ಬೇಡ," ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಅಕ್ರಮ ಮರಳು, ಜೆಲ್ಲಿಕಲ್ಲು ಲಾರಿಗಳ ಓಡಾಟ
ಚಿತ್ರದುರ್ಗ ಜಿಲ್ಲೆಯಲ್ಲಿ ಅಕ್ರಮವಾಗಿ ಲಾರಿಗಳಲ್ಲಿ ಮರಳು, ಜೆಲ್ಲಿಕಲ್ಲನ್ನು ಓವರ್ ಲೋಡ್ ಆಗಿ ತುಂಬಿಕೊಂಡು ಬರಲಾಗುತ್ತಿದೆ. ಇದರಿಂದ ಗ್ರಾಮೀಣ ಹಾಗೂ ನಗರ ರಸ್ತೆಗಳು ಹಾಳಾಗುತ್ತಿವೆ ಎಂದು ಚಿತ್ರದುರ್ಗ ಹಿರಿಯ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಆರೋಪಿಸಿದ್ದಾರೆ.

ಚಿತ್ರದುರ್ಗ ಜಿಲ್ಲಾಡಳಿತ, ಪೋಲಿಸ್ ಇಲಾಖೆ, ಸಾರಿಗೆ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಲೋಕೋಪಯೋಗಿ ಇಲಾಖೆ, ಆರ್.ಡಿ.ಪಿ.ಆರ್ ಇಲಾಖೆಗಳು ಸಂಬಂಧಪಟ್ಟ ಈ ಐದೂ ಇಲಾಖೆ ಕಣ್ಣುಮುಚ್ಚಿ ಕುಳಿತಿವೆ ಎಂದು ಜಿಲ್ಲಾಡಳಿತದ ವಿರುದ್ಧ ಶಾಸಕರು ಆರೋಪಿಸಿದ ಅವರು, ಇದಕ್ಕೆ ಪೂರಕ ಎಂಬಂತೆ ಫೋಟೋ ದಾಖಲೆ ಬಿಡುಗಡೆ ಮಾಡಿದರು.
ಪಿ.ಎನ್.ಸಿ, ಆರ್.ಎನ್.ಸಿ ಕಂಪೆನಿಗಳಿಂದ ಅಕ್ರಮವಾಗಿ ಮರಳು, ಜಲ್ಲಿಕಲ್ಲನ್ನು ಓವರ್ ಲೋಡಿಂಗ್ ಮಾಡಿಕೊಂಡು ಓಡಾಟದಿಂದ ರಸ್ತೆಗಳು ಗುಂಡಿ ಬಿದ್ದು ಸಂಪೂರ್ಣ ಹಾಳಾಗಿ ಹೋಗಿದ್ದು, ಇದರಿಂದ ಅಪಘಾತಗಳು ಸಂಭವಿಸುತ್ತಿವೆ ಎಂದು ಅಧಿಕಾರಿಗಳ ವಿರುದ್ಧ ಕೆಂಡಕಾರಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ರಸ್ತೆ ಕಾಮಗಾರಿ ನಿರ್ಮಾಣಕ್ಕೆ ಹಣಕಾಸು ಕೊರತೆ ಇದೆ. ಆದರೆ ವಿಶೇಷ ಕಾಳಜಿ ವಹಿಸಿ ಸರ್ಕಾರದಿಂದ ಅನುದಾನ ತರಲಾಗಿದೆ. ಕೆಲ ರಸ್ತೆಗಳಿಗೆ ಪೂರ್ಣ ಬಿಲ್ ಪಾವತಿ ಆಗಿಲ್ಲ, ಆದರೆ ರಸ್ತೆ ನಿರ್ಮಾಣ ಆಗಿ ಎರಡ್ಮೂರು ತಿಂಗಳಲ್ಲೇ ರಸ್ತೆಗಳು ಹಾಳಾಗಿವೆ. ದೊಡ್ಡ ಗಾತ್ರದ ಟಿಪ್ಪರ್‌ಗಳಲ್ಲಿ ಓವರ್‌ಲೋಡ್ ಮರಳು, ಜೆಲ್ಲಿ, ಮಣ್ಣು ಸಾಗಾಟ ಮಾಡುವುದೇ ರಸ್ತೆ ಹಾಳಾಗಲು ಮುಖ್ಯ ಕಾರಣವಾಗಿದೆ ಅಧಿಕಾರಿಗಳು ಸೂಕ್ತ ತಪಾಸಣೆ ಮಾಡಿ ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಶಾಸಕರು ತಾಕೀತು ಮಾಡಿದರು.