BJP 7th list release: ಬಿಜೆಪಿ ಏಳನೇ ಪಟ್ಟಿ ಬಿಡುಗಡೆ: ಚಿತ್ರದುರ್ಗ ಟಿಕೆಟ್ ಗೋವಿಂದ ಕಾರಜೋಳಗೆ ಫೈನಲ್
ಚಿತ್ರದುರ್ಗ ಮಾರ್ಚ್ 27: ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಚಿತ್ರದುರ್ಗದಿಂದ ಸ್ಪರ್ಧಿಸುವುದು ಪಕ್ಕಾ ಆಗಿದೆ. ಅಲ್ಲದೆ ಟಿಕೆಟ್ ಆಕಾಂಕ್ಷಿಗಳಾಗಿದ್ದ ಹಾಲಿ ಕೇಂದ್ರ ಸಚಿವ ನಾರಾಯಣಸ್ವಾಮಿ ಹಾಗೂ ಮಾಜಿ ಸಂಸದ ಜನಾರ್ದನ ಸ್ವಾಮಿಗೆ ಟಿಕೆಟ್ ಮಿಸ್ ಆಗಿದೆ.
ಬಿಜೆಪಿ ತನ್ನ ಏಳನೇ ಪಟ್ಟಿ ಪ್ರಕಟಗೊಳಿಸಿದ್ದು ಇದರಲ್ಲಿ ಗೋವಿಂದ ಕಾರಜೋಳ ಚಿತ್ರದುರ್ಗದಿಂದ ಸ್ಪರ್ಧಿಸುವುದು ಖಚಿತವಾಗಿದೆ. ಬಿಎಸ್ ಯಡಿಯೂರಪ್ಪ ಆಪ್ತ ಮಾಜಿ ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ ಅವರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕಂಗಟ್ಟಾಗಿ ಪರಿಣಿಸಿದ್ದ ಕ್ಷೇತ್ರಕ್ಕೆ ಕೊನೆಗೂ ಅಭ್ಯರ್ಥಿ ಆಯ್ಕೆ ಸಿಕ್ಕಿದೆ. ರಾಜ್ಯ ಮಾಜಿ ಸಚಿವ ಗೋವಿಂದ ಕಾರಜೋಳ ಅವರಿಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಟಿಕೆಟ್ ಘೋಷಿಸಲಾಗಿದೆ.
ರಾಜ್ಯದ 27 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಯ ಘೋಷಣೆ ಮಾಡಿದ್ದರು. ಆದರೆ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆಯಲ್ಲಿ ಪರ ವಿರೋಧ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಹೈಕಮಾಂಡ್ ಗೆ ತಲೆ ನೋವಾಗಿ ಪರಿಣಮಿಸಿತ್ತು. ಈ ಎಲ್ಲದರ ಮಧ್ಯೆ ಬುಧವಾರ ಸಂಜೆ ಹೈಕಮಾಂಡ್ ಗೋವಿಂದ ಕಾರಜೋಳ ಅವರಿಗೆ ಮಣೆ ಹಾಕಿದೆ. ಮಾರ್ಚ್ 28ರಂದು ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ.
ಕ್ಷೇತ್ರದಲ್ಲಿ ನಾರಾಯಣಸ್ವಾಮಿ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಅವರಿಗೆ ಆಡಳಿತ ವಿರೋಧಿ ಅಲೆ ತೀವ್ರವಾಗಿತ್ತು. ಕ್ಷೇತ್ರದಲ್ಲಿ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಮಲ ಪಾಳಯ ಯೋಜಿಸಿತ್ತು. ಈ ಸಂಬಂಧ ಮಾದಾರ ಚನ್ನಯ್ಯ ಸ್ವಾಮೀಜಿ ಅವರನ್ನು ಸಂಪರ್ಕಿಸಿತ್ತು. ಆದರೆ ಅವರು ಚುನಾವಣಾ ರಾಜಕಾರಣಕ್ಕೆ ಬರಲು ನಿರಾಕರಿಸಿದ್ದರು. ಹೀಗಾಗಿ ಅಳೆದು ತೂಗಿ ಬಿಜೆಪಿ ಗೋವಿಂದ ಕಾರಜೋಳಗೆ ಟಿಕೆಟ್ ನೀಡಿದೆ.
ಬಾಗಲಕೋಟೆ ಜಿಲ್ಲೆಯವರಾದ ಕಾರಜೋಳ, ಪರಿಶಿಷ್ಟ ಜಾತಿಯ ಎಡಗೈ ಪಂಗಡಕ್ಕೆ ಸೇಇದವರು. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಸೋತಿದ್ದರು. ಬಿಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಅವರು ಉಪಮುಖ್ಯಮಂತ್ರಿಯಾಗಿದ್ದರು. ಇತ್ತ ಚಿತ್ರದುರ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಂಸದ ಬಿಎನ್ ಚಂದ್ರಪ್ಪ ಅವರು ಕಣಕ್ಕೆ ಇಳಿದಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಡಲಿದೆ.












Click it and Unblock the Notifications