ಅಪರಿಚಿತ ವಾಹನ ಬೈಕ್‌ಗೆ ಡಿಕ್ಕಿ: ಬೆಸ್ಕಾಂ ಸಿಬ್ಬಂದಿ ದಾರುಣ ಸಾವು
ಚಿತ್ರದುರ್ಗ ನವೆಂಬರ್ 6: ಅಪರಿಚಿತ ವಾಹನ ಬೈಕ್‌ಗೆ ಡಿಕ್ಕಿಯಾದ ಸ್ಥಳದಲ್ಲೇ ಬೆಸ್ಕಾಂ ನೌಕರರಿಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಹಿರಿಯೂರು ತಾಲೂಕಿನ ಹರ್ತಿಕೋಟೆ ಸಮೀಪ ಭಾನುವಾರ ಸಂಭವಿಸಿದ ಅಪಘಾತದಲ್ಲಿ ಬೆಸ್ಕಾಂನ ನೌಕರರಿಬ್ಬರು ಮೃತಪಟ್ಟಿದ್ದಾರೆ.
ಬೈಕ್ ಅಪಘಾತದಲ್ಲಿ ಮೃತ ಬೆಸ್ಕಾಂನ ನೌಕರರನ್ನು ಚಿತ್ರದುರ್ಗ ತಾಲೂಕಿನ ಬಹದ್ದೂರ್ ಘಟ್ಟ ಗ್ರಾಮದ ಪ್ರದೀಪ್ ಕುಮಾರ್ (38) ಹಾಗೂ ಮೊಳಕಾಲ್ಮೂರು ತಾಲೂಕಿನ ಕರಿಬಸಪ್ಪ (25) ಎಂದು ಗುರುತಿಸಲಾಗಿದೆ. ಮೃತರು ಮೊಳಕಾಲ್ಮೂರು ತಾಲೂಕಿನ ಬಿ.ಜಿ.ಕೆರೆ ಬೆಸ್ಕಾಂ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಪ್ರದೀಪ್ ಕುಮಾರ್ ಹಾಗೂ ಕರಿಬಸಪ್ಪ ಇಬ್ಬರು ಬೆಂಗಳೂರಿನಿಂದ ಮೊಳಕಾಲ್ಮೂರು ತಾಲೂಕಿನ ಬಿ.ಜಿ.ಕೆರೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಹಿರಿಯೂರು ಹರ್ತಿಕೋಟೆ ಸಮೀಪದ ಬೀದರ್‌ನಿಂದ ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿ ವೇಗವಾಗಿ ಬಂದ ಅಪರಿಚಿತ ವಾಹನವೊಂದು ಬೈಕ್‌ಗೆ ಡಿಕ್ಕಿಯಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆ ಅಪರಿಚಿತ ವಾಹನ ಚಾಲಕ ಘಟನಾ ಸ್ಥಳದಿಂದ ವಾಹನ ಸಮೇತ ಪರಾರಿಯಾಗಿದ್ದಾನೆ. ಅಪಘಾತದ ರಭಸಕ್ಕೆ ಪ್ರದೀಪ್ ಕುಮಾರ್ ಹಾಗೂ ಕರಿಬಸಪ್ಪ ಅಪಘಾತ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇನ್ನು ಘಟನೆಯಲ್ಲಿ ಬೈಕ್ ಸಂಪೂರ್ಣ ನುಜ್ಜುಗುಜ್ಜಾಗಿದೆ.

ಬೈಕ್ ಅಪಘಾತದ ವಿಚಾರವನ್ನು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಐಮಂಗಲ ಪೋಲಿಸರು ದೌಡಾಯಿಸಿದ್ದಾರೆ. ಅಪಘಾತ ಸ್ಥಳವನ್ನು ಪರಿಶೀಲನೆ ನಡೆಸಿದ ಪೊಲೀಸರು ಮೃತದೇಹಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ಅಪಘಾತ ಸಂಬಂಧ ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಮೃತ ಪ್ರದೀಪ್ ಕುಮಾರ್ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದು, ನಾಲ್ಕು ತಿಂಗಳ ಮಗು ಇದೆ ಎಂದು ಐಮಂಗಲ ಠಾಣೆಯ ಪೊಲೀಸರು ತಿಳಿಸಿದ್ದಾರೆ.












Click it and Unblock the Notifications