ಅಕ್ರಮ ವಿದ್ಯುತ್ ಲೈನ್ ಕಡಿತಗೊಳಿಸಿದ್ದಕ್ಕೆ ಲೈನ್ ಮ್ಯಾನ್ ಮೇಲೆ ಹಲ್ಲೆ
ಚಿತ್ರದುರ್ಗ, ನವೆಂಬರ್ 27: ಪಂಪ್ ಸೆಟ್ ಗೆ ನಿರಂತರ ಜ್ಯೋತಿ ಸಂಪರ್ಕದಿಂದ ಅಕ್ರಮವಾಗಿ ವಿದ್ಯುತ್ ಪಡೆದುಕೊಂಡಿದ್ದ ವೈರನ್ನು ಕಡಿತಗೊಳಿಸಿದ ಲೈನ್ ಮನ್ ಮೇಲೆ ಹಲ್ಲೆ ನಡೆಸಿ, ಆತನಿಗೆ ಜೀವಬೆದರಿಕೆ ಹಾಕಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಬಳಿ ಇರುವ ಶಿವರಾಜ್, ನಿತಿನ್ ಹಾಗೂ ಚೇತನ ಎಂಬ ಮೂವರು ತಮ್ಮ ಜಮೀನಿನ ಪಂಪ್ ಸೆಟ್ ಗೆ ನಿರಂತರ ಜ್ಯೋತಿ ಸಂರ್ಪಕದಿಂದ ಅಕ್ರಮವಾಗಿ ವೈರ್ ಎಳೆದುಕೊಂಡು ವಿದ್ಯುತ್ ಸಂಪರ್ಕವನ್ನು ಪಡೆದುಕೊಂಡಿದ್ದರು. ಈ ವಿಷಯ ಲೈನ್ ಮನ್ ಕೇಶವ ಎನ್ನುವವರ ಗಮನಕ್ಕೆ ಬಂದಿತ್ತು. ನಂತರ ಈ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಅಕ್ರಮವಾಗಿ ಸಂಪರ್ಕ ಪಡೆದಿರುವ ಕೇಬಲ್ ಕಟ್ ಮಾಡಿಕೊಂಡು ಬರಲು ಅಧಿಕಾರಿಗಳು ಆದೇಶಿಸಿದ್ದಾರೆ. ಅದರಂತೆ ಕೇಶವ ಹೋಗಿ ವಿದ್ಯುತ್ ಲೈನ್ ಕಡಿತಗೊಳಿಸಿ ಬಂದಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಕೋಪಗೊಂಡು ರಸ್ತೆಯಲ್ಲಿಯೇ ಶಿವರಾಜ್, ಚೇತನ್ ಹಾಗೂ ನಿತಿನ್ ಕೇಶವನ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ. ಕೊಲೆ ಮಾಡುವುದಾಗಿ ಬೆದರಿಕೆಯನ್ನೂ ಹಾಕಿದ್ದಾರೆ.
ಹಲ್ಲೆಗೊಳಗಾದ ನೌಕರರಾದ ಕೇಶವ ಹಾಗೂ ಪುಟ್ಟಪ್ಪ ಐಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.












Click it and Unblock the Notifications