ಅಬಕಾರಿ ಅಧಿಕಾರಿಗಳಿಗೆ ಸೆಡ್ಡು ಹೊಡೆದ ರೆಬಲ್ ಲೇಡಿ ಗ್ಯಾಂಗ್.! ಅಕ್ರಮ ಮದ್ಯ ಮಾರಾಟಗಾರರು ಕೊನೆಗೂ ಲಾಕ್
ಹಿರಿಯೂರು, ಆಗಸ್ಟ್, 04: ನಗರದ ಬಾರ್‌ವೊಂದರಿಂದ ಅಕ್ರಮವಾಗಿ ಬೆಳ್ಳಂಬೆಳಗ್ಗೆಯೇ ಚೀಲದಲ್ಲಿ ಈ ಗ್ರಾಮಕ್ಕೆ ಮಧ್ಯ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬೈಕ್ ಸಮೇತ ಮಹಿಳೆಯರೇ ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಹಿರಿಯೂರು ತಾಲ್ಲೂಕಿನ ಕೂನಿಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುವುದನ್ನು ನಿಲ್ಲಿಸುವಂತೆ ಆಗ್ರಹಿಸಿ ಸಂಬಂಧ ಪಟ್ಟ ಅಬಕಾರಿ ಇಲಾಖೆಗೆ ಗ್ರಾಮಸ್ಥರು ಹಾಗೂ ಮಹಿಳೆಯರು ಮನವಿ ಮಾಡಿದ್ದರು. ಆದರೆ, ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ತಡೆಯುವುದರಲ್ಲಿ ಅಧಿಕಾರಿಗಳು ವಿಫಲರಾಗಿದ್ದರು. ಇದರಿಂದ ಬೇಸತ್ತಿದ್ದ ಗ್ರಾಮದ ಮಹಿಳೆಯರು ಇಂದು ಕಾದು ಕುಳಿತುಕೊಂಡು ಆ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ತಾಲೂಕಿನ ಹಳ್ಳಿಗಳು ಅಕ್ರಮ ಮದ್ಯದ ಅಡ್ಡೆಗಳಾಗಿವೆ. ಬಾರ್‌ಗಳಿಂದ ನಿರಂತರವಾಗಿ ಹಳ್ಳಿಗಳಿಗೆ ಅಕ್ರಮ ಮದ್ಯ ಸರಬರಾಜು ಆಗುತ್ತಿತ್ತು. ಭಾನುವಾರವೂ ಸಹ ತಾಲೂಕಿನ ಕೂನಿಕೆರೆಯ ಮಹಿಳೆಯರು ಬೆಳ್ಳಂಬೆಳಗ್ಗೆಯೇ ಅಕ್ರಮ ಮದ್ಯ ಸಾಗಿಸುವ ಬೈಕ್ ಸವಾರನನ್ನು ಹಿಡಿದು ಮಾಲಿನ ಸಮೇತ ಹಿಡಿದಿದ್ದಾರೆ. ದುರಂತ ಎಂದರೆ ಈ ಕೆಲಸ ಮಾಡಬೇಕಾದ ಅಬಕಾರಿ ಅಧಿಕಾರಿಗಳೇ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಗ್ರಾಮದಲ್ಲಿ ಕೂಲಿ ನಾಲಿ ಕೆಲಸ ಮಾಡಿಕೊಂಡಿರುವ ಮಹಿಳೆಯರು ತನ್ನೆಲ್ಲ ಕೆಲಸವನ್ನು ಬದಿಗಿಟ್ಟು ವಾರದ ಹಿಂದೆ ಅಬಕಾರಿ ಇಲಾಖೆಗೆ ಎರಡು ದಿನ, ಪೊಲೀಸ್ ಇಲಾಖೆಗೆ ಒಮ್ಮೆ, ತಹಶೀಲ್ದಾರ್ ಕಚೇರಿಗೆ ಒಮ್ಮೆ ಭೇಟಿ ನೀಡಿ ಮನವಿ ನೀಡಿದ್ದರು. ಕೊನೆಗೆ ಅಬಕಾರಿಯವರು ನೀವೇ ಹಿಡಿದು ಕರೆ ಮಾಡಿ ಎಂಬ ಉಡಾಫೆ ಉತ್ತರಕ್ಕೆ ಬೇಸತ್ತ ಗ್ರಾಮದ ಮಹಿಳೆಯರು ಭಾನುವಾರ ಅಕ್ರಮ ಮದ್ಯ ಸರಬರಾಜುದಾರನನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಳ್ಳಿಯ ಮಹಿಳೆಯರಿಗೆ ಸಿಗುವ ಅಕ್ರಮ ಮದ್ಯ ಮಾರಾಟಗಾರರು, ಸರಬರಾಜುದಾರರು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಯಾಕೆ ಸಿಗುವುದಿಲ್ಲ ಎಂಬುದೇನು ಯಕ್ಷಪ್ರಶ್ನೆಯಲ್ಲ. ಹಳ್ಳಿಗಳಿಗೆ ಅಕ್ರಮವಾಗಿ ಬಾರ್‌ಗಳಿಂದ ಮದ್ಯ ಸರಬರಾಜು ಮಾಡುವ ಟೀಂ ಇದೆ ಎಂಬ ಸತ್ಯವೂ ಸಹ ಹಳೆಯದು. ಆದರೆ ಅಬಕಾರಿ ಇಲಾಖೆ ಅಧಿಕಾರಿಗಳು ಅಸಡ್ಡೆ ತೋರಿದ್ದರು.
ವಾರದ ಹಿಂದೆ ಇದೇ ಅಬಕಾರಿ ಇಲಾಖೆ ಮುಂಭಾಗ ಕೂನಿಕೆರೆ ಗ್ರಾಮದ ಮಹಿಳೆಯರು ಎರಡನೇ ಬಾರಿ ಬಂದು ಕುಳಿತು ನಿಮ್ಮ ಕೈಲಿ ಗ್ರಾಮದ ಅಕ್ರಮ ಮದ್ಯ ನಿಲ್ಲಿಸುವುದು ಆಗುತ್ತದೋ ಇಲ್ಲವೋ ಹೇಳಿ ಎಂದು ಕುಳಿತಾಗ ಒಂದೆರಡು ದಿನ ಸಮಯ ಕೊಡಿ ಎಂದಿದ್ದರಂತೆ.
ನಂತರ ಒಂದೆರಡು ಬಾರಿ ಹಳ್ಳಿಗೆ ಭೇಟಿ ನೀಡಿದ್ದಾರೆ. ಆದರೆ ಅಕ್ರಮ ಮದ್ಯ ಮಾರುವವರು ಬುದ್ದಿವಂತರಾಗಿದ್ದಾರೆ. ಕೇಸು ಜಡಿಯುವಷ್ಟು ಪ್ರಮಾಣದ ಮದ್ಯವನ್ನು ಅವರೆಂದೂ ಮಾರುವ ಜಾಗದಲ್ಲಿ ಸಂಗ್ರಹಿಸುವುದಿಲ್ಲ. 3-4 ಪೌಚ್, ಬಾಟಲ್ ತಂದು ಮಾರುವುದು, ಮತ್ತೆ ತರುವುದನ್ನು ಅವರು ಕಲಿತಿದ್ದಾರೆ.
ದಾಳಿ ನಡೆದು ಅಕ್ರಮ ಮದ್ಯ ಸಿಕ್ಕರೂ ಸಹ ಅದು ಕೇಸು ದಾಖಲಿಸುವಷ್ಟು ಪ್ರಮಾಣದಲ್ಲಿ ಸಿಗುವುದಿಲ್ಲ. ಹಾಗಾಗಿ ತಾಲ್ಲೂಕಿನ ಹಳ್ಳಿಗಳ ಅಕ್ರಮ ಮದ್ಯ ಮಾರಾಟಗಾರರಿಗೆ ಯಾವ ಭಯವೂ ಇಲ್ಲದಂತಾಗಿ ಹಳ್ಳಿಗಳೆಲ್ಲಾ ಅನಾರೋಗ್ಯದ, ಅಶಾಂತಿಯ ಅಡ್ಡೆಗಳಾಗುತ್ತಿವೆ. ಪೊಲೀಸರು ತಮ್ಮ ಕೆಲಸವಲ್ಲದಿದ್ದರೂ ಸಹ ಕೆಲವೊಮ್ಮೆ ಗ್ರಾಮಸ್ಥರ ಮನವಿ ಮೇರೆಗೆ ದಾಳಿ ಮಾಡುತ್ತಿರುವುದು ಬಿಟ್ಟರೆ ಅಬಕಾರಿ ಇಲಾಖೆಯ ಕಾರ್ಯವೈಖರಿ ಬಗ್ಗೆಯೇ ಅನುಮಾನಗಳೇಳುತ್ತಿವೆ.
ಇತ್ತೀಚಿಗೆ ಹಳ್ಳಿಗಳ ಭಾಗಕ್ಕೆ ಅಕ್ರಮ ಮದ್ಯ ಸಾಗಿಸುವುದನ್ನೇ ಕಾಯಕ ಮಾಡಿಕೊಂಡಿರುವ ಕೆಲವರು ಕುಗ್ರಾಮಗಳಿಗೂ ಮದ್ಯ ಮುಟ್ಟಿಸುತ್ತಿದ್ದಾರೆ. ಸಾರ್ವಜನಿಕರ ದೂರುಗಳು ದೂರುಗಳಾಗಿ ಉಳಿಯುತ್ತಿವೆಯೇ ಹೊರತು ಪರಿಹಾರ ಕಾಣುತ್ತಿಲ್ಲ. ಮಹಿಳೆಯರ ಕಣ್ಣೀರ ಕಥೆಯತ್ತ ಈಗಲಾದರೂ ಜಿಲ್ಲಾ ಉಸ್ತುವಾರಿ ಸಚಿವರು ಗಮನ ಹರಿಸಬೇಕಿದೆ.












Click it and Unblock the Notifications