Breaking:ಗಣ್ಯರ ಜೊತೆಗಿದ್ದ ಮುರುಘಾ ಶರಣರ 47 ಫೋಟೋ ಕಳವು!
ಚಿತ್ರದುರ್ಗ, ಅಕ್ಟೋಬರ್ 8 : ಮುರುಘಾ ಮಠದ ರಾಜಾಂಗಣದಲ್ಲಿದ್ದ ಗಣ್ಯರೊಂದಿಗೆ ತೆಗೆಸಿಕೊಂಡಿದ್ದ ಮುರುಘಾ ಶರಣರಿದ್ದ 47 ಪೋಟೋಗಳು ರಾತ್ರೋ ರಾತ್ರಿ ಕಳವಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸವಶ್ರೀ ಪ್ರಶಸ್ತಿ ಪ್ರದಾನ, ಮುರುಘಾ ಶ್ರೀ ಪ್ರಶಸ್ತಿ ಪ್ರದಾನದ ವೇಳೆ ಹಾಗೂ ಜಿಎಚ್ ಪಟೇಲ್, ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಅಮಿತ್ ಶಾ ಅಣ್ಣಾ ಹಜಾರೆ, ದಲಾಯಿಲಾಮ, ಮೇಧಾಪಾಟ್ಕರ್, ಸ್ವಾಮಿ ಅಗ್ನಿವೇಶ್, ಪಿಟಿ ಉಷಾ , ನಾರಾಯಣಮೂರ್ತಿ, ದೇವೇಗೌಡರು ಸೇರಿದಂತೆ ಗಣ್ಯರು ಮಠಕ್ಕೆ ಭೇಟಿ ನೀಡಿದ್ದ ವೇಳೆ ತೆಗೆಸಿಕೊಂಡಿದ್ದ ಫೋಟೋಗಳು ಅಕ್ಟೋಬರ್ 5 ರಂದು ಕಳುವಾಗಿವೆ ಎಂದು ಮಠದ ನೂತನ ಕಾರ್ಯದರ್ಶಿ ಎಸ್‌ಬಿ ವಸ್ತ್ರಮಠ ಪೊಲೀಸರಿಗೆ ದೂರು ನೀಡಿದ್ದಾರೆ.
ಶರಣ ಸಂಸ್ಕೃತಿ ಉತ್ಸವ ಅಂಗವಾಗಿ ಗುರುವಾರ ಶೂನ್ಯ ಪೀಠಾರೋಹಣ ಹಾಗೂ ಬಸವಣ್ಣ, ಅಲ್ಲಮಪ್ರಭು ದೇವರ ಭಾವಚಿತ್ರಗಳ ಮೆರವಣಿಗೆ ವೇಳೆ ಈ 47 ಫೊಟೋಗಳು ಇಲ್ಲದಿರುವುದು ಬೆಳಕಿಗೆ ಬಂದಿದೆ.

ಇಬ್ಬರು ವ್ಯಕ್ತಿಗಳು ಮಧ್ಯ ರಾತ್ರಿ ವೇಳೆ ಫೋಟೋಗಳನ್ನು ಕದ್ದೊಯ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಾಹನವೊಂದರಲ್ಲಿ ಫೋಟೋಗಳನ್ನು ಎತ್ತೊಯ್ಯುತ್ತಿರುವ ದೃಶ್ಯಾವಳಿಗಳು ಸೆರೆಯಾಗಿದೆ. ಇವರಿಬ್ಬರು ಯಾವ ಕಾರಣಕ್ಕೆ ಪೋಟೋಗಳನ್ನು ಕಳ್ಳತನ ಮಾಡಿದ್ದಾರೆ ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ.
ಅಕ್ಟೋಬರ್ 5 ರಂದು ಮಠದ ರಾಜಾಂಗಣದಲ್ಲಿದ್ದ ಫೋಟೋಗಳು ಕಳುವಾಗಿರುವ ಕುರಿತು ಮುರುಘಾ ಮಠದ ವಿದ್ಯಾಪೀಠದ ಕಾರ್ಯದರ್ಶಿ ವಸ್ತ್ರಮಠ ದೂರು ನೀಡಿದ್ದು, ದೂರು ಪರಿಶೀಲಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ಎಸ್‌ಪಿ ಪರುಶುರಾಮ್ ತಿಳಿಸಿದ್ದಾರೆ.












Click it and Unblock the Notifications