ಮುರುಘಾ ಮಠದಲ್ಲಿ 47 ಫೋಟೋ ಕಳ್ಳತನ ಕೇಸ್: ಪೊಲೀಸರ ವಶಕ್ಕೆ ಮಾಜಿ ಶಾಸಕ ಬಸವರಾಜನ್
ಚಿತ್ರದುರ್ಗ ನವೆಂಬರ್10 : ಮಠದ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಮುರುಘಾ ಶರಣರು ಹಾಗೂ ಇನ್ನಿತರ ಆರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮಠದಲ್ಲಿ ನಡೆದ ಅನೇಕ ಅಪರಾಧ ಪ್ರಕರಣಗಳು ಒಂದೊಂದಾಗಿಯೇ ಹೊರ ಬೀಳುತ್ತಿದೆ.
ಚಿತ್ರದುರ್ಗ ನಗರದ ಹೊರವಲಯದಲ್ಲಿರುವ ಮುರುಘಾ ಮಠದಲ್ಲಿ 47 ಫೋಟೋ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಎಸ್.ಕೆ.ಬಸವರಾಜನ್ ವಿರುದ್ಧ ಮುರುಘಾ ಮಠದಲ್ಲಿದ್ದ 47 ಫೋಟೋಗಳನ್ನು ಕಳ್ಳತನ ಮಾಡಲು ಪ್ರಚೋದನೆ ನೀಡಿದ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಎಸ್.ಕೆ.ಬಸವರಾಜನ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿ ಶ್ರೀನಿವಾಸ್‌ನನ್ನೂ ಕೂಡ ಪೊಲೀಸರು ವಶಕ್ಕೆ ಪಡೆದಿದ್ದು, ಅಜ್ಞಾತ ಸ್ಥಳದಲ್ಲಿ ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಹಾಗೂ ಶ್ರೀನಿವಾಸ್‌ನನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇನ್ನು ಪ್ರಕರಣ ಸಂಬಂಧ ಬಸವರಾಜನ್ ಪತ್ನಿ ಸೌಭಾಗ್ಯ ಅವರನ್ನು ವಶಕ್ಕೆ ಪಡೆಯಲು ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ ಎನ್ನಲಾಗಿದೆ.
ಮಠದಲ್ಲಿದ್ದ 47 ಫೋಟೋಗಳನ್ನು ಕಳ್ಳತನ ಪ್ರಕರಣದ ಬಂಧಿತ ಆರೋಪಿಗಳು ಬಸವರಾಜನ್ ಹೆಸರು ಬಾಯ್ಬಿಟ್ಟಿದ್ದು, ಈ ಕಾರಣದಿಂದಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಬುಧವಾರ ಬಸವರಾಜನ್ ಅವರ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.
ಫೋಟೋಗಳನ್ನು ಕಳ್ಳತನ ಪ್ರಕರಣ ಸಂಬಂಧ ನವೆಂಬರ್ 7 ರಂದು ಹೊಸಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಮೋಹನ ಮೂರ್ತಿ ಅಲಿಯಾಸ್ ಸ್ವಾಮಿ ಹಾಗೂ ಎಸ್.ಜೆ.ಎಂ. ಕಾಲೇಜು ಉಪನ್ಯಾಸಕ ಶಿವಾನಂದ ಸ್ವಾಮಿ ಎನ್ನುವಾತನನ್ನು ಬಂಧಿಸಲಾಗಿತ್ತು. ಬಂಧಿತ ಆರೋಪಿಗಳ ವಿಚಾರಣೆ ವೇಳೆ ಬಹಿರಂಗಗೊಂಡ ಮಾಹಿತಿಯಿಂದ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಎನ್ನುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.












Click it and Unblock the Notifications