ಚಿತ್ರದುರ್ಗದ ಶಾಲಾ- ಕಾಲೇಜಿನ ವಿದ್ಯಾರ್ಥಿಗಳಿಗೆ ಅಂಟಿದ ಕೊರೊನಾ!
ಚಿತ್ರದುರ್ಗ, ಜನವರಿ 12: ಚಿತ್ರದುರ್ಗ ಜಿಲ್ಲೆಯಲ್ಲಿ ದಿನ ಕಳೆದಂತೆ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು, ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೂ ಮಹಾಮಾರಿ ಕೊರೊನಾ ತಗುಲಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ 15 ವಿದ್ಯಾರ್ಥಿಗಳಿಗೆ ಕೋವಿಡ್- 19 ದೃಢಪಟ್ಟಿದ್ದು, ಪೋಷಕರಲ್ಲಿ ಆತಂಕ ಹೆಚ್ಚಿಸಿದೆ. ಜಿಲ್ಲೆಯಲ್ಲಿ ಈಗಾಗಲೇ 149 ಸಕ್ರಿಯ ಪ್ರಕರಣಗಳು ದಾಖಲಾಗಿದ್ದು, ಚಿತ್ರದುರ್ಗ ಮೊದಲ ಸ್ಥಾನದಲ್ಲಿದ್ದರೆ, ಹಿರಿಯೂರು ಎರಡನೇ ಸ್ಥಾನದಲ್ಲಿದೆ.
ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಶಾಲೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಚಿತ್ರದುರ್ಗ ನಗರದ ಸೆಂಟ್ ಮೇರಿಸ್ ಶಾಲೆಯಲ್ಲಿ 5 ವಿದ್ಯಾರ್ಥಿಗಳು ಹಾಗೂ ಹಿರಿಯೂರಿನ ಬಸವೇಶ್ವರ ನರ್ಸಿಂಗ್ ಕಾಲೇಜಿನಲ್ಲಿ ಕೇರಳ ಮೂಲದ 6 ನರ್ಸಿಂಗ್ ವಿದ್ಯಾರ್ಥಿಗಳಿಗೆ ಮತ್ತು ಡಾನ್ ಬಾಸ್ಕೋ ಶಾಲೆಯ ವಿದ್ಯಾರ್ಥಿಗೆ ಸೋಂಕು ದೃಢಪಟ್ಟಿದೆ.

ಈಗಾಗಲೇ ಜಿಲ್ಲೆಯಲ್ಲಿ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನಾವು ಮುಂದಾಗಿದ್ದು, ಜಿಲ್ಲೆಯ 15 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ. ಶಾಲೆಯ ಒಂದು ಮಗು ಹಾಗೂ ಮೂರು ಕಾಲೇಜುಗಳ 18 ವರ್ಷದ ಮೇಲ್ಪಟ್ಟ 14 ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ಇದೇ ವೇಳೆ 211 ವಿದ್ಯಾರ್ಥಿಗಳ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು, ಸರ್ಕಾರದ ಮಾರ್ಗಸೂಚಿಯಂತೆ ನಾವು ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಂಗನಾಥ್ ಮಾಹಿತಿ ನೀಡಿದ್ದಾರೆ.
ಒಂದು ವಾರ ರಜೆ
ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಶಾಲಾ- ಕಾಲೇಜುಗಳಿಗೆ ಒಂದು ವಾರ ರಜೆ ಘೋಷಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಳವಾಗುತ್ತಿದ್ದು, ಪೋಷಕರಲ್ಲಿ ಭಯದ ಆತಂಕ ಮೂಡಿಸಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

47 ಮಂದಿಗೆ ಸೋಂಕು
ಮಂಗಳವಾರ ಒಂದೇ ದಿನ ಚಿತ್ರದುರ್ಗದಲ್ಲಿ 47 ಜನರಿಗೆ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಚಿತ್ರದುರ್ಗ 34, ಚಳ್ಳಕೆರೆ 1, ಹಿರಿಯೂರು 5, ಮೊಳಕಾಲ್ಮೂರು 3, ಹೊಸದುರ್ಗ 1, ಹೊಳಲ್ಕೆರೆ 3, ಪ್ರಕರಣಗಳು ದಾಖಲಾಗಿವೆ. ಇನ್ನು ಜಿಲ್ಲೆಯಲ್ಲಿ ಇದುವರೆಗೂ ಒಟ್ಟು ಸೋಂಕಿತರ ಸಂಖ್ಯೆ 36921ಕ್ಕೆ ಏರಿಕೆ ಕಂಡಿದೆ.
ಇದರಲ್ಲಿ 36,560 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದು, 149 ಮಂದಿ ಸಕ್ರಿಯ ಪ್ರಕರಣಗಳಿವೆ. ಕೆಲವರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡರೆ, ಇನ್ನು ಕೆಲವರು ಹೋಂ ಐಸೋಲೆಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಕೊರೊನಾದಿಂದ 212 ಜನ ಮೃತಪಟ್ಟಿದ್ದಾರೆ.
80 ಆಕ್ಸಿಜನ್ ಬೆಡ್ ವ್ಯವಸ್ಥೆ
ಹಿರಿಯೂರು ತಾಲ್ಲೂಕಿನ ಮೂರು ಕಡೆಗಳಲ್ಲಿ ಕೋವಿಡ್ ಆಸ್ಪತ್ರೆ ತೆರೆದಿದ್ದು, 80 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಧರ್ಮಪುರ ಕೋವಿಡ್ ಆಸ್ಪತ್ರೆ 20, ಮರಡಿಹಳ್ಳಿ ಕೋವಿಡ್ ಆಸ್ಪತ್ರೆ 25, ಹಿರಿಯೂರು ನಗರ ಕೋವಿಡ್ ಆಸ್ಪತ್ರೆಯಲ್ಲಿ 35 ಆಕ್ಸಿಜನ್ ಬೆಡ್ ವ್ಯವಸ್ಥೆ ಸಿದ್ದಗೊಂಡಿದೆ. ಉಳಿದಂತೆ 500 ನಾರ್ಮಲ್ ಬೆಡ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ತಾಲೂಕಿನ 27 ಮಂದಿ ಹೋಂ ಐಸೋಲೆಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಾಲೂಕು ಆರೋಗ್ಯ ಆಡಳಿತ ಮಾಹಿತಿ ನೀಡಿದೆ.
Recommended Video
ಮಾಸ್ಕ್ ಹಾಕಿದವರಿಗೆ ದಂಡ
ಚಿತ್ರದುರ್ಗ ಜಿಲ್ಲೆಯಲ್ಲಿ ಕೋವಿಡ್ ಮೂರನೇ ಅಲೆ ಆರ್ಭಟ ಜೋರಾಗಿದ್ದು, ಮಾಸ್ಕ್ ಧರಿಸಿ ಸಂಚರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಸೂಚಿಸಿದ್ದಾರೆ. ಆದರೆ ಕೆಲವರು ನಾವು ವ್ಯಾಕ್ಸಿನ್ ಹಾಕಿಸಿಕೊಂಡಿದ್ದೇವೆ, ನಮಗೆ ಏನು ಆಗುವುದಿಲ್ಲ ಎಂಬಂತೆ ಮಾಸ್ಕ್ ಹಾಕದೆ ಸಂಚರಿಸುತ್ತಿದ್ದವರಿಗೆ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಸಾರ್ವಜನಿಕರು ಮಾಸ್ಕ್ ದಂಡ ಕಟ್ಟಲು ಪೊಲೀಸರ ಜೊತೆ ಕಿರಿಕಿರಿ ಉಂಟು ಮಾಡುವ ಪ್ರಸಂಗ ಕೂಡ ನಡೆದಿದೆ.












Click it and Unblock the Notifications