ಕಾಫಿನಾಡಿನಲ್ಲಿ ಯೋಗಿ ಆದಿತ್ಯನಾಥ್ ಮತ ಬೇಟೆ: ಕನ್ನಡದಲ್ಲೇ ಭಾಷಣ ಆರಂಭಿಸಿದ ಯುಪಿ ಸಿಎಂ
ಚಿಕ್ಕಮಗಳೂರು, ಮೇ 06: ಕರ್ನಾಟಕ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ಚಿಕ್ಕಮಗಳೂರಿಗೆ ಆಗಮಿಸಿದ್ದು, ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಆರಂಭಿಸಿದ್ದಾರೆ. ಕೊಪ್ಪ ಪಟ್ಟಣದ ಲಾಲ್ ಬಹಾದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಹಿರಂಗ ಸಭೆಯಲ್ಲಿ ಯೋಗಿ ಆದಿತ್ಯನಾಥ್ ಶೃಂಗೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್ ಪರ ಮತಯಾಚನೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ 10,000ಕ್ಕೂ ಅಧಿಕ ಕಾರ್ಯಕರ್ತರು ಭಾಗಿಯಾಗಿದ್ದಾರೆ.
ಬಿಜೆಪಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಮೊದಲಿಗೆ ಶಾರದಾ ದೇವಿ, ಶಂಕರಾಚಾರ್ಯರಿಗೆ ನಮಸ್ಕರಿಸಿದ್ದಾರೆ. ಶಾರದಾಂಬೆ ನೆಲಕ್ಕೆ ಆಗಮಿಸಿದ್ದೇನೆ. ಎಲ್ಲರಿಗೂ ನಮಸ್ಕಾರ. ತುಂಗಾ ನದಿ ತೀರದ ಜನರಿಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ್ದಾರೆ.

ನಾನು ಶ್ರೀರಾಮನ ಜನ್ಮಭೂಮಿ ಉತ್ತರ ಪ್ರದೇಶದಿಂದ ಇಲ್ಲಿಗೆ ಬಂದಿದ್ದೇನೆ. ಸಾವಿರಾರು ವರ್ಷಗಳಿಂದ ಕರ್ನಾಟಕ ಹಾಗೂ ಉತ್ತರ ಪ್ರದೇಶಕ್ಕೆ ಅವಿನ ಭಾವ ಸಂಬಂಧವಿದೆ. ನನ್ನ ಹೃದಯದಿಂದ ನಿಮಗೆ ಮನವಿ ಮಾಡುತ್ತಿದ್ದೇನೆ. ಒಂದೇ ಭಾರತ ಶ್ರೇಷ್ಠ ಭಾರತ ನಮ್ಮ ಕಲ್ಪನೆ. ಕಾಂಗ್ರೆಸ್ ನವರಿಗೆ ಶ್ರೇಷ್ಠ ಭಾರತ ಇಷ್ಟ ಇಲ್ಲ. ನಾವು ಪಿಎಫ್‌ಐಯನ್ನು ಬ್ಯಾನ್ ಮಾಡಿದ್ದೇವೆ. ಆದರೆ ಹನುಮಾನ್ ಪೂಜಿಸುವ ಭಜರಂಗದಳ ಬ್ಯಾನ್ ಮಾಡುವ ಮಾತು ಕಾಂಗ್ರೆಸ್ ಆಡುತ್ತಿದೆ. ಆದರೆ ಈ ಮಾತುಗಳನ್ನು ಇಂದು ಸಮಾಜ ಸ್ವೀಕಾರ ಮಾಡುವುದಿಲ್ಲ ಎಂದರು.

ಮರ್ಯಾದ ಪುರುಷ ರಾಮನ ಊರಿಂದ ಬಂದಿದ್ದೇನೆ. ಕರ್ನಾಟಕ ಆಂಜನೇಯನ ಪುಣ್ಯ ಭೂಮಿ. ಭಜರಂಗದಳ ಬ್ಯಾನ್ ಮಾಡುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ. ಯಾರಿಂದಲೂ ಭಜರಂಗದಳವನ್ನು ಬ್ಯಾನ್ ಮಾಡಲು ಸಾಧ್ಯವಿಲ್ಲ ಬಜರಂಗಬಲಿ ಮಹಾಪುರುಷ ಎಂದ ಯೋಗಿ ಆದಿತ್ಯನಾಥ್ ಎಲ್ಲರೂ ನನ್ನ ಜೊತೆ ಜೈಕಾರ ಹಾಕಿ ಎಂದು ಹರ ಹರ ಮಹದೇವ್, ಜೈ ಭಜರಂಗಬಲಿ, ಜೈ ಭಜರಂಗಬಲಿ ಎಂದು ಜೈಕಾರ ಹಾಕಿದ್ದಾರೆ.
ಭಾರತ ಬಹಳ ಬಲಿಷ್ಠವಾಗಿ ಬೆಳೆದಿದೆ. ಭಾರತ ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ನಡೆದಿದೆ. ಅದು ಮೋದಿ ಇಂದ ಮಾತ್ರ ಸಾಧ್ಯವಾಗಿದೆ. ಕರ್ನಾಟಕ ದಲ್ಲಿ ಬಿಜೆಪಿ ಸರ್ಕಾರದ ಅವಶ್ಯಕತೆ ಇದೆ. ಮೋದಿಜಿ ಕ್ಯಾಪ್ಟನ್ ನೇತೃತ್ವದಲ್ಲಿ ಭಾರತ ಮುನ್ನುಗುತ್ತಿದೆ. ಕೊರೊನಾ ಸಮಯದಲ್ಲಿ ಡಬಲ್ ಇಂಜಿನ್ ಸರ್ಕಾರ ಜನರ ಜೊತೆ ನಿಂತಿದೆ. 120 ಕೋಟಿ ವ್ಯಾಕ್ಸಿನ್ ಉಚಿತ ನೀಡಿದ್ದೇವೆ. ಕಾಂಗ್ರೆಸ್ ಜೆಡಿಎಸ್ ಕರ್ನಾಟಕಕ್ಕೆ ಏನು ಮಾಡಿದೆ. ರಾಜ್ಯದಲ್ಲಿ ಆರಾಜಕತೆ ಸೃಷ್ಟಿ ಮಾಡಿವೆ. ಯಡಿಯೂರಪ್ಪ ಮಾರ್ಗದರ್ಶನ ಬೊಮ್ಮಾಯಿ ನೇತೃತ್ವದಲ್ಲಿ ಸರ್ಕಾರ ಅಚ್ಚು ಕಟ್ಟಾಗಿ ನಡೆದಿದೆ. ಇದು ಡಬಲ್ ಇಂಜಿನ್ ಸರ್ಕಾರ ಇರುವುದರಿಂದ ಅಭಿವೃದ್ಧಿ ಸಾಧ್ಯವಾಗಿದೆ ಎಂದರು.
ಈಗ ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು. ಕರ್ನಾಟಕ ಹಾಗೂ ಉತ್ತರ ಪ್ರದೇಶಕ್ಕೆ ಅವಿನಾಭಾವ ಸಂಬಂಧವಿದೆ. ಜನವರಿಯಲ್ಲಿ ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆಯಾಗಲಿದೆ. ಪ್ರಧಾನಿ ಮೋದಿ ಈ ಕಾರ್ಯಕ್ರಮ ನೆರವೇರಿಸಲಿದ್ದಾರೆ. ನಾನು ಭಜರಂಗ ಬಲಿ ಹಾಗೂ ಕರ್ನಾಟಕದ ಜನತೆಯನ್ನು ಸ್ವಾಗತ ಮಾಡುತ್ತಿದ್ದೇನೆ ಎಂದು ಹೇಳಿದರು.
ಶೃಂಗೇರಿ ಕ್ಷೇತ್ರ ಒಂದು ಪಾವನವಾದ ಸ್ಥಳ. ಅನೇಕ ದೇವಾಲಯಗಳನ್ನು ಹೊಂದಿರುವ ಮಹತ್ವಪೂರ್ಣ ಜಿಲ್ಲೆ ಇದು. ಎಲ್ಲರೂ ಶೃಂಗೇರಿ ಕ್ಷೇತ್ರ ಅಭ್ಯರ್ಥಿ ಜೀವರಾಜ್ ಬೆಂಬಲಿಸಬೇಕು. ಜೀವರಾಜ್‌ಗೆ ಬಾರಿ ಮತದಿಂದ ಗೆಲ್ಲಿಸಲು ನಾನು ಇಲ್ಲಿಗೆ ಬಂದಿದ್ದೇನೆ. ಬಸವರಾಜ್ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಕರ್ನಾಟಕದಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಕರ್ನಾಟಕದ ಜನತೆ ಯಾವುದಕ್ಕೂ ಯೋಚನೆ ಮಾಡಬಾರದು ಎಂದರು.












Click it and Unblock the Notifications