ಚಿಕ್ಕಮಗಳೂರು; ಗೃಹಿಣಿ ಸಾವು, ವಿಷದ ಇಂಜೆಕ್ಷನ್ ನೀಡಿ ಕೊಲೆ ಆರೋಪ
ಚಿಕ್ಕಮಗಳೂರು, ಡಿಸೆಂಬರ್ 12; ಮನೆಯಲ್ಲಿದ್ದ ಗೃಹಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೂಡಿಗೆರೆಯಲ್ಲಿ ನಡೆದಿದೆ. ಪತಿ ವಿಷದ ಇಂಜೆಕ್ಷನ್ ನೀಡಿ ಹತ್ಯೆ ಮಾಡಿದ್ದಾರೆ ಎಂದು ಗೃಹಿಣಿ ಕುಟುಂಬದವರು ಆರೋಪ ಮಾಡುತ್ತಿದ್ದಾರೆ. ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾವನ್ನಪ್ಪಿರುವ ಮಹಿಳೆಯನ್ನು 31 ವರ್ಷದ ಶ್ವೇತಾ ಎಂದು ಗುರುತಿಸಲಾಗಿದೆ. ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದ ಮನೆಯಲ್ಲಿ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಪತಿ ದರ್ಶನ್ ಜೊತೆ ಶ್ವೇತಾ ವಾಸವಾಗಿದ್ದರು.

ಲ್ಯಾಬ್ ಟೆಕ್ನಿಷಿಯನ್ ಆಗಿದ್ದ ದರ್ಶನ್ ನಾಲ್ಕು ದಿನಗಳ ಹಿಂದೆ ಪತ್ನಿ ಜೊತೆ ಆಗಮಿಸಿದ್ದರು. ಮನೆಯಲ್ಲಿಯೇ ಶ್ವೇತಾ ಸಾವನ್ನಪ್ಪಿದ್ದು, ತರಾತುರಿಯಲ್ಲಿ ಅಂತ್ಯಕ್ರಿಯೆಗೆ ದರ್ಶನ್ ಕುಟುಂಬದವರು ಸಿದ್ದತೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.
ಹಾರ್ಟ್ ಅಟ್ಯಾಕ್ ಎಂದು ಹೇಳಿಕೆ; ಹೃದಯಾಘಾತದಿಂದ ಶ್ವೇತಾ ಸಾವನ್ನಪ್ಪಿದ್ದಾಳೆ ಎಂದು ಅವರ ಕುಟುಂಬದವರಿಗೆ ಮಾಹಿತಿ ನೀಡಲಾಗಿತ್ತು. ಅಂತ್ಯಕ್ರಿಯೆಗೆ ಸಿದ್ಧವಾಗಿದ್ದಾಗ ಶ್ವೇತಾ ಕುಟುಂಬದವರು ತಡೆದು ಶವವನ್ನು ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಿದರು.
ಶ್ವೇತಾಗೆ ವಿಷದ ಇಂಜೆಕ್ಷನ್ ಚುಚ್ಚಿ ಕೊಲೆ ಮಾಡಿರುವ ಆರೋಪವನ್ನು ಮಾಡಲಾಗಿದೆ. ಶ್ವೇತಾ ಕೈಯಲ್ಲಿ ಇಂಜೆಕ್ಷನ್ ನೀಡಿರುವ ಗುರುತು ಸಹ ಪತ್ತೆಯಾಗಿದೆ. ದರ್ಶನ್ ಮತ್ತು ಶ್ವೇತಾ ಮೂರು ವರ್ಷದ ಹಿಂದೆ ವಿವಾಹವಾಗಿದ್ದರು.
ಶ್ವೇತಾ ದರ್ಶನ್ ವಿರುದ್ಧ ಅನೈತಿಕ ಸಂಬಂಧದ ಆರೋಪ ಮಾಡಿದ್ದರು. ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಕಾರಣಕ್ಕೆ ಪತ್ನಿಗೆ ಇಂಜೆಕ್ಷನ್ ನೀಡಿ ಕೊಲೆ ಮಾಡಿರುವ ಆರೋಪವನ್ನು ಮಾಡಲಾಗಿದೆ. ಗೋಣಿಬೀಡು ಠಾಣೆಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಕೈಗೊಂಡಿದ್ದಾರೆ.
ಶ್ವೇತಾ ಸಾವಿಗೂ ಮುನ್ನ ಮಾತನಾಡಿದ ಆಡಿಯೋ ವೈರಲ್ ಆಗಿದೆ. ಪತಿ ಸಹೋದ್ಯೋಗಿಯನ್ನು ಲವ್ ಮಾಡುತ್ತಿದ್ದರು. ಶ್ವೇತಾ ಪತಿಯ ಸಹೋದ್ಯೋಗಿ ಜೊತೆ ಮಾತನಾಡಿರುವ ಆಡಿಯೋ ಪೊಲೀಸರಿಗೆ ಸಿಕ್ಕಿದೆ.
ದರ್ಶನ್ ಪೊಲೀಸ್ ವಶಕ್ಕೆ; ಶ್ವೇತಾ ಸಾವಿನ ಪ್ರಕರಣದಲ್ಲಿ ಪತಿ ದರ್ಶನ್‌ರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಶ್ವೇತಾ ಪತಿ ಮೇಲೆ ಕೊಲೆ ಆರೋಪ ಕೇಳಿ ಬಂದಿದೆ. ಆದ್ದರಿಂದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.
ಸಾವಿನ ತನಿಖೆ ಕೈಗೊಂಡಿರುವ ಗೋಣಿಬೀಡು ಪೊಲೀಸರು ದರ್ಶನ್‌ರನ್ನು ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications