ಕಾಫಿನಾಡಿನಲ್ಲಿ ಮಳೆ ಅವಾಂತರ: ವೃದ್ಧೆ ಸಾವು, ತಡೆಗೋಡೆ ಕುಸಿತ, ಧರೆಗುರುಳಿದ ಮರಗಳು
ಚಿಕ್ಕಮಗಳೂರು, ಜುಲೈ 19: ಕಳೆದ ಒಂದು ವಾರದಿಂದ ಬಿಡುವು ಕೊಟ್ಟಿದ್ದ ಮಳೆ, ಇಂದು ಕಾಫಿನಾಡು ಚಿಕ್ಕಮಗಳೂರಿನಲ್ಲಿ ಬಿಡುವಿಲ್ಲದೆ ಅಬ್ಬರಿಸುತ್ತಿದೆ. ನಿರಂತರ ಮಳೆಯಿಂದಾಗಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೊರನಾಡು ಹಾಗೂ ಕೊಟ್ಟಿಗೆಹಾರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಮರವೊಂದು ಬಿದ್ದು ಕೆಲ ಗಂಟೆಗಳ ಕಾಲ ಸಂಪರ್ಕ ಅಸ್ತವ್ಯಸ್ತವಾಗಿತ್ತು.
ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಮರ ತೆರವು ಕಾರ್ಯಾಚರಣೆ ಬಳಿಕ ವಾಹನ ಸವಾರರು ನಿಟ್ಟುಸಿರು ಬಿಡುವಂತಾಗಿದೆ. ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡ ಹಾಗೂ ಸ್ಥಳೀಯರ ನೆರವಿನಿಂದ ರಸ್ತೆಯಲ್ಲಿ ಬಿದ್ದಿದ್ದ ಮರ ತೆರವು ಕಾರ್ಯಾಚರಣೆ ನಡೆದಿದ್ದು, ಧಾರಾಕಾರ ಮಳೆಯ ನಡುವೆಯೂ ವಿಪತ್ತು ನಿರ್ವಹಣಾ ತಂಡದ ಕಾರ್ಯಾಚರಣೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಳಗ್ಗೆಯಿಂದಲೂ ಭಾರಿ ಗಾಳಿ ಮಳೆಯೊಂದಿಗೆ ಧಾರಾಕಾರ ಮಳೆ ಸುರಿಯುತ್ತಿದ್ದು ನಾಳೆ ಮತ್ತಷ್ಟು ಮಳೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಎಚ್ಚರಿಸಿದೆ.
ಧಾರಾಕಾರ ಮಳೆಗೆ ಕುಸಿದು ಬಿದ್ದ ತಡೆಗೋಡೆ
ಚಿಕ್ಕಮಗಳೂರು ಜಿಲ್ಲೆ ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಮಳೆಯಿಂದಾಗಿ ಮನೆಯ ಮುಂದೆ ನಿರ್ಮಿಸಿದ್ದ ಬೃಹತ್ ತಡೆಗೋಡೆ ಏಕಾಏಕಿ ಕುಸಿದು ಬಿದ್ದಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನ ಓಣಿಗಂಡಿ ಗ್ರಾಮದಲ್ಲಿ ನಡೆದಿದೆ. ತಡೆಗೋಡೆ ಕುಸಿತದಿಂದ ಸ್ಥಳೀಯರಲ್ಲಿ ಆತಂಕ ಉಂಟಾಗಿದೆ.
ಕಳೆದ ವರ್ಷ ಮನೆಯ ಅಡಿಪಾಯಕ್ಕೆ ಅಡ್ಡಲಾಗಿ ನಿರ್ಮಿಸಿದ್ದ ತಡೆಗೋಡೆ ಇದೀಗ ಮಳೆ ಹೆಚ್ಚಾದ ಪರಿಣಾಮ ಕುಸಿಯಲು ಆರಂಭಿಸಿದೆ. ಗ್ರಾಮದ ಭಾಸ್ಕರ್ ಡೋಂಗ್ರೆ ಎಂಬುವರಿಗೆ ಸೇರಿದ ಮನೆಗೆ ಹಾನಿಯಾಗಿದ್ದು, ಕ್ಷಣ ಕ್ಷಣಕ್ಕೂ ಕುಸಿವ ಭೀತಿ ಎದುರಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು ಕ್ರಮಕ್ಕೆ ಮುಂದಾಗಿದ್ದಾರೆ. ಇನ್ನು ಸೂಕ್ತ ಪರಿಹಾರ ನೀಡುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

ಧಾರಾಕಾರ ಮಳೆಗೆ ಜಿಲ್ಲೆಯಲ್ಲಿ ವೃದ್ಧೆ ಬಲಿ
ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಭತ್ತದ ಗದ್ದೆಗೆ ತೆರಳುವಾಗ ಕಾಲು ಜಾರಿ ನದಿಗೆ ಬಿದ್ದು ವೃದ್ಧೆ ಸಾವನಪ್ಪಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ದಾರದಹಳ್ಳಿ ಗ್ರಾಮದಲ್ಲಿ ನಡೆದಿದೆ. ಹೇಮಾವತಿ ನದಿ ರಭಸವಾಗಿ ಹರಿಯುತ್ತಿದ್ದ ಪರಿಣಾಮ ವೃದ್ಧೆ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ. ದಾರದಹಳ್ಳಿ ಗ್ರಾಮದ 61 ವರ್ಷದ ದೇವಮ್ಮ ಮೃತರು ಎಂದು ಗುರುತಿಸಲಾಗಿದೆ.
ಇಂದು ಬೆಳಗ್ಗೆ ಗದ್ದೆಗೆ ತೆರಳುವಾಗ ನದಿಗೆ ಕಾಲು ಜಾರಿ ಬಿದಿದ್ದ ವೃದ್ಧೆ, ಧಾರಾಕಾರ ಮಳೆಯಿಂದ ಹೇಮಾವತಿ ನದಿ ತುಂಬಿ ಹರಿಯುತ್ತಿದೆ. ಈ ಸಂಬಂಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಲಿಸುತ್ತಿದ್ದ ಲಾರಿ ಮೇಲೆ ಬಿದ್ದ ಮರ, ಚಾಲಕ ಜಸ್ಟ್ ಮಿಸ್
ಭಾರೀ ಮಳೆಯಿಂದಾಗಿ ಚಲಿಸುತ್ತಿದ್ದ ಲಾರಿ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಚಾಲಕ ಸ್ವಲ್ಪದರಲ್ಲೇ ಪಾರಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಕೆರೆಕಟ್ಟೆ ಚೆಕ್ ಪೋಸ್ಟ್ ಬಳಿ ನಡೆದಿದೆ.
ಭಾರೀ ಗಾಳಿ ಮಳೆಗೆ ಮರ ಮುರಿದುಬಿದ್ದಿದೆ. ಮರದ ಜೊತೆ ರಸ್ತೆ ಬದಿಯ ವಿದ್ಯುತ್ ಕಂಬಗಳು ಲಾರಿಯ ಮುಂಭಾಗಕ್ಕೆ ಬಿದ್ದಿದ್ದು ಲಾರಿ ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಕ್ಷಣವೇ ವಿದ್ಯುತ್ ಕಂಬದಿಂದ ತಂತಿಗಳು ಬೇರ್ಪಟ್ಟ ಹಿನ್ನೆಲೆಯಲ್ಲಿ ಆಗಬಹುದಾದ ಅನಾಹುತ ಸ್ವಲ್ಪದರಲ್ಲೇ ತಪ್ಪಿದೆ.
ವಿಷಯ ತಿಳಿದ ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ತೆರಳಿ ವಿದ್ಯುತ್ ಕಂಬಗಳನ್ನು ರಸ್ತೆಯಿಂದ ತೆರವುಗೊಳಿಸಿದ್ದಾರೆ. ನಿರಂತರವಾಗಿ ಈ ಭಾಗದಲ್ಲಿ ರಭಸವಾಗಿ ಬೀಸುತ್ತಿರುವ ಗಾಳಿಯೊಂದಿಗೆ ಮಳೆ ಸುರಿಯುತ್ತಿರುವ ಪರಿಣಾಮ ಈ ಭಾಗದಲ್ಲಿ ಸಂಚರಿಸುವ ವಾಹನಗಳು ಪದೇಪದೇ ಇಂತಹ ಅವಘಡಗಳಿಗೆ ಕಾರಣವಾಗುತ್ತಿದೆ. ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.












Click it and Unblock the Notifications